ಚಳಿಗಾಲ ತನ್ನೊಟ್ಟಿಗೆ ಮಂಜು, ಹಿಮವೆಂಬ ಸೌಂದರ್ಯದ ಜೊತೆಗೆ, ಚಳಿಕಂಪನವನ್ನೂ ಹೊತ್ತು ತರುತ್ತದೆ. ದಪ್ಪನೆ ಜಾಕೆಟ್, ಸ್ವೆಟರ್ ಧರಿಸಿರುವವರಿಗೆ ಚಳಿಯ ಬಗ್ಗೆ ಯಾವ ದಿಗಿಲೂ ಇಲ್ಲದಿರಬಹುದು. ಆದರೆ, ಬೀದಿ ಬದಿಯಲ್ಲಿ ಜೀವಿಸುವವರಿಗೆ, ಕಟ್ಟಡ ಕಾರ್ಮಿಕರಿಗೆ, ಆ ಕೂಲಿಕಾರರ ಪುಟ್ಟ ಪುಟ್ಟ ಮಕ್ಕಳಿಗೆ, ಕಷ್ಟಪಟ್ಟು ಬಾಡಿಗೆ ಹೊಂದಿಸಿ, ಮಿನಿಮಮ್ ಬಜೆಟ್ಟಲ್ಲಿ ಬದುಕುವ ಬಡವರಿಗೆ ಶಿಶಿರ ಋತು ಅಂದ್ರೆ ಅಷ್ಟಕ್ಕಷ್ಟೇ. ಚಳಿಗಾಲ ಮುಗಿದ್ರೆ ಸಾಕಪ್ಪಾ ಅಂತನ್ನಿಸ್ತಿರುತ್ತೆ.
ರಾಜರಾಜೇಶ್ವರಿ ನಗರದಲ್ಲಿ ಇಂಥ ಅಸಹಾಯಕರಿಗೆ ಅಲ್ಲಿನ ಮರಗಳೇ ಕಲ್ಪವೃಕ್ಷಗಳಾಗಿವೆ! “ಫ್ರೀ ಆನ್ ಟ್ರೀ’ ಎನ್ನುವ ಫಲಕವುಳ್ಳ ಮರಗಳಲ್ಲಿ, ಜಾಕೆಟ್‌ಗಳನ್ನು ನೇತುಹಾಕಿರುತ್ತಾರೆ. ಹಾಗೆಯೇ, ಅದರ ಕೆಳಗೆ, “ಅವಶ್ಯಕತೆ ಇದ್ದಲ್ಲಿ ತೆಗೆದುಕೊಳ್ಳಿ’ ಎನ್ನುವ ಒಕ್ಕಣೆ. ಕಡುಬಡವರು ಚಳಿಯಿಂದ ತಮ್ಮ ಶರೀರವನ್ನು ರಕ್ಷಿಸಿಕೊಳ್ಳಲು, ಮರಗಳಲ್ಲಿನ ಜಾಕೆಟ್‌ಗಳ ಮೊರೆ ಹೋಗುತ್ತಿದ್ದಾರೆ.
ರಾಜರಾಜೇಶ್ವರಿ ನಗರ ರೆಸಿಡೆಂಟ್ ಫೋರಂನ (ಆರ್‌ಆರ್‌ಎಫ್) ಸದಸ್ಯರಾದ ವಿ.ಎಸ್. ಶ್ರೀಕಾಂತ್ ಮತ್ತು ಅವರ ಬಳಗದ ಈ ಮಾನವೀಯ ಕೆಲಸ, ವಿಶಿಷ್ಟವಾಗಿ ಗಮನ ಸೆಳೆಯುತ್ತಿದೆ. ಶ್ರೀಕಾಂತ್ ಒಮ್ಮೆ ಫೇಸ್‌ಬುಕ್ ಜಾಲಾಡುತ್ತಿದ್ದರಂತೆ. ಬಲ್ಗೇರಿಯಾದಲ್ಲಿ ಅಮ್ಮ ಮತ್ತು ಮಗಳು, ತಮ್ಮಲ್ಲಿ ಹೆಚ್ಚುವರಿಯಾಗಿ ಇದ್ದ ಸ್ವೆಟರ್- ಜಾಕೆಟ್‌ಗಳನ್ನು ಮನೆ ಎದುರಿನ ಮರಕ್ಕೆ ನೇತುಹಾಕಿದರಂತೆ. ಆ ಬೆಚ್ಚಗಿನ ಉಡುಪುಗಳು ಕೆಲವೇ ಗಂಟೆಗಳಲ್ಲಿ ನಿರ್ಗತಿಕರ ಪಾಲಾದ ಸುದ್ದಿ ವೈರಲ್ ಆಗಿತ್ತು.
“ಬಲ್ಗೇರಿಯಾದಲ್ಲಿ ಮಾಡಿದಂಥ ಉಪಕಾರವನ್ನೇ ನಮ್ಮ ನೆಲದಲ್ಲಿ ಯಾಕೆ ಮಾಡಬಾರದು ಅಂತನ್ನಿಸಿ, ಒಂದಿಷ್ಟು ಜಾಕೆಟ್‌ಗಳನ್ನು ರಾಜರಾಜೇಶ್ವರಿ ನಗರದ ಕೆಲವು ಮರಗಳ ಮೇಲೆ ನೇತುಹಾಕಿದೆವು. ಆರಂಭದಲ್ಲಿ, ದೂರದಲ್ಲಿ ನಿಂತು ಗಮನಿಸಿದೆವು. ಯಾರೋ ಕಟ್ಟಡ ಕಾರ್ಮಿಕರು ಬಂದರು, ಮಗು ಎತ್ತಿಕೊಂಡಿದ್ದ ಬಡ ಗೃಹಿಣಿ ಬಂದಳು. ಇಷ್ಟಪಟ್ಟು ಜಾಕೆಟ್‌ಗಳನ್ನು ಕೊಂಡೊಯ್ದರು. ಖಂಡಿತಾ ಈ ಕೆಲಸ ಅಸಹಾಯಕರಿಗೆ ಮುಟ್ಟುತ್ತದೆ ಅಂತನ್ನಿಸಿ, ಬೇರೆ ಬೇರೆ ಮರಗಳಲ್ಲಿ, ಜಾಕೆಟ್‌ಗಳನ್ನು ಇಟ್ಟೆವು’ ಅಂತಾರೆ ಶ್ರೀಕಾಂತ್.
ಚಳಿಗಾಲದಲ್ಲಿ ಕೂಲಿ- ಕಾರ್ಮಿಕರ ಮಕ್ಕಳು ಬೀದಿ ಬದಿ ಕಂಪಿಸುತ್ತಾ ನಿಂತಿರುತ್ತಾರೆ. ಜಾಕೆಟ್- ಧರಿಸಿ, ರಸ್ತೆಯಲ್ಲಿ ಹೋಗುವವರನ್ನು ಅವರು ಅಸಹಾಯಕ ಕಂಗಳಿಂದ ನೋಡುವಾಗ, ಎಂಥವರಿಗೂ ಅಯ್ಯೋ ಅನ್ನಿಸುತ್ತದೆ. ಚಳಿಗಾಲ ಬಂದು, ಅಂಥ ಬಡವರಿಗೆ ಸೇವೆ ಮಾಡಲು ಪ್ರೇರೇಪಿಸಿತು.
-ವಿ.ಎಸ್. ಶ್ರೀಕಾಂತ್, ಆರ್‌ಆರ್‌ಎಫ್ ಸದಸ್ಯ