ಹಾವೇರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡುವ 2018ನೇ ಸಾಲಿನ ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಪ್ರಶಸ್ತಿ ತಾಲೂಕಿನ ಹೊಸರಿತ್ತಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಮ್ಮ ಹಳ್ಳಿಕೇರಿ ಅವರಿಗೆ ಲಭಿಸಿದ್ದು, ಅಹಿಂಸಾ ತತ್ವ ಪಾಲನೆ ಹಾಗೂ ಸಮಾಜ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಚನ್ನಮ್ಮ ಅವರು ಕಳೆದ ಏಳು ದಶಕಗಳಲ್ಲಿ ವಿಶ್ವದ 16ಕ್ಕೂ ಹೆಚ್ಚು ದೇಶಗಳನ್ನು ಸುತ್ತಾಡಿ ಅಲ್ಲಿ ಗಾಂಧೀಜಿ, ಕಸ್ತೂರಬಾ ಹಾಗೂ ವಿನೋಭಾಜಿ ಹಾಗೂ ಶರಣರ ಸಂದೇಶ ಮತ್ತು ಭಾರತೀಯ ಸಂಸ್ಕೃತಿಯ ಪ್ರಚಾರ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಗಾಂಧಿ, ವಿನೋಭಾಜಿಯವರ ಭೂದಾನ, ಸರ್ವೋದಯ ವಿಚಾರ ಪ್ರಚಾರದೊಂದಿಗೆ ಅಸ್ಪ್ರಶ್ಯತೆ ನಿವಾರಣೆ, ಗ್ರಾಮೀಣ ನೈರ್ಮಲ್ಯ, ಹರಿಜನೋದ್ಧಾರ, ಖಾದಿ ಬಳಕೆ, ಮಹಿಳಾ ಸಬಲೀಕರಣಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ.
ಹೊಸರಿತ್ತಿಯವರು: ಮೂಲತಃ ಹಾವೇರಿ ತಾಲೂಕು ಹೊಸರಿತ್ತಿಯವರಾದ ಚನ್ನಮ್ಮನವರು 1931ಜ.2ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಹೊಸರಿತ್ತಿಗೆ ಬಂದಿದ್ದ ಗಾಂಧೀಜಿಯವರ ನೇರ ದರ್ಶನ ಭಾಗ್ಯ ಇವರದ್ದಾಗಿತ್ತು. ಜಿಲ್ಲೆಯ ಸ್ವಾತಂತ್ರ್ಯ ಹೋರಾಟ ಕೇಂದ್ರವಾಗಿದ್ದ ಹೊಸರಿತ್ತಿ ಚನ್ನಮ್ಮ ಅವರ ಜೀವನದ ಮೇಲೆ ಪ್ರಭಾವ ಬೀರಿತು. ಹೊಸರಿತ್ತಿ ಸುತ್ತಮುತ್ತ ನಡೆಯುವ ಸ್ವಾತಂತ್ರ್ಯ ಚಳವಳಿಯಲ್ಲಿ ತಾತ, ಸ್ವಾತಂತ್ರ್ಯ ಹೋರಾಟಗಾರ ಗುದ್ಲೆಪ್ಪ ಹಳ್ಳಿಕೇರಿಯವರೊಂದಿಗೆ ಚನ್ನಮ್ಮನವರು ಭಾಗವಹಿಸುತ್ತಿದ್ದರು. ಗುದ್ಲೆಪ್ಪ ಹಳ್ಳಿಕೇರಿ ಸ್ಥಾಪಿಸಿದ್ದ ಗಾಂಧಿ ಆಶ್ರಮದ ಒಡನಾಟ ಹೊಂದಿದ್ದ ಅವರಿಗೆ ಇದು ಸಮಾಜಸೇವೆ, ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಕೊಳ್ಳಲು ಪ್ರೇರಣೆ ನೀಡಿತು.
ಚನ್ನಮ್ಮ ಅವರು ಮನ್ನಂಗಿ ದೇವಕ್ಕ ಸ್ಥಾಪಿಸಿದ ಆಶ್ರಮದಲ್ಲಿ ಗ್ರಾಮ ಸೇವಕಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ದೇಶ ಸೇವೆ, ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡರು. ನಂತರ ಸ್ವಾತಂತ್ರ್ಯ ಹೋರಾಟಗಾರ್ತಿ ಮೀರಾತಾಯಿ ಕೊಪ್ಪಿಕರ ಸಾಂಗತ್ಯದಲ್ಲಿ ಕಸ್ತೂರಬಾ ಆಶ್ರಮದಲ್ಲಿ ಸೇವೆ ಸಲ್ಲಿಸಿದರು. ಆಸ್ಪತ್ರೆಯಲ್ಲಿ ದಾದಿಯಾಗಿ ರೋಗಪೀಡಿತರ ಸೇವೆ ಮಾಡಿದರು. ವಿನೋಭಾ ಭಾಯಿಯವರ ಪ್ರಭಾವಕ್ಕೊಳಗಾಗಿ ಸರ್ವೋದಯ ಹಾಗೂ ಭೂದಾನ ಚಳವಳಿಯಲ್ಲಿ ತೊಡಗಿದರು. ಅವಿರತ ದೇಶಸೇವೆಯ ಸ್ಮರಣೆಯಲ್ಲಿ ಮದುವೆ, ಸಂಸಾರ ಮುಂತಾದ ವೈಯಕ್ತಿಕ ಜೀವನ ತ್ಯಾಗ ಮಾಡಿ ಜೀವನ ಪೂರ್ತಿ ಸಮಾಜಸೇವೆಯಲ್ಲೇ ಮೀಸಲಿಸಿದರು.
ಚನ್ನಮ್ಮ ಅವರ ಈ ಸೇವೆ ಗುರುತಿಸಿ ರಾಜ್ಯ ಸರ್ಕಾರದ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಕರ್ನಾಟಕ-2016’ ಸೇರಿದಂತ ನೂರಾರು ಪ್ರಶಸ್ತಿಗಳು ಬಂದಿದ್ದು, ಈಗ ಶ್ರೀಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
•ಎಚ್.ಕೆ. ನಟರಾಜ