ಕಾಸರಗೋಡು: ಅಧಿಕಾರ ಉಳಿಸಿಕೊಳ್ಳಲು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಜಾರಿಗೊಳಿಸಿದ ತುರ್ತು ಪರಿಸ್ಥಿತಿಯ ಮೂಲಕ ದೇಶದ ಸ್ವಾತಂತ್ರ್ಯ ಮತ್ತು ಮಾನವ ಹಕ್ಕು ಧ್ವಂಸಗೈದಿದ್ದರು ಎಂದು ಕೇರಳ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ರಾಮನ್ ಪಿಳ್ಳೆ ಅವರು ಹೇಳಿದರು.
ಅಸೋಸಿಯೇಶನ್ ಆಫ್ ದಿ ಎಮರ್ಜೆನ್ಸಿ ವಿಕ್ಟಿಂಸ್ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಕಾಸರ ಗೋಡು ಮುನ್ಸಿಪಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ಆಯೋಜಿಸಿದ ತುರ್ತು ಪರಿಸ್ಥಿತಿ ಹೋರಾಟದ 42 ನೇ ವಾರ್ಷಿಕ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶಾದ್ಯಂತ ತುರ್ತುಪರಿಸ್ಥಿತಿ ಹೇರಿ ಇಂದಿಗೆ 42 ವರ್ಷ ಪೂರ್ತಿಯಾಗುತ್ತಿದೆ. ಅಂದಿನ ಕಾಲದಲ್ಲಿ ದೇಶದಾದ್ಯಂತ ಹೇರಿದ ಕರಾಳ ಶಾಸನಕ್ಕೆದುರಾಗಿ ಮಹಾತ್ಮಾ ಗಾಂಧೀಜಿಯವರ ತತ್ವದೊಂದಿಗೆ ಧೀರೋದ್ಧಾತ್ತವಾದ ಹೋರಾಟ ನಡೆಯಿತು. ಇಂದು ರಾಷ್ಟ್ರ ಅನುಭವಿಸುತ್ತಿರುವ ಸ್ವಾತಂತ್ರ್ಯ ಅಂದು ತಮ್ಮ ಜೀವ ಹಾಗೂ ಜೀವನವನ್ನು ಬಲಿಗೊಟ್ಟು ತುರ್ತು ಪರಿಸ್ಥಿತಿಯ ಹೋರಾಟಗಾರರ ಕೊಡುಗೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಕಾಸರಗೋಡು ಜಿಲ್ಲಾ ಅಧ್ಯಕ್ಷ ವಿ.ರವೀಂದ್ರನ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿದರು. ಸಂಘಟನೆಯ ಕೇರಳ ರಕ್ಷಾಧಿಕಾರಿ ಆರ್.ಮೋಹನನ್, ನ್ಯಾಯವಾದಿ ಕೆ.ಸುಂದರ ರಾವ್, ಸಂಘಟನೆ ರಾಜ್ಯ ಅಧ್ಯಕ್ಷ ರಾಜಶೇಖರ ಪಣಿಕ್ಕರ್, ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಂಜೀವ ಶೆಟ್ಟಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಮಾಜಿ ಅಧ್ಯಕ್ಷ ಟಿ.ಆರ್.ಕೆ.ಭಟ್, ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ರಮೇಶ್, ರಾಜ್ಯ ಕಾರ್ಯದರ್ಶಿ ಮೋಹನನ್ ಮೊದಲಾದವರು ಶುಭಹಾರೈಸಿದರು.
ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಕರುಣಾಕರನ್ ಸ್ವಾಗತಿಸಿದರು. ಕೋಶಾಧಿಕಾರಿ ಮಹಾಬಲ ರೈ ಕಾಳ್ಯಂಗಾಡು ವಂದಿಸಿ, ಮಹಾಬಲ ನಾೖಕ್ ನಿರೂಪಿಸಿದರು.