ಪಾಂಡವಪುರ: ಹೈಕೋರ್ಟ್ ಆದೇಶದಂತೆ ಬಡವರಿಗೆ ಉಚಿತ ಕಾನೂನು ಸೇವೆ ಸಲ್ಲಿಸುವ ಉದ್ದೇಶದಿಂದ ಜಿಲ್ಲಾ, ತಾಲೂಕು ಕಾನೂನು ಸೇವಾ ಪ್ರಾಧಿಕಾರ ಕೆಲಸ ಮಾಡುತ್ತಿದೆ ಎಂದು ಜೆಎಂಎಫ್ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ.ಕೆ.ರವಿಕಾಂತ್ ತಿಳಿಸಿದರು.
ತಾಲೂಕಿನ ಬೇಬಿಬೆಟ್ಟದಲ್ಲಿ ನಡೆಯು ತ್ತಿರುವ ಭಾರಿ ದನಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕಾನೂನು ಅರಿವು ಹಾಗೂ ಸೌಹಾರ್ದತೆ ಮತ್ತು ಸಹಬಾಳ್ವೆ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನಾತ್ಮಕ ಕಾನೂನಿನಡಿ ಬಡವ- ಶ್ರೀಮಂತರೆಂಬ ಭೇದ- ಭಾವವಿರುವುದಿಲ್ಲ. ಕಾನೂನು ಎಲ್ಲರಿಗೂ ಒಂದೆ ಎಂಬ ಭಾವನೆಯಿಂದ ಕಾನೂನು ಸೇವಾ ಪ್ರಾಧಿಕಾರ ಕೆಲಸ ಮಾಡುತ್ತಿದೆ. ಬಡವರಿಗೆ ಸಮಸ್ಯೆ ಬಂದಾಗ ಈ ಉಚಿತ ಕಾನೂನು ನೆರವಾಗುತ್ತದೆ ಎಂದರು.
ದೌರ್ಜನ್ಯ ನಿಲ್ಲಲಿ: ಹೆಣ್ಣು ಮಕ್ಕಳ ರಕ್ಷಣೆಗೆ ಅನೇಕ ಕಾನೂನುಗಳಿವೆ. ಆದರೆ ದುರದೃ ಷ್ಟವಶಾತ್ ಬಹಳಷ್ಟು ಕುಟುಂಬಗಳಲ್ಲಿ ಇಂದಿಗೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಅಂತಹ ಪ್ರಕರಣಗಳು ಇಂದು ನಮ್ಮ ನ್ಯಾಯಾಲಯದಲ್ಲಿವೆ. ಪುರುಷ ಪ್ರಧಾನವಾದ ಭಾರತ ದೇಶದಲ್ಲಿ ಇಂದಿಗೂ ಹೆಣ್ಣಿನ ಮೇಲೆ ಅನೇಕ ಶೋಷಣೆಗಳು ನಡೆಯುತ್ತಿದೆ. ಮೊದಲು ಅವು ನಿಲ್ಲಬೇಕು. ಸಂವಿಧಾನದಲ್ಲಿ ಹೆಣ್ಣಿನ ರಕ್ಷಣೆಗೆ ಸಾಕಷ್ಟು ಕಾನೂನುಗಳಿವೆ. ಅವು ಗಳನ್ನು ಉಲ್ಲಂಘಿಸಿದಲ್ಲಿ ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ ಎಂದು ಹೇಳಿದರು.
ಹೆಣ್ಣು ಭ್ರೂಣಹತ್ಯೆ ಅಪರಾಧ: ಹೆಣ್ಣು ಮಕ್ಕಳ ಭ್ರೂಣಹತ್ಯೆ ಮಹಾ ಅಪರಾಧ ವಾಗಿದ್ದು, ಮಂಡ್ಯ ಜಿಲ್ಲೆ 7ನೇ ಸ್ಥಾನದಲ್ಲಿದೆ. ಹೆಣ್ಣು ಮಗು ಭ್ರೂಣದಲ್ಲಿದ್ದಾಗಲೇ ಅದನ್ನು ಪರೀಕ್ಷಿಸಿ ಹೆಣ್ಣು ಮಗುವಾದರೆ ಹುಟ್ಟುವ ಮುಂಚಿಯೇ ಅದನ್ನು ಹತ್ಯೆ ಮಾಡಲಾ ಗುತ್ತಿದೆ. ಇಂತಹ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಲಿಂಗ ತಾರತಮ್ಯ ಮಾಡುವುದೇ ಕಾನೂನಿನ ಪ್ರಕಾರ ಅಪರಾಧ. ಆದರೆ ಕೆಲವು ಆಸ್ಪತ್ರೆಗಳಲ್ಲಿ ಲಿಂಗಪತ್ತೆ ಕಾರ್ಯ ನಿರಂತರವಾಗಿ ಮುಂದುವರಿದಿದೆ. ಒಂದು ವೇಳೆ ಅಂತಹ ಘಟನೆಗಳು ಕಂಡುಬಂದರೆ ಸಾರ್ವಜನಿಕರು ಕೂಡಲೇ ಸಮೀಪದ ದೂರು ಪ್ರಾಧಿಕಾರಕ್ಕೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಬಾಲ್ಯ ವಿವಾಹ ತಡೆಗಟ್ಟಿ: ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹ ನಡೆಯುತ್ತಿದೆ. ಹೆಣ್ಣು ಮಕ್ಕಳಿಗೆ ಇನ್ನೂ 18 ವರ್ಷ ತುಂಬಿರುವುದಿಲ್ಲ. ಆದರೆ ಹೆಣ್ಣುಮಕ್ಕಳ ಪೋಷಕರು ತಮ್ಮ ಜವಾಬ್ದಾರಿ ಯನ್ನು ಕಳೆದುಕೊಳ್ಳುವ ಸಲುವಾಗಿ ಮದುವೆ ಮಾಡಿಬಿ ಡುತ್ತಾರೆ. ಗಂಡಿಗೆ 21 ವರ್ಷ ಹಾಗೂ ಹೆಣ್ಣಿಗೆ 18 ವರ್ಷ ತುಂಬಿದ ಬಳಿಕ ವಿವಾಹ ಮಾಡಬೇಕು.
ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡಬೇಡಿ. ವಯಸ್ಸಿಗೆ ಮುಂಚಿತವಾಗಿ ವಿವಾಹ ಮಾಡಿದರೆ ಅವರು ಮಾನಸಿಕ ಖನ್ನತೆಗೊಳ ಗಾಗಿ ನೆಮ್ಮದಿ ಕಳೆದುಕೊಳ್ಳುತ್ತಾರೆ. ಜತೆಗೆ ಅವರಿಗೆ ಹುಟ್ಟುವ ಮಕ್ಕಳು ಅಂಗವಿಕಲತೆಗೆ ಒಳಗಾಗಿ ದೈಹಿಕ ಸಾಮರ್ಥ್ಯವನ್ನು ಕಳೆದುಕೊಳ್ಳತ್ತಾರೆ ಎಂದರು.
ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಇತರರಿದ್ದರು.