ಚಿತ್ರದುರ್ಗ: ಉಚಿತ ಸಾರಿಗೆ ಸೇವೆ ನೀಡುವ ಶಕ್ತಿ ಯೋಜನೆ ಮಹಿಳಾ ಸಬಲೀಕರಣಕ್ಕೆ ಅವಕಾಶ ನೀಡಲಿದೆ ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಚಿತ್ರದುರ್ಗ ಸಾರಿಗೆ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ರಾಜ್ಯಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ “ಶಕ್ತಿ” ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೇಸ್ ನೀಡಿದ ಭರವಸೆಗಳ ಪೈಕಿ ಮೊದಲನೇ ಭರವಸೆಯನ್ನು ಸರ್ಕಾರ ರಚನೆಯಾದ ತಿಂಗಳೊಳಗೆ ನೆರವೇರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 2013 ರಲ್ಲಿ ಅಧಿಕಾರಕ್ಕೆ ಬಂದಾಗ ಪಕ್ಷದ ಪ್ರನಾಳಿಕೆಯಲ್ಲಿ ಹೇಳಿದ ಎಲ್ಲಾ ಭರವಸೆಗಳನ್ನು ಈಡೇರಿಸಲಾಗಿತ್ತು. ಇದೇ ರೀತಿ ಶಕ್ತಿ ಯೋಜನೆ ಜಾರಿ ಮಾಡಿ ಮಹಿಳಾ ಸಬಲೀಕರಣಕ್ಕೆ ಅವಕಾಶ ನೀಡಲಾಗಿದೆ. ಇಂದರಿಂದ ಎಲ್ಲಾ ಮಹಿಳೆಯರಿಗೆ ರಾಜ್ಯ ಮತ್ತು ಜಿಲ್ಲೆಯಲ್ಲಿ ಓಡಾಡುವ ಅವಕಾಶ ಲಭಿಸಲಿದೆ. ಈ ಮೂಲಕ ಸರ್ಕಾರದ ಮೊದಲ ಗ್ಯಾರೆಂಟಿ ಯೋಜನೆ ಪೂರ್ಣಗೊಳಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಬರುವ ದಿನಗಳಲ್ಲಿ ಜಿಲ್ಲೆಯ ಭದ್ರಾಮೇಲ್ದಂಡೆ ಯೋಜನೆ, ಮೆಡಿಕಲ್ ಕಾಲೇಜು ಸ್ಥಾಪನೆ ಸೇರಿದಂತೆ ಹಲವು ಜಾರಿಗೆ ಪ್ರಯತ್ನ ನಡೆಸುತ್ತೇನೆ. ಜುಲೈ 1 ರಿಂದ ಉಚಿತ ವಿದ್ಯುತ್ ಹಾಗೂ ಅಕ್ಕಿ ನೀಡುವ ಕಾರ್ಯಕ್ರಮ ಚಾಲನೆ ನೀಡಲಾಗುವುದು. ಆಗಸ್ಟ್ ನಿಂದ ಗೃಹಲಕ್ಷ್ಮೀ ಯೋಜನೆ ಜಾರಿಯಾಗಲಿದೆ ಎಂದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ “ಶಕ್ತಿ” ಯೋಜನೆ ರಾಜ್ಯ ಸರ್ಕಾರದಿಂದ ಬಹುದೊಡ್ಡ ಯೋಜನೆಯಾಗಿದೆ.ಚುನಾವಣೆ ಪೂರ್ವದಲ್ಲಿ ನೀಡಿದ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಹೇಳಿದ ಅವರು, ಶಕ್ತಿ ಯೋಜನೆ ಮೂಲಕ ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಒತ್ತು ನೀಡಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಪ್ರಾಸ್ತಾವಿಕವಾಗಿ ಮಾತನಾಡಿ ಏಕಕಾಲದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಶಕ್ತಿ ಯೋಜನೆ ಆರಂಭ ಮಾಡಲಾಗುತ್ತಿದೆ. ಮಹೀಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಸರ್ಕಾರದ ದಿಟ್ಟ ಹೆಜ್ಜೆಯಾಗಿದೆ. ಇದು ಮಹಿಳೆಯರ ಶಿಕ್ಷಣ, ಉದ್ಯೋಗಗಳಲ್ಲಿ ಸಬಲೀಕರಣ ಹೊಂದಲು ಅವಕಾಶ ನೀಡುತ್ತದೆ. ಮಹಿಳಾ ಹಾಗೂ ವಿದ್ಯಾರ್ಥಿಗಳಿಗೆ ಓಡಾಟಕ್ಕೆ ಸಹಾಯಕವಾಗಿದೆ. ಜಿಲ್ಲೆಯ ಸಮಸ್ತ ಮಹಿಳೆಯರಿಗೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಇದನ್ನು ಕುಟುಂಬ, ಸಮಾಜ ಹಾಗೂ ದೇಶವನ್ನು ಸಧೃಡವಾಗಿಸಲು ಬಳಸಿಕೊಳ್ಳಬೇಕು ಎಂದರು.
ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿರಾಮ್ಪ್ರಸಾತ್ ಮನೋಹರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್. ದಿವಾಕರ್, ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್.ಹೆಬ್ಬಾಳ್, ನಗರ ಸಭಾ ಸದಸ್ಯರಾದ ಮೀನಾಕ್ಷಮ್ಮ, ಸುರೇಶ್ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದ ಬಳಿಕ ಚಿತ್ರದುರ್ಗ -ಬೆಂಗಳೂರು ಬಸ್‌ನಲ್ಲಿ ತೆರಳುವ ಮಹಿಳಾ ಪ್ರಯಾಣಿಕರಿಗೆ ಸಚಿವ ಡಿ.ಸುಧಾಕರ್ ಉಚಿತ ಬಸ್ ಟಿಕೇಟ್ ನೀಡಿದರು. ಬಸ್ ಏರುವ ಮಹಿಳೆಯರಿಗೆ ಹೂ ನೀಡುವ ಮೂಲಕ ಸ್ವಾಗತಿಸಲಾಯಿತು. ಸಿಹಿ ಸಹ ಹಂಚಲಾಯಿತು. ಚಿತ್ರದುರ್ಗ-ದಾವಣಗೆರೆ, ಚಿತ್ರದುರ್ಗ-ಹಿರಿಯೂರು, ಚಿತ್ರದುರ್ಗ-ಚಳ್ಳಕೆರೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಸಾರಿಗ ಸೇವೆಗೆ ಚಾಲನೆ ನೀಡಲಾಯಿತು. ಮಹಿಳಾ ಪ್ರಯಾಣಿಕರು ಸಂಭ್ರಮದಿಂದ ಪ್ರಯಾಣ ಬೆಳಸಿದರು.