Advertisement

ಕದ್ರಿ ಪಾರ್ಕ್‌ನಲ್ಲಿ  ಉಚಿತ ಓಪನ್‌ ಜಿಮ್‌

10:15 AM Dec 16, 2018 | |

ಮಹಾನಗರ : ಆಕರ್ಷಕ ಮೈಕಟ್ಟು ಹೊಂದುವುದಕ್ಕಾಗಿ ಸಾವಿರಾರು ರೂ. ಖರ್ಚು ಮಾಡಿ ಜಿಮ್‌ಗೆ ಹೋಗಬೇಕಾದ ಅಗತ್ಯವಿಲ್ಲ. ಇನ್ನು ಮುಂದೆ ಹಸುರಿನ ನಡುವೆ ದೇಹ ಮತ್ತು ಮನಸ್ಸಿಗೆ ವ್ಯಾಯಾಮ ಸಿಗಲಿದೆ. ಏಕೆಂದರೆ, ನಗರದ ಕದ್ರಿಪಾರ್ಕ್‌ನಲ್ಲಿ ಉಚಿತವಾಗಿ ಜಿಮ್‌ ಸೌಲಭ್ಯ ಲಭ್ಯವಾಗಲಿದೆ.

Advertisement

ಈ ತಿಂಗಳಾಂತ್ಯಕ್ಕೇ ಉಚಿತ ಜಿಮ್‌ ಸೌಲಭ್ಯ ಕದ್ರಿ ಪಾರ್ಕ್‌ನಲ್ಲಿ ದೊರೆ ಯಲಿದೆ. ಪಾರ್ಕ್‌ಗೆ ವಾಕಿಂಗ್‌ಗೆ ಆಗಮಿಸುವ ಮಂದಿಗೆ ವಾಕಿಂಗ್‌ ಜತೆಗೆ ವ್ಯಾಯಾಮವನ್ನೂ ಒದಗಿಸಿಕೊಡುವುದು ಇದರ ಉದ್ದೇಶ. ಮಂಗಳೂರಿನ ಅತಿ ದೊಡ್ಡ ಮತ್ತು ಪ್ರವಾಸಿತಾಣವಾಗಿ ಮುಂಚೂಣಿಯಲ್ಲಿರುವ ಕದ್ರಿ ಪಾರ್ಕ್‌ ನಲ್ಲಿ ಬೆಳಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ನೂರಾರು ಮಂದಿ ವಾಕಿಂಗ್‌ಗಾಗಿ ಆಗಮಿಸುತ್ತಾರೆ.

ಹೀಗೆ ಆಗಮಿಸುವ ಸಾರ್ವಜನಿಕರಿಗೆ ಪಾರ್ಕ್‌ನಲ್ಲಿ ಜಿಮ್‌ ಸೌಲಭ್ಯ ಕಲ್ಪಿಸಿಕೊಡಬೇಕೆನ್ನುವ ನಿಟ್ಟಿನಲ್ಲಿ ಪಾಲಿಕೆ ಕ್ರಿಯಾಯೋಜನೆ ರೂಪಿಸಿದ್ದು, ಜಿಮ್‌ ನಿರ್ಮಾಣದ ಕೆಲಸಗಳೂ ಈಗಾಗಲೇ ಆರಂಭವಾಗಿದೆ. ಸ್ಥಳದಲ್ಲಿ ಮೇಲ್ಛಾವಣಿ ಶೀಟ್‌, ಸಿಮೆಂಟ್‌ ಅಳವಡಿಸುವ ಕಾರ್ಯ ಈಗಾಗಲೇ ಮುಕ್ತಾಯಗೊಂಡಿದೆ.

ಈ ಜಿಮ್‌ನ ಬಳಕೆದಾರರಿಗೆ ಯಾವುದೇ ಶುಲ್ಕ ತೆಗೆದುಕೊಳ್ಳಲಾಗುವುದಿಲ್ಲ. ಅಲ್ಲದೇ, ತರಬೇತುದಾರರೂ ಇರುವುದಿಲ್ಲ. ವಾಕಿಂಗ್‌ಗೆ ಆಗಮಿಸಿದ ಅಥವಾ ಪಾರ್ಕ್‌ಗೆ ಭೇಟಿ ನೀಡಿದ ಯಾರೇ ಆದರೂ, ಈ ಜಿಮ್‌ನ್ನು ಬಳಸಿಕೊಳ್ಳಬಹುದು. ಯಾವುದೇ ಕಟ್ಟಡ, ಹೊರ ಆವರಣಗಳಿಲ್ಲದೆ, ಓಪನ್‌ ಜಿಮ್‌ ಆಗಿ ಇದು ಕಾರ್ಯ ನಿರ್ವಹಿಸಲಿದೆ. ಸುಮಾರು 15 ಸಲಕರಣೆಗಳನ್ನು ಜಿಮ್‌ ಒಳಗೊಂಡಿರುತ್ತದೆ. ಇದರಲ್ಲಿ ಸೈಕ್ಲಿಂಗ್‌, ವಾಕಿಂಗ್‌, ಡ್ರೈವಿಂಗ್‌, ಟಂಬ್ಲಿಂಗ್‌ ಸೇರಿದಂತೆ ವಿವಿಧ ರೀತಿಯ ಜಿಮ್‌ ಸೌಲಭ್ಯಗಳಿರುತ್ತವೆ. 85 ಮೀಟರ್‌ ಉದ್ದದ ಜಾಗದಲ್ಲಿ ಈ ಎಲ್ಲ ಸಲಕರಣೆಗಳನ್ನು ಅಳವಡಿಸಲಾಗುತ್ತದೆ. ಜಿಮ್‌ ಗಾಗಿ ಯಾವುದೇ ಕಟ್ಟಡದ ವ್ಯವಸ್ಥೆ ಇರುವುದಿಲ್ಲ. ಮೇಲ್ಭಾಗದಲ್ಲಿ ಶೀಟ್‌ ಅಳವಡಿಸಿ, ಮಳೆ ನೀರು, ಬಿಸಿಲು ತಾಗದಂತೆ ವ್ಯವಸ್ಥೆ ಮಾಡಿ ಕೊಡಲಾಗುತ್ತದೆ ಎಂದು ಸಹಾಯಕ ಕಾರ್ಯಕಾರಿ ಅಭಿಯಂತರ ರವಿ ಶಂಕರ್‌ ತಿಳಿಸಿದ್ದಾರೆ.

