Advertisement

ನಡಾಲ್ : ಟೆನ್ನಿಸ್ ಅಂಗಳದ ಅಪ್ಪಟ ಚಿನ್ನ

09:15 AM Jun 16, 2019 | Team Udayavani |

ಟೆನಿಸ್‌ ಅಭಿಮಾನಿಗಳ ಆರಾಧ್ಯ ದೈವ. ಎದುರಾಳಿಗಳಿಗೆ ಕಬ್ಬಿಣದ ಕಡಲೆ, ಹೋರಾಟಕ್ಕೆ ನಿಂತರೆ ಎಂತಹ ಸವಾಲಿಗೂ ಎದೆಕೊಡಬಲ್ಲ ವೀರ ,ಸ್ಪೇನ್‌ನ ಈ ಶೂರನೇ ರಫಾಯೆಲ್ ನಡಾಲ್.

Advertisement

ಹೌದು, ಈ ಹೆಸರಲ್ಲಿನಲ್ಲೇ ಇದೆ ಒಂದು ರೀತಿಯ ಗತ್ತು ಗಮ್ಮತ್ತು. ನಡಾಲ್ ಇದುವರೆಗೆ ಮುಟ್ಟಿದ್ದೆಲ್ಲ ಚಿನ್ನವಾಗಿದೆ. ಪ್ರಶಸ್ತಿ, ಹಣ, ಖ್ಯಾತಿ ಸರ್ವವೂ ಬೆನ್ನಟ್ಟಿಕೊಂಡು ಬಂದಿದೆ.

ಇಂದು ವಿಶ್ವಮಟ್ಟದಲ್ಲಿ ನಡಾಲ್ ದೊಡ್ಡ ತಾರಾ ಆಟಗಾರ. ಅವರಿಗೆ ಅವರು ಮಾತ್ರ ಸರಿಸಾಟಿಯಾಗಬಲ್ಲರು. 33 ವರ್ಷದ ನಡಾಲ್, ಇತ್ತೀಚೆಗೆ ಫ್ರೆಂಚ್ ಓಪನ್‌ ಟೆನಿಸ್‌ ಪ್ರಶಸ್ತಿ ಗೆದ್ದಿದ್ದಾರೆ. ಫೈನಲ್ನಲ್ಲಿ ಪ್ರಬಲ ಸ್ಪರ್ಧಿ ಡೊಮಿನಿಕ್‌ ಥೀಮ್‌ ಹೆಡೆಮುರಿ ಕಟ್ಟಿ 12ನೇ ಫ್ರೆಂಚ್ ಕಿರೀಟ ತನ್ನದಾಗಿಸಿಕೊಂಡರು. ಈ ಗೆಲುವಿನೊಂದಿಗೆ ನಡಾಲ್ ತಮ್ಮ ಖ್ಯಾತಿಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಿಕೊಂಡರಲ್ಲದೆ ವೃತ್ತಿ ಜೀವನದ ಒಟ್ಟಾರೆ 18ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಸೇರಿದಂತೆ ಹಲವಾರು ದಾಖಲೆ ಬರೆದಿದ್ದಾರೆ.

ಪ್ರತಿಭಾವಂತ ಟೆನಿಸಿಗ
ನಡಾಲ್ ವಿಶ್ವದಾದ್ಯಂತ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳ ಹೊಂದಿದ್ದಾರೆ. ಇವರಿಂದಾಗಿಯೇ ಸ್ಪೇನ್‌ಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮೆರುಗು ಬಂದಿತು ಎಂದರೆ ತಪ್ಪಾಗಲಾರದು. ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಎಂತಹ ಸಾಧನೆ ಬೇಕಾದರೂ ಮಾಡಬಹುದು, ವಿಶ್ವ ಭೂಪಟದಲ್ಲಿ ತನ್ನ ಹೆಸರನ್ನು ಅಜರಾಮರವಾಗಿ ಉಳಿಯುವಂತೆ ಮಾಡಬಹುದು. ಯಶಸ್ಸಿಗೆ ಬೇಕಿರುವುದು ಕೇವಲ ಪ್ರತಿಭೆ ಎಂಬ ಅರ್ಹತೆಯ ಮಾನದಂಡ ಎನ್ನುವುದನ್ನು ನಡಾಲ್ ನಿರೂಪಿಸಿ ತೋರಿಸಿದ್ದಾರೆ. ಅಕ್ಷರಶಃ ಹಲವರಿಗೆ ಮಾದರಿಯಾಗಿ ನಿಂತಿದ್ದಾರೆ.

