ಹೊಸದಿಲ್ಲಿ : ಕೇವಲ 251 ರೂ.ಗೆ ಸ್ಮಾರ್ಟ್ ಫೋನ್ ಕೊಡಿಸುವ ಆಶ್ವಾಸನೆ ನೀಡಿ ವಿಶ್ವಾದ್ಯಂತ ದಿಢೀರ್ ಪ್ರಚಾರಕ್ಕೆ ಬಂದಿದ್ದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪೆನಿಯ ಆಡಳಿತ ನಿರ್ದೇಶಕ ಮೋಸಿತ್ ಗೋಯಲ್ ಅವರನ್ನು 16 ಲಕ್ಷ ರೂ. ವಂಚನೆಗೈದ ಪ್ರಕರಣದಲ್ಲಿ ಬಂಧಿಸಲಾಗಿದೆ.
ಗೋಯಲ್ ಅವರನ್ನು ನಿನ್ನೆ ಗುರುವಾರ ಗಾಜಿಯಾದ್‌ನಲ್ಲಿ ಪೊಲೀಸರು ಬಂಧಿಸಿದ್ದು ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಗಾಜಿಯಾಬಾದ್ ಡೆಪ್ಯುಟಿ ಎಸ್‌ಪಿ ಮನೀಶ್ ಮಿಶ್ರಾ ತಿಳಿಸಿದ್ದಾರೆ.
2015ನ ನವೆಂಬರ್‌ನಲ್ಲಿ ಗೋಯಲ್ ಮತ್ತು ಇತರರು ಫ್ರೀಡಂ 251 ಫೋನ್‌ಗಳ ಡಿಸ್ಟ್ರಿಬ್ಯೂಟರ್‌ಶಿಪ್ ಪಡೆದುಕೊಳ್ಳುವಂತೆ ತನ್ನನ್ನು ಒತ್ತಾಯಿಸಿತ್ತು. ನಾವು ರಿಂಗಿಂಗ್ ಬೆಲ್ಸ್ ಕಂಪೆನಿಗೆ 30 ಲಕ್ಷ ರೂ. ಪಾವತಿಸಿದ್ದೆವು. ನಮಗೆ 14 ಲಕ್ಷ ರೂ. ಮೌಲ್ಯದ ಉತ್ನನ್ನಗಳನ್ನು ಮಾತ್ರವೇ ಪೂರೈಸಲಾಗಿದೆ. ಉಳಿದ 16 ಲಕ್ಷ ರೂ.ಗಳನ್ನು ನಮಗೆ ವಂಚಿಸಲಾಗಿದೆ. ನಮಗೆ ಜೀವ ಬೆದರಿಕೆಯನ್ನೂ ಒಡ್ಡಲಾಗಿದೆ ಎಂದು ರಿಂಗಿಂಗ್ ಬೆಲ್ಸ್ ವಿರುದ್ಧ ಎಫ್ಐಆರ್ ದಾಖಲಿಸಿರುವ ಆಯಾಮ್ ಎಂಟರ್‌ಪ್ರೈಸಸ್ ಕಂಪೆನಿ ಹೇಳಿದೆ.
ರಿಂಗಿಂಗ್ ಬೆಲ್ಸ್ ಕಂಪೆನಿ ಕೇವಲ 251 ರೂ.ಗೆ ಸ್ಮಾರ್ಟ್ ಫೋನ್ ಮಾರಾಟ ಮಾಡುವ ತನ್ನ ಯೋಜನೆಯನ್ನು ಪ್ರಕಟಿಸಿ ವಿಶ್ವಾದ್ಯಂತ ಭಾರೀ ಪ್ರಚಾರ ಪಡೆದುಕೊಂಡಿತ್ತು. ಅದಾಗಿ ಈಗ ಒಂದು ವರ್ಷ ಕಳೆದರೂ ಸ್ಮಾರ್ಟ್ ಫೋನ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ಈ ಅಗ್ಗದ ಸ್ಮಾರ್ಟ್ ಫೋನಿಗಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದರು. ಅನಂತರದಲ್ಲಿ ರಿಂಗಿಂಗ್ ಬೆಲ್ಸ್ ಸಂಸ್ಥೆ ಅಗ್ಗದ ದರಲ್ಲಿ ಸ್ಮಾರ್ಟ್ ಟಿವಿ ತಯಾರಿಸುವುದಾಗಿಯೂ ಹೇಳಿ ಪುಕ್ಕಟೆ ಪ್ರಚಾರ ಪಡೆದುಕೊಂಡಿತ್ತು.