ಕೇಂದ್ರ, ರಾಜ್ಯ, ಮನಪಾದಿಂದ ಅನುದಾನ
ಅಮೃತ್‌ ಯೋಜನೆಯಡಿ ಬಿಡುಗಡೆಗೊಂಡಿರುವ 116 ಲಕ್ಷ ರೂ. ಅನುದಾನದ ಹಣವನ್ನು ಬಳಸಿಕೊಂಡು ಕದ್ರಿ ಪಾರ್ಕ್‌ನಲ್ಲಿ ಜಿಮ್‌ ಸೌಲಭ್ಯ ಕಲ್ಪಿಸಲಾಗುತ್ತದೆ. ಇದರಲ್ಲಿ ಕೇಂದ್ರ ಸರಕಾರದ ಶೇ. 50, ರಾಜ್ಯ ಸರಕಾರದ ಶೇ. 20 ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಶೇ. 30ರಷ್ಟು ಅನುದಾನವಿರುತ್ತದೆ. ಸದ್ಯ ಪಾರ್ಕ್‌ನಲ್ಲಿ ನಿರ್ಮಾಣವಾಗುತ್ತಿರುವ ಜಿಮ್‌ನ ಅಂದಾಜು ವೆಚ್ಚ ಸುಮಾರು 25 ಲಕ್ಷ ರೂ.ಗಳಾಗಿವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಯೋಜನೆಯ ಅನುದಾನದಲ್ಲಿ ಪಾರ್ಕ್‌ನಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಈಗಾಗಲೇ ವಾಕಿಂಗ್‌ ಟ್ರ್ಯಾಕ್  ಮಾಡಲಾಗಿದೆ. ವಿಶೇಷ ಸಾಮರ್ಥ್ಯದ ಮಕ್ಕಳ ಆಟದ ತಾಣವೂ ನಿರ್ಮಾಣ ಹಂತದಲ್ಲಿದ್ದು, ಸಲಕರಣೆಗಳನ್ನು ಇನ್ನಷ್ಟೇ ತರಿಸಬೇಕಿದೆ.

Advertisement

ತೋಟಗಾರಿಕಾ ಇಲಾಖೆಗೆ ಹಸ್ತಾಂತರ
ಅಮೃತ್‌ ಯೋಜನೆಯಡಿ ಕದ್ರಿ ಪಾರ್ಕ್‌ನಲ್ಲಿ ಜಿಮ್‌ ನಿರ್ಮಾಣವಾಗುತ್ತಿದೆ. ಕಾಮಗಾರಿ ಮುಗಿದ ಅನಂತರ ಪಾಲಿಕೆಯಿಂದ ತೋಟಗಾರಿಕಾ ಇಲಾಖೆಗೆ ಜಿಮ್‌ ನಿರ್ವಹಣೆಯ ಹೊಣೆಯನ್ನು ಹಸ್ತಾಂತರಿಸಲಾಗುವುದು. ಡಿಸೆಂಬರ್‌ ತಿಂಗಳಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಜ. 10ರ ಒಳಗಾಗಿ ಎಲ್ಲ ಪ್ರಕ್ರಿಯೆ ಮುಗಿಯಲಿದೆ.
 - ಮಹಮ್ಮದ್‌ ನಝೀರ್‌, ಪಾಲಿಕೆ ಆಯುಕ್ತರು

ಡಿಸೆಂಬರ್‌ ಅಂತ್ಯಕ್ಕೆ ಪೂರ್ಣ
ಕದ್ರಿ ಪಾರ್ಕ್‌ನಲ್ಲಿ ನಿರ್ಮಾಣವಾಗುತ್ತಿರುವ ಜಿಮ್‌ ಓಪನ್‌ ಜಿಮ್‌ ಆಗಿದ್ದು, ಸಾರ್ವಜನಿಕರು ಬಳಕೆ ಮಾಡಿಕೊಳ್ಳಬಹುದು. ಡಿಸೆಂಬರ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ.
 - ರವಿಶಂಕರ್‌, ಸಹಾಯಕ
    ಕಾರ್ಯಕಾರಿ ಅಭಿಯಂತರ 

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next