ಲಾಸ್ ಏಂಜಲೀಸ್: ನಗರದ ಪ್ರತಿಯೋರ್ವರಿಗೂ ಉಚಿತ ಕೋವಿಡ್-19 ಪರೀಕ್ಷೆ ನಡೆಸುವುದಾಗಿ ಮೇಯರ್‌ಎರಿಕ್ ಗಾರ್ಸೆಟ್ಟಿ ಹೇಳಿಕೆ ನೀಡಿದ್ದಾರೆ.
ನಗರದಾದ್ಯಂತ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿಯವರೆಗೂ ಕೇವಲ ಶಂಕಿತರು, ರೋಗ ಲಕ್ಷಣಗಳನ್ನು ಹೊಂದಿರುವವರು, ವೈದ್ಯಕೀಯ ಸಿಬಂದಿ ಸೇರಿದಂತೆ ಕಿರಾಣಿ ಅಂಗಡಿಗಳ ಕೆಲಸಗಾರರಿಗೆ ಮಾತ್ರ ಸೋಂಕು ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ರೋಗಲಕ್ಷಣಗಳು ಇರುವವರು ಮತ್ತು ಇಲ್ಲದವರು ಸೇರಿದಂತೆ ಎಲ್ಲರಿಗೂ ಉಚಿತ ಪರೀಕ್ಷೆ ಆಯೋಜಿಸಲು ಸಿದ್ಧವಾಗಿದೆ. ಇಂಥದೊಂದು ಪ್ರಯೋಗಕ್ಕೆ ಸಿದ್ಧವಾಗಿರುವ ಅಮೆರಿಕದ ಮೊದಲನೇ ನಗರವಿದು.
ಪ್ರಾರಂಭದ ದಿನಗಳಲ್ಲಿ ಲಾಸ್ ಏಂಜಲೀಸ್ ನಗರ ವ್ಯಾಪಕವಾಗಿ ಪರೀಕ್ಷೆಯನ್ನು ಮಾಡುವಲ್ಲಿ ವಿಫಲವಾಗಿದ್ದವು. ಆದರೆ ಸೋಂಕು ತೀವ್ರತೆ ಹೆಚ್ಚಾಗುತ್ತಿದಂತೆ ಎಚ್ಚೆತ್ತುಕೊಂಡ ನಗರ ಪರೀಕ್ಷೆ ಕೇಂದ್ರಗಳ ಸಂಖ್ಯೆಯನ್ನು 34ಕ್ಕೆ ಹೆಚ್ಚಿಸಿ ಇದೀಗ ಉಚಿತ ಸೇವೆ ನೀಡುತ್ತಿದೆ.
ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಮುಂತಾದ ರೋಗಲಕ್ಷಣಗಳನ್ನು ಹೊಂದಿರುವ ಜನರಿಗೆ ಮುಂದಿನ ದಿನಗಳಲ್ಲಿ ಆದ್ಯತೆ ನೀಡಲಾಗುವುದು. ತತ್‌ಕ್ಷಣ ಪ್ರಾರಂಭವಾಗುವ ಪರೀಕ್ಷೆಗೆ ಆನ್‌ಲೈನ್ ಮೂಲಕ ಸೈನ್‌ಆಪ್ ಆಗಬಹುದು. ಪರೀಕ್ಷೆಗೆ ಯಾವುದೇ ಮಿತಿಗಳು ಇರುವುದಿಲ್ಲ. ಎಷ್ಟು ಬಾರಿ ಬೇಕಾದರೂ ಪರೀಕ್ಷೆಗೆ ಒಳಪಡಬಹುದು ಎಂದು ಹೇಳಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿನ ಸೋಂಕು ಪ್ರಕರಣಗಳ ಅರ್ಧದಷ್ಟು ಲಾಸ್ ಏಂಜಲೀಸ್ ಪ್ರದೇಶದಲ್ಲಿದೆ.