ಬೈಲಹೊಂಗಲ: ಮಹಿಳೆಯರಿಗಾಗಿ ಉಚಿತ ಕಾನೂನು ನೆರವು ನೀಡಲು ಪ್ರತಿ ತಾಲೂಕು ಹಂತಗಳಲ್ಲಿ ಕಾನೂನು ಸೇವಾ ಸಮಿತಿಗಳಿವೆ. ಇಲ್ಲಿ ಉಚಿತ ಕಾನೂನು ನೆರವು ನೀಡಿ ಮಹಿಳೆಯರಿಗೆ ಕಾನೂನು ಸಂಬಂಧಿ ಸಿದ ವ್ಯಾಜ್ಯ ಕಲಹ ಪರಿಹರಿಸಲು ಸಹಾಯ ನೀಡಲಾಗುವುದೆಂದು ಹಿರಿಯ ದಿವಾಣಿ ನ್ಯಾಯಾಧೀಶೆ ಕಾವೇರಿ ಕಲ್ಮಠ ಹೇಳಿದರು.
ಪಟ್ಟಣದ ಈರಮ್ಮ ಬಸಪ್ಪ ಗಣಾಚಾರಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಅಣಕು ಸಂಸತ್ತು ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಸೇವಾ ಸಮಿತಿಗೆ ಬೆರಳೆಣಿಕೆಯಷ್ಟು ಅರ್ಜಿ ಬರುತ್ತವೆ. ಮಹಿಳೆಯರು ಇದರ ಸದುಪಯೋಗ ಪಡೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಧಾನ ದಿವಾಣಿ ನ್ಯಾಯಾಧಿಧೀಶೆ ಚೈತ್ರಾ ಎ.ಎಂ ಮಾತನಾಡಿ, ಕಾನೂನು ತಿಳಿವಳಿಕೆ ಇಲ್ಲ ಎಂಬುದು ಕ್ಷಮಿಸಲು ಅರ್ಹ ಹೇಳಿಕೆ ಅಲ್ಲ. ಪ್ರತಿಯೊಬ್ಬರೂ ಅಗತ್ಯ ಕಾನೂನು ಅರಿವು ಹೊಂದಲೇಬೇಕು. ಮಹಿಳೆಯರಿಗೆ ಇರುವ ಉಚಿತ ಕಾನೂನು ನೆರವನ್ನು ಬಳಸಿಕೊಳ್ಳಬೇಕು. ಅಣುಕು ಸಂಸತ್ತು ಸ್ಪರ್ಧೆ ಮೂಲಕ ವಿದ್ಯಾರ್ಥಿಗಳಲ್ಲಿ ಸಂಸದೀಯ ವ್ಯವಸ್ಥೆ ಮಹತ್ವ ಹಾಗೂ ಶಾಸಕಾಂಗದ ಪ್ರಾಮುಖ್ಯತೆ ತಿಳಿಸುವುದು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ| ಸಿ.ಬಿ. ಗಣಾಚಾರಿ ಮಾತನಾಡಿ, ನಮ್ಮ ಮನೆಯಿಂದಲೇ ಮಹಿಳಾ ಕಾನೂನು ಅರಿವು ಪ್ರಾರಂಭವಾಗಬೇಕು. ಸ್ತ್ರೀ-ಪುರುಷ ತಾರತಮ್ಯ ಮರೆತು ಮಹಿಳೆಯರು ಸಮಾನ ಅವಕಾಶ ಪಡೆಯುವಂತಾಗಬೇಕು. ಅಣಕು ಸಂಸತ್ತು ಕಾರ್ಯಕ್ರಮ ಯುವ ಜನತೆಯಲ್ಲಿ ಸಂಸತ್ತಿನ ಕಲಾಪಗಳ ಬಗ್ಗೆ ತಿಳಿವಳಿಕೆ ಮೂಡಿಸುತ್ತದೆ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್. ಮೆಳವಂಕಿ, ಅಪರ ಸರಕಾರಿ ವಕೀಲ ರಮೇಶ ಕೋಲಕಾರ್, ಕಾರ್ಯದರ್ಶಿ ಡಿ.ವೈ. ಗರಗದ, ಉಪಪ್ರಾಚಾರ್ಯ ಎಸ್.ಆರ್. ಕಲಹಾಳ, ತಾಲೂಕಿನ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್.ಐ. ವೆಂಕಟಪ್ಪನವರು ನಿರೂಪಿಸಿದರು. ಸಂಗಮೇಶ್ವರ ಕುಲಕರ್ಣಿ ವಂದಿಸಿದರು.