Advertisement
ಯಾರೋ ದೊಡ್ಡ ಕುಳ ಇರಬಹುದು. ಅದಕ್ಕೇ ಸಂಬಳ ವಾಪಸ್ ಕೊಟ್ಟಿರಬಹುದು ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಊಹೆ ತಪ್ಪು. ಈ ರೀತಿ ತಮ್ಮ ವೇತನ ಕೊಟ್ಟವರು ಯಾವ ಶ್ರೀಮಂತ ವ್ಯಕ್ತಿಯೂ ಅಲ್ಲ, ಬಿಹಾರದ ಹಿಂದಿ ಸಾಹಿತ್ಯ ಉಪನ್ಯಾಸಕ 33 ವರ್ಷದ ಲಲನ್ ಕುಮಾರ್. ಹೌದು ಕಳೆದ ಮೂರು ವರ್ಷಗಳಲ್ಲಿ ವೇತನ ಹಾಗೂ ಇತರ ಭತ್ತೆಯ ರೂಪದಲ್ಲಿ ಬಂದ ಅಷ್ಟೂ ಮೊತ್ತವನ್ನು ಅಂದರೆ ಬರೋಬ್ಬರಿ 24 ಲಕ್ಷ ರೂ.ಗಳನ್ನು ಕಾಲೇಜು ಉಪನ್ಯಾಸಕ ಲಲನ್ ಕುಮಾರ್ ವಿವಿಗೆ ಮರಳಿಸಿದ್ದಾರೆ!
ತರಗತಿಗೆ ವಿದ್ಯಾರ್ಥಿಗಳೇ ಬರುತ್ತಿಲ್ಲ ಎಂಬ ಕಾರಣಕ್ಕೆ. 2019ರ ಸೆಪ್ಟಂಬರ್‌ನಲ್ಲಿ ಲಲನ್ ಅವರು ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಬಿಹಾರ ವಿಶ್ವ ವಿದ್ಯಾನಿಲಯದಡಿ ಬರುವ ನಿತೀಶೇಶ್ವರ ಕಾಲೇಜಿಗೆ ಹಿಂದಿ ಉಪನ್ಯಾಸಕರಾಗಿ ಸೇರಿದ್ದರು. ಆದರೆ ಹಿಂದಿ ತರಗತಿಗೆ ಯಾವೊಬ್ಬ ವಿದ್ಯಾರ್ಥಿಯೂ ಹಾಜರಾಗುತ್ತಿರಲಿಲ್ಲ. ಕಲಿಸಲು ವಿದ್ಯಾರ್ಥಿಗಳೇ ಇಲ್ಲ ಎಂದ ಮೇಲೆ ನಾನ್ಯಾಕೆ ವೇತನ ಪಡೆಯಬೇಕು ಎಂಬ ಪ್ರಶ್ನೆ ಲಲನ್ ರನ್ನು ಕಾಡುತ್ತಿತ್ತು. ಪಾಠವನ್ನೇ ಮಾಡದೇ ವೇತನ ಪಡೆಯಲು ನನ್ನ ಮನಸ್ಸಾಕ್ಷಿ ಒಪ್ಪುತ್ತಿಲ್ಲ. ಹೀಗಾಗಿ ಮೂರು ವರ್ಷಗಳ ಸಂಪೂರ್ಣ ವೇತನವನ್ನು ವಾಪಸ್ ನೀಡುತ್ತಿದ್ದೇನೆ ಎಂದು ಹೇಳಿ 24 ಲಕ್ಷ ರೂ.ಗಳನ್ನು ಮರಳಿಸಿದ್ದಾರೆ.