ಹಾಸನ: ಕೊರೊನಾ 2ನೇ ಅಲೆಯು ಇಳಿಮುಖ ವಾಗುತ್ತಾ ಸಾಗಿರುವುದರಿಂದ ಹಾಸನ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ್ದ ಇದ್ದ ಲಾಕ್‌ಡೌನ್ ಸೋಮವಾರದಿಂದ ಸಡಿಲಿಕೆಯಾಗುತ್ತಿದ್ದು, ಇನ್ನು ಪ್ರತಿದಿನವೂ ಮುಂಜಾನೆಯಿಂದ ರಾತ್ರಿವರೆಗೂ ಎಲ್ಲ ವಹಿವಾಟು ಮುಕ್ತವಾಗಿ ನಡೆಯಲಿವೆ.
ಇದುವರೆಗೂ ವಾರದಲ್ಲಿ ಸೋಮವಾರ, ಬುಧ ವಾರ, ಶುಕ್ರವಾರ ಮಾತ್ರ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ವಹಿವಾಟಿಗೆ ಅವಕಾಶವಿತ್ತು. ಇನ್ನುಳಿದ 4 ದಿನ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿತ್ತು. ಆದರೆ ಸೋಮವಾರ ಬೆಳಗ್ಗೆ6 ಗಂಟೆಗೆ ಮುಕ್ತಾಯವಾಗಿದೆ. ಇನ್ನು ಮುಂದೆ ಎಲ್ಲ ದಿನಗಳಲ್ಲೂ ಬೆಳಗ್ಗೆ 5ರಿಂದ ರಾತ್ರಿ 9 ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇರುವಂತೆ ಹಾಸನ ಜಿಲ್ಲೆಯಲ್ಲೂ ಎಲ್ಲ ವಹಿವಾಟು ನಡೆಯಲಿದೆ.
ವಿಶೇಷ ಪೂಜೆಗೆ ಅವಕಾಶ ಇಲ್ಲ: ಸಿನಿಮಾ ಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನ ಹಾಗೂ ಪಬ್ ಗಳ ಹೊರತುಪಡಿಸಿ ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳು, ಹೋಟೆಲ್‌ಗಳು, ಬಾರ್‌ಅಂಡ್ ರೆಸ್ಟೋರೆಂಟ್‌ಗಳು, ಜಿಮ್‌ಗಳು ಸೇರಿದಂತೆ ಎಲ್ಲ ವಹಿವಾಟು ಮಕ್ತವಾಗಿ ನಡೆಯಲಿದೆ. ದೇವಾಲಯ ಗಳಲ್ಲಿ ದೇವರ ದರ್ಶನಕ್ಕೆ ಅವಕಾಶವಿದೆ. ಆದರೆ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗಕ್ಕೆ ಅವ ಕಾಶವಿರುವುದಿಲ್ಲ. ಪ್ರವಾಸೋದ್ಯಮ ತಾಣಗಳಿಗೂ ಸಾರ್ವಜನಿಕರು ಮುಕ್ತವಾಗಿ ಭೇಟಿ ನೀಡಬಹು ದಾಗಿದೆ. ಈಗಾಗಲೇ ಬಸ್‌ಗಳು ಹಾಗೂ ರೈಲುಗಳು ಸಂಚರಿಸುತ್ತಿವೆ. ಖಾಸಗಿ ವಾಹನಗಳೂ ಎಲ್ಲ ದಿನಗಳಲ್ಲೂ ಮುಕ್ತವಾಗಿ ಸಂಚರಿಸಲು ಅವಕಾಶವಿದೆ. ಏಪ್ರಿಲ್ 10 ರಿಂದ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಾಗುತ್ತಿದ್ದಂತೆ ಹಾಸನ ಜಿಲ್ಲೆಯಲ್ಲೂ ಲಾಕ್ ಡೌನ್ ಜಾರಿಯಲ್ಲಿತ್ತು. ಆದರೆ ಹಾಸನ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಿದ್ದರಿಂದ ಮತ್ತು ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದರಿಂದ ಜಿಲ್ಲಾಡಳಿತವು ವಾರದಲ್ಲಿ3ದಿನ ಮಾತ್ರ ಮಧ್ಯಾಹ್ನದವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಿತ್ತು.
ರಾಜ್ಯದಲ್ಲಿ ಕಳೆದ ವಾರವೇ ಅನ್‌ಲಾಕ್ ಜಾರಿ ಯಾದರೂ ಹಾಸನ ಜಿಲ್ಲೆಯಲ್ಲಿ ಮಾತ್ರ ಲಾಕ್‌ಡೌನ್ ಮುಂದುವರಿದಿತ್ತು. ಆದರೆ ಪಾಸಿಟಿವ್ ಪ್ರಕರಣಗಳು ಇಳಿಮುಖವಾಗುತ್ತಿರುವುದರಿಂದ ಹಾಗೂ ಸಾವಿನ ಪ್ರಕರಣಗಳೂ ಗಣನೀಯವಾಗಿ ಕಡಿಮೆಯಾದ್ದರಿಂದ ಲಾಕ್‌ಡೌನ್ ಸಡಿಲಗೊಳಿಸಲಾಗಿದೆ.