Advertisement

ಪಿಎಫ್‌ಐ ಕಾರ್ಯಕರ್ತರಿಗೆ ಶಸ್ತಾಸ್ತ್ರ ತರಬೇತಿ: ಫ್ರೀಡಂ ಕಮ್ಯೂನಿಟಿ ಹಾಲ್‌ ಎನ್‌ಐಎ ವಶಕ್ಕೆ

02:27 AM Feb 24, 2023 | Team Udayavani |

ಪುತ್ತೂರು/ವಿಟ್ಲ: ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯೂನಿಟಿ ಹಾಲ್‌ನಲ್ಲಿ ಪಾಪ್ಯುಲರ್‌ ಫ್ರಂಟ್‌ ಅಫ್‌ ಇಂಡಿಯಾ (ಪಿಎಫ್‌ಐ) ಸದಸ್ಯರಿಗೆ ಅನಧಿಕೃತವಾಗಿ ಶಸ್ತ್ರಾಸ್ತ್ರ ತರಬೇತಿ ನೀಡಲಾಗು ತ್ತಿತ್ತು ಎಂಬ ವಿಷಯ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆ ಕಟ್ಟಡವನ್ನು ಫೆ. 23ರಂದು ಸ್ವಾಧೀನಕ್ಕೆ ತೆಗೆದುಕೊಂಡಿದೆ.
ಮಿತ್ತೂರಿನ 0.20 ಎಕ್ರೆ ವಿಸ್ತೀರ್ಣದ ಜಾಗದಲ್ಲಿ ಫ್ರೀಡಂ ಕಮ್ಯೂನಿಟಿ ಹಾಲ್‌ ಅಥವಾ ಮಿತ್ತೂರು ಕಮ್ಯೂನಿಟಿ ಹಾಲ್‌ ಎಂಬ ಹೆಸರಿನಲ್ಲಿ ಸಭಾಭವನವನ್ನು ನಿರ್ಮಿಸಿ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬಾಡಿಗೆಗೆ ನೀಡುವುದರೊಂದಿಗೆ ಪಿಎಫ್‌ಐ ತನ್ನ ಗುಪ್ತ ಯೋಜನೆ ಗಳಿಗೆ ಸಹಕಾರಿಯಾಗಿ ಇದನ್ನು ಬಳಸಿಕೊಳ್ಳುತ್ತಿತ್ತು ಎಂದು ಆರೋಪಿಸಲಾಗಿದೆ.

Advertisement

ಭಯೋತ್ಪಾದನ ಕೃತ್ಯಗಳಿಗೆ ಸಹಕಾರಿಯಾಗುವಂತೆ ಕಾನೂನು ಬಾಹಿರವಾಗಿ ತನ್ನ ಕಾರ್ಯಪಡೆಗೆ ಇಲ್ಲಿ ಶಸ್ತ್ರ ಬಳಕೆ ತರಬೇತಿ ನೀಡುವುದು ತನಿಖೆಯ ವೇಳೆ ದೃಢಪಟ್ಟ ಹಿನ್ನೆಲೆಯಲ್ಲಿ ಎನ್‌ಐಎ ಬೆಂಗಳೂರು ಕಚೇರಿಯ ಮುಖ್ಯ ತನಿಖಾಧಿಕಾರಿ ಎಂ. ಷಣ್ಮುಗಂ ಅವರು ಕಮ್ಯೂನಿಟಿ ಹಾಲ್‌ ಅನ್ನು 1967ರ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಕಲಂ 25ರ ಅನ್ವಯ ವಶಪಡಿಸಿಕೊಂಡಿದ್ದಾರೆ.

ಆದೇಶದ ಪ್ರತಿಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ವಿಟ್ಲ ಪೊಲೀಸ್‌ ಠಾಣೆಯ ಎಸ್‌ಎಚ್‌ಒ ಅವರಿಗೆ ಕಳುಹಿಸಿಕೊಡಲಾಗಿದೆ.
ಕಳೆದ ವರ್ಷ ಜು. 26ರಂದು ನಡೆದ ಪ್ರವೀಣ್‌ ನೆಟ್ಟಾರು ಹತ್ಯೆಯ ಅನಂತರ ರಾಷ್ಟ್ರೀಯ ತನಿಖಾ ದಳವು ಪಿಎಫ್‌ಐ ಹಾಗೂ ಅದರ ಪರಿವಾರ ಸಂಘಟನೆ ಕಾರ್ಯ ಚಟುವಟಿಕೆಯ ಮೇಲೆ ತನಿಖೆ ಪ್ರಾರಂಭಿಸಿ ಹಲವರನ್ನು ವಶಕ್ಕೆ ಪಡೆದಿದೆ.

ಆದೇಶದಲ್ಲಿ ಏನಿದೆ
ಈ ಭೂಮಿ ಮತ್ತು ಕಟ್ಟಡವನ್ನು ಪರಭಾರೆ ಮಾಡುವುದಾಗಲಿ, ಬಾಡಿಗೆಗೆ ನೀಡುವುದಾಗಲಿ, ಯಾವುದೇ ಬದಲಾವಣೆ ಮಾಡುವುದಾಗಲಿ, ಬಳಸಿಕೊಳ್ಳುವುದಾಗಲೀ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿರುವುದಾಗಿ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next