ಮೊದಲ ಗ್ರ್ಯಾನ್‌ಸ್ಲಾಮ್‌ ಜಯ
2001 2004 ರ ಸಮಯ. ಆಗಿನ್ನು ನಡಾಲ್ 15 ವರ್ಷದ ಹುಡುಗ. ಕಿರಿಯರ ಟೆನಿಸ್‌ ಕೂಟದಲ್ಲಿ ಅದಾಗಲೇ ಹತ್ತು ಹಲವು ಪ್ರಶಸ್ತಿ ಗೆದ್ದು ಸುದ್ದಿಯಾಗಿದ್ದರು. ವೃತ್ತಿಪರ ಕೂಟಕ್ಕೆ ಅದಾಗಲೇ ಕಾಲಿರಿಸಿ ಆಗಿತ್ತು. 2005 ನಡಾಲ್ ಪಾಲಿನ ಅವಿಸ್ಮರಣೀಯ ವರ್ಷ. ನಡಾಲ್ ಎಂಬ ಹೆಸರು ವಿಶ್ವ ಮಟ್ಟದಲ್ಲಿ ಮೊದಲ ಬಾರಿಗೆ ಸದ್ದು ಮಾಡಿದ ಪರ್ವಕಾಲ. 2005ರ ಆಸ್ಟ್ರೇಲಿಯನ್‌ ಓಪನ್‌ ಕೂಟದಲ್ಲಿ ನಡಾಲ್ ಪಾಲ್ಗೊಂಡಿದ್ದರು. ಆದರೆ ಪ್ರಶಸ್ತಿ ಗೆಲ್ಲಲಾಗದೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ ಫ್ರೆಂಚ್ ಓಪನ್‌ ಕೂಟದಲ್ಲಿ ಗೆದ್ದು ಮೊದಲ ಸಲ ಟ್ರೋಫಿ ಜಯಿಸಿದರು. ವೃತ್ತಿ ಜೀವನದ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಎನ್ನುವುದು ವಿಶೇಷ.

Advertisement

ಸಾಲು.. ಸಾಲು.. ಫ್ರೆಂಚ್ ಪ್ರಶಸ್ತಿ
ಒಟ್ಟು ಸಿಂಗಲ್ಸ್ ಗ್ರ್ಯಾನ್‌ಸ್ಲಾಮ್‌ ಕೂಟಗಳಲ್ಲಿಯೇ ನಡಾಲ್ ಅತ್ಯಂತ ಹೆಚ್ಚು ಪ್ರಶಸ್ತಿ ಗೆದ್ದಿರುವುದು ಫ್ರೆಂಚ್ ಓಪನ್‌ನಲ್ಲಿ. 2005ರಿಂದ 2008ರ ತನಕ ಸತತ ನಾಲ್ಕು ಪ್ರಶಸ್ತಿಯನ್ನು, ಆ ಬಳಿಕ 2010ರಿಂದ 2014ರ ತನಕ ಸತತ 5 ವರ್ಷ ಫ್ರೆಂಚ್ ಟ್ರೋಫಿ ಸತತವಾಗಿ ಗೆಲ್ಲುವ ಮೂಲಕ ಏಕಮೇವಾಧಿಪತ್ಯ ಸ್ಥಾಪಿಸಿದ್ದರು. ಅಲ್ಲಿಗೆ ಒಟ್ಟಾರೆ 9 ಸಲ ಫ್ರೆಂಚ್ ಟ್ರೋಫಿಯನ್ನು ನಡಾಲ್ ಗೆದ್ದಿದ್ದು ವಿಶೇಷ. ಇದೀಗ 2017, 2018 ಹಾಗೂ 2019ರಲ್ಲೂ ನಡಾಲ್ ಫ್ರೆಂಚ್ ಟ್ರೋಫಿ ಮೇಲೆ ಮುದ್ರೆ ಒತ್ತಿದ್ದಾರೆ. ಒಟ್ಟಾರೆ 12ನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಉಳಿದಂತೆ 2009ರಲ್ಲಿ ಆಸ್ಟ್ರೇಲಿಯನ್‌ ಓಪನ್‌, 2008 ಮತ್ತು 2010ರಲ್ಲಿ ವಿಂಬಲ್ಡನ್‌ ಹಾಗೂ 2010, 2013 ಹಾಗೂ 2017ರಲ್ಲಿ ಯುಎಸ್‌ ಓಪನ್‌ ಪ್ರಶಸ್ತಿ ಗೆದ್ದಿದ್ದಾರೆ.

