ಬೆಂಗಳೂರು: ಲಾಕ್ ಡೌನ್ ಕಾರಣದಿಂದ ರಾಜ್ಯದ ಅಲ್ಲಲ್ಲಿ ಸಿಲುಕಿರುವ ಕಾರ್ಮಿಕರಿಗೆ ಊರಿಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದು, ಸದ್ಯ ಮೂರು ದಿನಗಳ ಕಾಲ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ.
ಈ ಬಗ್ಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಇಂದಿನಿಂದ ಮೂರು ದಿನಗಳ ಕಾಲ ( ಮಂಗಳವಾರದ ತನಕ) ಜಿಲ್ಲಾ ಕೇಂದ್ರಗಳಿಂದ ಮತ್ತು ರಾಜಧಾನಿ ಬೆಂಗಳೂರಿನಿಂದ ಕರ್ನಾಟಕದಲ್ಲಿನ ತಮ್ಮ ತಮ್ಮ ಊರುಗಳಿಗೆ ಹೋಗುವ ಎಲ್ಲರಿಗೂ ಉಚಿತವಾಗಿ ಕೆ.ಎಸ್.ಆರ.ಟಿ.ಸಿ ಬಸ್‍ಗಳಲ್ಲಿ ತೆರಳಲು ಅನುವು ಮಾಡಿಕೊಡಲಾಗಿದೆ ಎಂದಿದ್ದಾರೆ.
ಇದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಯಾವುದೇ ಬಸ್ ನಿಲ್ಧಾಣಗಳಲ್ಲಿ ಯಾರು ನೂಕುನುಗ್ಗಲು ಮಾಡಬಾರದು. ಜನರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ 150 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಮಿಕರು ಮಾತ್ರವಲ್ಲದೆ ಬಹಳಷ್ಟು ಜನರು ಮೆಜೆಸ್ಟಿಕ್ ನಲ್ಲಿ ಸೇರಿದ್ದು, ನೂಕುನುಗ್ಗಲು ಕಂಡುಬಂತು.
ಕಾರ್ಮಿಕರಿಗೆ ತಮ್ಮ ತಮ್ಮ ಸ್ಥಳಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿರುವುದಾಗಿ ಸರ್ಕಾರ ಹೇಳಿತ್ತು. ಆದರೆ, ಇದಕ್ಕೆ ಹೆಚ್ಚಿನ ದರ ವಿಧಿಸಲಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿತ್ತು. ನಂತರ ಇದಕ್ಕೆ ಪ್ರತಿಕ್ರಿಯಿಸಿದ ಸರಕಾರ, ಸಿಂಗಲ್ ಫೇರ್ (ಒಮ್ಮುಖ ಪ್ರಯಾಣ ದರ) ದರದಲ್ಲಿ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಹೋಗಲು ಅವಕಾಶ ಮಾಡಿಕೊಡಲಾಗಿತ್ತು. ಇಂದು ಎಲ್ಲರಿಗೂ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.