ಪ್ಯಾರಿಸ್: ಫ್ರೆಂಚ್ ಓಪನ್ ವನಿತಾ ಸಿಂಗಲ್ಸ್ ಚಾಂಪಿಯನ್, ಪೋಲೆಂಡ್‌ನ ಐಗಾ ಸ್ವಿಯಾಟೆಕ್ ಈಗ ಮಾಜಿ ಆಗಿದ್ದಾರೆ. ಅವರ ಗೆಲುವಿನ ಓಟ ಕ್ವಾರ್ಟರ್ ಫೈನಲ್‌ಗೆ ಕೊನೆಗೊಂಡಿದೆ. ಗ್ರೀಸ್‌ನ ಮರಿಯಾ ಸಕ್ಕರಿ ಸಿಹಿಯಾದ ಗೆಲುವಿನೊಂದಿಗೆ ಮೊದಲ ಸಲ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್‌ಗೆ ಲಗ್ಗೆ ಇರಿಸಿದ್ದಾರೆ.
ಬುಧವಾರದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಮರಿಯಾ ಸಕ್ಕರಿ 6-4, 6-4 ನೇರ ಸೆಟ್‌ಗಳಿಂದ ಸ್ವಿಯಾಟೆಕ್‌ಗೆ ಸೋಲುಣಿಸಿದರು. ದ್ವಿತೀಯ ಸೆಟ್ ವೇಳೆ 0-2 ಹಿನ್ನಡೆಯಲ್ಲಿದ್ದಾಗ ಸ್ವಿಯಾಟೆಕ್ ಮೆಡಿಕಲ್ ಟೈಮ್‌ಔಟ್ ಪಡೆದರು. ಅನಂತರವೂ ಚೇತರಿಕೆಯ ಪ್ರದರ್ಶನ ನೀಡಲಿಲ್ಲ.
ಇವರ ಮುಂದಿನ ಎದುರಾಳಿ ಜೆಕ್ ಗಣರಾಜ್ಯದ ಬಾಬೊìರಾ ಕ್ರೆಜಿಕೋವಾ. 33ನೇ ಶ್ರೇಯಾಂಕದ ಕ್ರೆಜಿಕೋವಾ ಅಮೆರಿಕದ ಟೀನೇಜರ್ ಕೊಕೊ ಗಾಫ್ ಅವರಿಗೆ ಮನೆಯ ಹಾದಿ ತೋರಿಸಿದರು.
ಸಕ್ಕರಿ-ಕ್ರೆಜಿಕೋವಾ ಇಬ್ಬರಿಗೂ ಇದು ಮೊದಲ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ಆಗಿರುವುದು ವಿಶೇಷ. ಇನ್ನೊಂದು ಪಂದ್ಯದಲ್ಲಿ ಎದುರಾಗಲಿರುವ ತಮಾರ ಜಿದಾನ್ಸೆಕ್, ಅನಾಸ್ತಾಸಿಯಾ ಪಾವುÉಚೆಂಕೋವಾ ಅವರಿಗೂ ಇದು ಪ್ರಥಮ ಸೆಮಿಫೈನಲ್ ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಫ್ರೆಂಚ್ ಓಪನ್ ವನಿತಾ ಸಿಂಗಲ್ಸ್‌ನಲ್ಲಿ ನೂತನ ಚಾಂಪಿಯನ್ ಒಬ್ಬರ ಉದಯವಾಗಲಿದೆ. ಹಾಗೆಯೇ ರೊಲ್ಯಾಂಡ್ ಗ್ಯಾರೋಸ್ ಇತಿಹಾಸದಲ್ಲಿ 5ನೇ ಸಲ ಟಾಪ್ ಹತ್ತರ ಯಾದಿಯ ಹೊರಗಿರುವ ಆಟಗಾರ್ತಿಯೊಬ್ಬರಿಗೆ ಕಪ್ ಎತ್ತುವ ಅದೃಷ್ಟ ಒಲಿಯಲಿದೆ.
ಗ್ರ್ಯಾನ್‌ಸ್ಲಾಮ್ ಓಪನ್ ಇತಿಹಾಸದಲ್ಲಿ ನಾಲ್ಕೂ ಮಂದಿ ಆಟಗಾರ್ತಿಯರು ಮೊದಲ ಸಲ ಸೆಮಿಫೈನಲ್ ಕಾಣುತ್ತಿರುವ ಕೇವಲ ಎರಡನೇ ನಿದರ್ಶನ ಇದಾಗಿದೆ. 1978ರ ಆಸ್ಟ್ರೇಲಿಯ ಓಪನ್ ಮೊದಲ ಉದಾಹರಣೆಯಾಗಿದೆ.
ಕ್ರೆಜಿಕೋವಾ ಗೆಲುವು
ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಜೆಕ್ ಗಣರಾಜ್ಯದ ಶ್ರೇಯಾಂಕ ರಹಿತ ಆಟಗಾರ್ತಿ ಬಾಬೊìರಾ ಕ್ರೆಜಿಕೋವಾ ಅಮೆರಿಕದ 17ರ ಹರೆಯದ ಕೊಕೊ ಗಾಫ್ ಅವರ ಓಟವನ್ನು ಕೊನೆಗೊಳಿಸಿದರು. ಗೆಲುವಿನ ಅಂತರ 7-6 (8-6), 6-3.
1981ರ ಬಳಿಕ ಯಾವುದೇ ಜೆಕ್ ಆಟಗಾರ್ತಿ ಫ್ರೆಂಚ್ ಓಪನ್ ಕಿರೀಟ ಧರಿಸಿಲ್ಲ. ಅಂದು ಹಾನಾ ಮಂಡ್ಲಿಕೋವಾ ಕಪ್ ಎತ್ತಿದ್ದರು. ಕ್ರೆಜಿಕೋವಾ 4 ದಶಗಳ ಬಳಿಕ ಇತಿಹಾಸ ನಿರ್ಮಿಸಬಹುದೇ ಎಂಬುದು ಜೆಕ್ ಅಭಿಮಾನಿಗಳ ಕುತೂಹಲ.