ಒಲಿಂಪಿಕ್ಸ್‌ನಲ್ಲೂ ನಡಾಲ್ ಚಿನ್ನದ ಯುಗ
ನಡಾಲ್ ಗ್ರ್ಯಾನ್‌ ಸ್ಲಾಮ್‌ ಜತೆಗೆ ತಮ್ಮ ದೇಶವನ್ನು ಒಲಿಂಪಿಕ್ಸ್‌ನಲ್ಲೂ ಪ್ರತಿನಿಧಿಸಿದ್ದಾರೆ. 2008ರಲ್ಲಿ ಬೀಜಿಂಗ್‌ ಒಲಿಂಪಿಕ್ಸ್‌ ಕೂಟದ ಸಿಂಗಲ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. 2016ರಲ್ಲಿ ರಿಯೋ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ನ ಡಬಲ್ಸ್ ವಿಭಾಗದಲ್ಲಿ ಪಾಲ್ಗೊಂಡು ಚಿನ್ನದ ಪದಕ ಪಡೆದುಕೊಂಡಿದ್ದರು.

ಗಾಯದ ಸಮಸ್ಯೆ, ಶ್ರೇಯಾಂಕ ಕುಸಿತ
ನಡಾಲ್ ವಿಶ್ವ ಟೆನಿಸ್‌ ಲೋಕದಲ್ಲಿ ಬಿರುಗಾಳಿ ಅಬ್ಬರ ನಡೆಸುತ್ತಿದ್ದರೆ ಮತ್ತೂಂದು ತುದಿಯಲ್ಲಿ ಗಾಯದ ಸಮಸ್ಯೆ ಅವರನ್ನು ಇನ್ನಿಲ್ಲದಂತೆ ಕಾಡಲು ಶುರು ಮಾಡಿತು. 2014ರಲ್ಲಿ ಫ್ರೆಂಚ್ ಓಪನ್‌ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಆಸ್ಟ್ರೇಲಿಯನ್‌ ಟೆನಿಸ್‌ ಕೂಟ ನಡೆಯಿತು. ಇಲ್ಲಿ ನಡಾಲ್ ಕ್ವಾರ್ಟರ್‌ ಫೈನಲ್ನಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ವಿರುದ್ಧದ ಸೆಣಸಾಟದ ವೇಳೆ ಗಾಯಗೊಂಡರು. ಚೇತರಿಸಿಕೊಳ್ಳಲು ಸಾಧ್ಯವಾಗದೇ ಕೂಟದಿಂದ ಹೊರಹೋದರು. ಮೊಣಕಾಲು ಗಾಯಕ್ಕೆ ತುತ್ತಾದಾಗ ವೈದ್ಯರು 2 ವಾರ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದರು. 2015ರಲ್ಲೂ ನಡಾಲ್ ಗಾಯಗಳ ಸುಳಿಯಿಂದ ಹೊರಬರಲಿಲ್ಲ. ಹಲವಾರು ಪಂದ್ಯಗಳನ್ನು ಕಳೆದುಕೊಂಡರು. ಇದರಿಂದಾಗಿ ವಿಶ್ವ ಮಟ್ಟದಲ್ಲಿ ಶ್ರೇಯಾಂಕದಲ್ಲಿ ಕುಸಿತ ಅನುಭವಿಸಿದರು. ಹೀಗಿದ್ದರೂ ಚೇತರಿಸಿಕೊಂಡು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದರು. ಎಲ್ಲ ಸಮಸ್ಯೆ, ಸವಾಲುಗಳ ನಡುವೆಯೂ 2017ರಲ್ಲಿ ಫ್ರೆಂಚ್ ಓಪನ್‌ ಹಾಗೂ ಯುಎಸ್‌ ಓಪನ್‌ ಪ್ರಶಸ್ತಿ ಗೆದ್ದರು. ಜತೆಗೆ ವಿಶ್ವ ಶ್ರೇಯಾಂಕದಲ್ಲಿ ನಂಬರ್‌ 1 ತನಕ ಏರಿ ಸುದ್ದಿಯಾಗಿದ್ದರು.•

