Advertisement

ಅಪಾಯದಲ್ಲಿದೆ ಅಭಿವ್ಯಕ್ತಿ ಸ್ವಾತಂತ್ರ್ಯ:ಡಾ|ಜಾಜಿ

12:00 PM Oct 09, 2017 | |

ರಾಯಚೂರು: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯ ಎದುರಾಗಿದ್ದು, ಮುಕ್ತವಾಗಿ ಮಾತನಾಡುವುದು ಕಷ್ಟ ಎನ್ನುವಂತಾಗಿದೆ. ಆದರೆ, ಅಂಥ ಸವಾಲುಗಳನ್ನು ಮೆಟ್ಟಿ ನಿಲ್ಲುವಂಥ ಸಾಹಿತ್ಯ ರಚಿಸುವುದು ಯುವ ಲೇಖಕರ ಹೊಣೆ ಎಂದು ಗಂಗಾವತಿ ಸರ್ಕಾರಿ ಪದವಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ| ಜಾಜಿ ದೇವೇಂದ್ರಪ್ಪ ಅಭಿಪ್ರಾಯಪಟ್ಟರು.

Advertisement

ನಗರದ ಪತ್ರಿಕಾ ಭವನದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ವೀರಹನುಮಾನ್‌ ವಿರಚಿತ ಗೊರವಂಕ ಹೈಕು ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಗುತ್ತಿರುವುದು ಕಳವಳಕಾರಿ ಸಂಗತಿ.

ಎಂ.ಎಂ.ಕಲಬುರಗಿ, ಪನ್ಸಾರೆ, ನರೇಂದ್ರ ದಾಬೋಲ್ಕರ್‌, ಗೌರಿ ಲಂಕೇಶರಂಥ ವಿಚಾರವಾದಿಗಳ ಹತ್ಯೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಡ್ಡಿದ ಸವಾಲಿನಂತಾಗಿದೆ. ಇದರಿಂದ ಯುವ ಲೇಖಕರು ಆತಂಕಕೊಳ್ಳಗಾಗಿದ್ದಾರೆ. ಆದರೆ, ದೇಶದಲ್ಲಿ ಅಕ್ಷರ ಕ್ರಾಂತಿಯಾಗಿರುವುದು ಬರವಣಿಗೆ ಮೂಲಕ ಎಂಬುದನ್ನು ಯಾರು ಮರೆಯಬಾರದು ಎಂದರು.

ಎಲ್ಲಿಯವರೆಗೂ ಸಾಹಿತ್ಯಕ ಚಟುವಟಿಕೆ ಸಕ್ರಿಯವಾಗಿರುತ್ತದೋ ಅಲ್ಲಿವರೆಗೆ ಅಲ್ಲಿನ ಭಾಷೆಗೆ ಯಾವುದೇ ತೊಂದರೆಯಿಲ್ಲ. ಅದೇ ರೀತಿ ರಾಜ್ಯದಲ್ಲೂ ಕನ್ನಡ ಭಾಷೆ ಉಳಿವಿಗೆ ಯಾವುದೇ ಧಕ್ಕೆಯಿಲ್ಲ. ಕಥೆ, ಕವನ ಹಾಗೂ ಪುಸ್ತಕ ರಚಿಸುವ ಮುನ್ನ ವಿಷಯ ವಸ್ತುವಿನಷ್ಟೇ ಆದ್ಯತೆ ಶೀರ್ಷಿಕೆಗೂ ನೀಡಬೇಕು. ಕಥೆಯ ಸಾರಾಂಶ ಶೀರ್ಷಿಕೆ ಹಿಡಿದಿಡುವಂತಿರಬೇಕು ಎಂದರು.

ವೀರ ಹನುಮಾನ್‌ ಅವರ ಹೈಕು ಗೊರವಂಕ ಕೃತಿ ವಿಶೇಷ ವಿಷಯ ವಸ್ತು ಒಳಗೊಂಡಿದೆ. ಪರಿಸರಕ್ಕೆ ಪೂರಕ ಅಂಶಗಳು ಕೂಡಿವೆ. 18ನೇ ಶತಮಾನದಲ್ಲಿ ಸಾಹಿತ್ಯ, ಕಥೆ, ಕವನಗಳು ಪರಿಸರ ಪ್ರತಿಬಿಂಬಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕಿರುವುದು ಅನಿವಾರ್ಯ. ಕೃತಿಯಲ್ಲಿ ಅದಕ್ಕೆ ಪೂರಕ ಅಂಶಗಳೇ ಹೆಚ್ಚು ಕಾಣಿಸುತ್ತಿವೆ ಎಂದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಮಸ್ಕಿ ಮಾತನಾಡಿ, ವೀರಹನುಮಾನ್‌ ಅವರ ಗೊರವಂಕ ಕೃತಿಯಲ್ಲಿ ನಿಸರ್ಗ ಸಂರಕ್ಷಣೆ ಬಗ್ಗೆ ಸುಂದರವಾಗಿ ವರ್ಣಿಸಲಾಗಿದೆ. ಇದು ನಿಸರ್ಗಕ್ಕೆ ಅರ್ಪಿತ ಕೃತಿ ಎಂದು ಅಭಿಪ್ರಾಯಪಟ್ಟರು.

ಕಸಾಪ ಮಾಜಿ ಅಧ್ಯಕ್ಷ ಎಸ್‌.ಶರಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ವೀರಹನುಮಾನ್‌, ಈರಣ್ಣ ಬೆಂಗಾಲಿ, ಡಾ.ದಸ್ತಗಿರಿಸಾಬ್‌ ದಿನ್ನಿ, ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷ ಭೀಮನಗೌಡ ಇಟಗಿ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next