Advertisement

18 ವರ್ಷ ಮೇಲ್ಪಟ್ಟವರಿಗೂ ಉಚಿತ ಲಸಿಕೆ ಉತ್ತಮ ನಿರ್ಧಾರ

01:02 AM Apr 28, 2021 | Team Udayavani |

ಕೊರೊನಾ ಕೇಸುಗಳು ದಾಖಲೆ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ನಡುವೆಯೇ ಮೇ 1ರಿಂದ ದೇಶಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದ್ದು ಎಲ್ಲರಿಗೂ ತಿಳಿದೇ ಇದೆ. ಇದರ ಜತೆಗೆ ದೇಶದ ಬಹಳಷ್ಟು ರಾಜ್ಯಗಳು 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಣೆ ಮಾಡಿವೆ.

Advertisement

ಸೋಮವಾರವಷ್ಟೇ ಕರ್ನಾಟಕವೂ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದ ಜನರ ಹಿತಾಸಕ್ತಿಯಿಂದ ಹೇಳುವುದಾದರೆ ಇದು ಉತ್ತಮ ನಿರ್ಧಾರ. ಅಷ್ಟೇ ಅಲ್ಲ, ರಾಜ್ಯದ ಎಲ್ಲ ಅರ್ಹ ಫ‌ಲಾನುಭವಿಗಳಿಗೂ ಲಸಿಕೆ ಉಚಿತವಾಗಿಯೇ ಸಿಕ್ಕಂತಾಗುತ್ತದೆ.

ಈಗಾಗಲೇ ಕೊವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ಲಸಿಕೆಗಳ ದರ ನಿಗದಿಯಾಗಿದ್ದು, ಕೊವಿಶೀಲ್ಡ್‌ಗಿಂತ ದೇಶೀಯವಾಗಿ ಉತ್ಪಾದನೆ ಮಾಡಲಾಗಿರುವ ಕೋವ್ಯಾಕ್ಸಿನ್‌ ಲಸಿಕೆಯ ದರವೇ ಹೆಚ್ಚಿದೆ. ಇದನ್ನು ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಿ ಪಡೆಯುವುದು ಕೊರೊನಾದಂಥ ಕಷ್ಟ ಕಾಲದಲ್ಲಿ ದುಸ್ತರವೇ ಸರಿ. ಇಂಥ ಕಾಲದಲ್ಲಿ ಉಚಿತವಾಗಿ ಕೊಡುವ ನಿರ್ಧಾರವನ್ನು ಸ್ವಾಗತಿಸಲೇ ಬೇಕು.

ಸದ್ಯದ ಕೊರೊನಾ ಕಾಲಘಟ್ಟದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕ್ರಮ ಉತ್ತಮವಾದದ್ದು. ಇದಕ್ಕೆ ಕಾರಣವೂ ಇದೆ. ಕೊರೊನಾ 2ನೇ ಅಲೆಯಲ್ಲಿ ಸೋಂಕಿಗೆ ಬಾಧಿತರಾಗುತ್ತಿರುವವರಲ್ಲಿ 18 ವರ್ಷದಿಂದ 40 ವರ್ಷ ಒಳಗಿನವರೇ ಹೆಚ್ಚು. ಒಂದು ವೇಳೆ ಇವರಿಗೆ ಲಸಿಕೆ ಕೊಟ್ಟು ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡಿದಲ್ಲಿ, ಕೊರೊನಾ ಹರಡುವಿಕೆಯನ್ನು ತಪ್ಪಿಸಬಹುದು. ಇದರಲ್ಲಿ ಯಶಸ್ವಿಯಾದರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆದ್ದಂತೆಯೇ ಸರಿ.

ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದರಷ್ಟೇ ಸಾಲದು. ಇದು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವಂತೆಯೂ ಮಾಡಬೇಕು. ಸದ್ಯಕ್ಕೆ ದೇಶಾದ್ಯಂತ ಲಸಿಕೆ ಸಿಗದಿರುವ ಬಗ್ಗೆಯೂ ಅಸಮಾಧಾನವಿದೆ. ರಾಜ್ಯದಲ್ಲಿ ಇಂಥ ಯಾವುದೇ ಅಡೆತಡೆಗಳಿಗೆ ಆಸ್ಪದ ಕೊಡಬಾರದು. ಮೇ 1ಕ್ಕೂ ಮುಂಚೆಯೇ ರಾಜ್ಯಕ್ಕೆ ಬೇಕಾದಷ್ಟು ಲಸಿಕೆಯನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಸೂಕ್ತ.

Advertisement

ಇನ್ನು ಲಸಿಕೆ ಸಿಗುವುದೇ ಕಷ್ಟವಾಗಿರುವಾಗ ಕೆಲವೊಂದು ರಾಜ್ಯಗಳಲ್ಲಿ ಲಸಿಕೆಯ ವೇಸ್ಟೇಜ್‌ ಕೂಡ ಕಂಡು ಬರುತ್ತಿದೆ. ಇಂಥ ಅಪವಾದಗಳ ನಡುವೆ ಕೇರಳದಲ್ಲಿ ಝೀರೋ ವೇಸ್ಟೇಜ್‌ ಇದೆ. ಕರ್ನಾಟಕವೂ ಕೇರಳದಲ್ಲಿ ಅನುಸರಿಸಿರುವ ಮಾರ್ಗವನ್ನು ನೋಡಿಕೊಂಡು, ಯಾವುದೇ ಕಾರಣಕ್ಕೂ ಒಂದೇ ಒಂದು ಡೋಸ್‌ ಕೂಡ ವೇಸ್ಟ್‌ ಆಗದಂತೆ ನೋಡಿಕೊಳ್ಳಬೇಕು. ಸರಿಯಾದ ರೀತಿಯಲ್ಲಿ ನೋಂದಣಿ ಮಾಡಿಸಿಕೊಂಡು, ಲಸಿಕೆ ನೀಡುವ ಸ್ಥಳದಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದನ್ನು ಗಮನಿಸಿಕೊಂಡು ಲಸಿಕೆ ನೀಡುವ ಕೆಲಸವಾಗಬೇಕು.

ಜನ ಬರಲಿಲ್ಲ ಎಂಬ ಕಾರಣಕ್ಕಾಗಿ ಲಸಿಕೆಯನ್ನು ವೇಸ್ಟ್‌ ಮಾಡುವುದು ಸಲ್ಲದು. ಮೊನ್ನೆ ತಾನೇ ದಿಲ್ಲಿ ಹೈಕೋರ್ಟ್‌ ಲಸಿಕೆಯ ಒಂದು ಡೋಸ್‌ ವೇಸ್ಟ್‌ ಕೂಡ ಬಹುದೊಡ್ಡ ತಪ್ಪು ಎಂದು ಹೇಳಿದೆ. ಇಂಥವುಗಳನ್ನು ಗಮನದಲ್ಲಿರಿಸಿಕೊಂಡು ಉತ್ತಮವಾಗಿ ನಿರ್ವಹಣೆ ಮಾಡಿಕೊಂಡು ಲಸಿಕೆಯನ್ನು ನೀಡುವ ಕೆಲಸವಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next