ಹೆಚ್ಚು ಗ್ರ್ಯಾನ್‌ಸ್ಲಾಮ್‌ ಗೆದ್ದವರು
ರೋಜರ್‌ ಫೆಡರರ್‌ (ಸ್ವಿಜರ್ಲೆಂಡ್‌) 20
ರಫಾಯೆಲ್ ನಡಾಲ್ (ಸ್ಪೇನ್‌) 18
ನೊವಾಕ್‌ ಜೊಕೊವಿಚ್ (ಸರ್ಬಿಯಾ) 15
ಪೀಟ್ ಸ್ಯಾಂಪ್ರಸ್‌(ಅಮೆರಿಕ) 14
ರಾಯ್‌ ಎಮೆರ್ಸನ್‌(ಆಸ್ಟ್ರೇಲಿಯ) 12

ವಿಶ್ವ ನಾಲ್ಕನೆ ಶ್ರೇಯಾಂಕಿತ ಡೋಮಿನಿಕ್‌ ಎಡವಿದ್ದೆಲ್ಲಿ?
ಗ್ರ್ಯಾನ್‌ಸ್ಲಾಮ್‌ ಕೂಟದ ಫೈನಲ್ಗೆ ಬಂದು ಆಸ್ಟ್ರಿಯದ ಡೋಮಿನಿಕ್‌ ಥೀಮ್‌ ಎಡವುತ್ತಿದ್ದಾರೆ. ಇದಕ್ಕೆ ಕಾರಣ ಅವರು ಫೈನಲ್ಗೆ ಬಂದಾಗ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿರುವುದಾಗಿದೆ. 2019 ಫ್ರೆಂಚ್ ಓಪನ್‌ ಸಿಂಗಲ್ಸ್ ಗ್ರ್ಯಾನ್‌ ಸ್ಲಾಮ್‌ ಕೂಟದಲ್ಲೂ ಅದೇ ನಡೆದಿದೆ. 2018ರಲ್ಲೂ ಡೊಮಿನಿಕ್‌ ಥೀಮ್‌ ಫ್ರೆಂಚ್ ಓಪನ್‌ ಕೂಟದ ಫೈನಲ್ ಪ್ರವೇಶಿಸಿದ್ದರು. ಆದರೆ ಅಲ್ಲಿ ಸೋಲುಂಡು ನಿರಾಸೆ ಅನುಭವಿಸಿದರು. ಉಳಿದಂತೆ ಆಸ್ಟ್ರೇಲಿಯನ್‌ ಓಪನ್‌ ಕೂಟದಲ್ಲಿ ಡೋಮಿನಿಕ್‌ ಥೀಮ್‌ 2017 ಹಾಗೂ 2018ರಲ್ಲಿ ನಾಲ್ಕನೇ ಸುತ್ತಿನ ತನಕ ಪ್ರವೇಶ ಪಡೆದಿದ್ದರು. 2017ರಲ್ಲಿ ವಿಂಬಲ್ಡನ್‌ನಲ್ಲೂ ನಾಲ್ಕನೇ ಸುತ್ತಿನ ತನಕ ಪ್ರವೇಶ ಪಡೆದಿದ್ದರು. ಯುಎಸ್‌ ಓಪನ್‌ ಕೂಟದಲ್ಲಿ 2018ರಲ್ಲಿ ಅರ್ಹತಾ ಸುತ್ತಿನ ತನಕ ಪ್ರವೇಶ ಪಡೆದಿದ್ದು ಅಷ್ಟೇ ಸಾಧನೆಯಾಗಿದೆ. ಕಿರಿಯರ ಹಾಗೂ ಹಿರಿಯರ ವಿಭಾಗ ಸೇರಿದಂತೆ ಒಟ್ಟಾರೆ 13 ಪ್ರಶಸ್ತಿ ಗೆದ್ದಿದ್ದಾರೆ. ವಿಶ್ವ ಶ್ರೇಯಾಂಕದಲ್ಲಿ ಗರಿಷ್ಠ ಎಂದರೆ ನಾಲ್ಕನೇ ಸ್ಥಾನಕ್ಕೆ ಏರಿರುವುದು. ಸದ್ಯ 4ನೇ ಶ್ರೇಯಾಂಕದಲ್ಲೇ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next