ಸಿದ್ದಾಪುರ: ಸಮಾಜದಿಂದ ಸಾಕಷ್ಟು ಪಡೆದಿದ್ದೇವೆ. ಸಮಾಜದಿಂದ ಪಡೆದುದರಲ್ಲಿ ಸ್ವಲ್ಪವಾದರೂ ಸಮಾಜಕ್ಕೆ ಕೊಡಬೇಕು. ಕೊಡುವುದರಲ್ಲಿ ಇರುವ ಸುಖ ಪಡೆಯುವುದರಲ್ಲಿ ಇಲ್ಲ ಎಂದು ಎಂದು ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೆಬಲ್ ಫೌಂಡೇಶನ್ ಅಧ್ಯಕ್ಷ ಬಿ. ಸತೀಶ್ ಕಿಣಿ ಬೆಳ್ವೆ ಅವರು ಹೇಳಿದರು.
ಅವರು ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೆಬಲ್ ಫೌಂಡೇಶನ್, ಲಯನ್ಸ್ ಕ್ಲಬ್ ಸಂತೆಕಟ್ಟೆ, ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಫೌಂಡೇಶನ್ ಸಭಾಂಗಣದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂತೆಕಟ್ಟೆ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಜೀಸನ್ ಡಯಾಸ್ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸಂಘ- ಸಂಸ್ಥೆಗಳು ಹಮ್ಮಿಕೊಳ್ಳು ವ ವೈದ್ಯಕೀಯ ಚಿಕಿತ್ಸೆಯ ಉಚಿತ ಸೇವೆಗಳು ಗ್ರಾಮೀಣ ಭಾಗದ ಜನತೆಗೆ ಪ್ರಯೋಜನವಾಗಲಿದೆ. ಸಂಸ್ಥೆಗಳ ಉತ್ತಮ ಸೇವೆಯು, ಗೌರವವನ್ನು ಹೆಚ್ಚಿಸುವುದರೊಂದಿಗೆ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದರು.
ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೆಬಲ್ ಫೌಂಡೇಶನ್ ಟ್ರಸ್ಟಿ ಬಿ. ಉಮೇಶ್ ಕಿಣಿ ಬೆಳ್ವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಮಣಿಪಾಲ ಕಸ್ತೂರ್ಬಾ ಹಾಸ್ಪಿಟಲ್ ಕಣ್ಣಿನ ತಜ್ಞ ಡಾ| ಕಿರಣ್, ಸಮುದಾಯ ಆರೋಗ್ಯ ವಿಭಾಗದ ಡಾ| ಅರ್ಪಣಾ, ಮಧುಮೇಹ ವಿಭಾಗದ ಡಾ| ಶುಭಾ ಜಿ. ಮಯ್ಯ, ಡಾ| ಅನ್ನಾ, ಸಂತೆಕಟ್ಟೆ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ, ಸುದರ್ಶನ ನಾಯಕ್, ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಹರಿಶ್ಚಂದ್ರ ಆಚಾರ್ಯ, ಆವರ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ಉಮೇಶ್ ಶೆಟ್ಟಿ, ಶಿಬಿರದ ಸಂಯೋಜಕ ನೀತಿನ್, ನಿರ್ದೇಶಕರಾದ ಬಿ. ಗೋಪಾಲಕೃಷ್ಣ ಕಿಣಿ, ಬಿ. ಹರೀಶ ಕಿಣಿ, ಬಿ. ಗೋಕುಲ್ ಕಿಣಿ ಮತ್ತಿತತರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಮಣಿಪಾಲ ಕಸ್ತೂರ್ಬಾ ಹಾಸ್ಪಿಟಲ್‌ನ ನುರಿತ ವೈದ್ಯರಿಂದ ಕಣ್ಣಿನ ತಪಾಸಣೆ, ಮಧುಮೇಹ, ಆಹಾರ ಮತ್ತು ಪತ್ಯೆ, ಮಹಿಳೆಯರಿಗೆ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಸಲಹೆಗಳನ್ನು ನೀಡಲಾಯಿತು. ಸುಮಾರು 400ಕ್ಕೂ ಹೆಚ್ಚು ಜನರು ಶಿಬಿರದಿಂದ ಪ್ರಯೋಜನ ಪಡೆದರು. ಕಣ್ಣಿನ ತಪಾಸಣೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದರು. ಇದರಲ್ಲಿ 110 ಜನರಿಗೆ ಕನ್ನಡಕದ ಆವಶ್ಯಕತೆ ಇದ್ದು, ಫೌಂಡೇಶನ್ ಉಚಿತವಾಗಿ ಕನ್ನಡಕವನ್ನು ನೀಡುವ ಭರವಸೆ ನೀಡಿದರು.
ಬಿ. ಗೋಕುಲ್ ಕಿಣಿ ಸ್ವಾಗತಿಸಿ, ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು. ಬಿ. ಹರೀಶ ಕಿಣಿ ವಂದಿಸಿದರು.