ಹಳೆಯಂಗಡಿ: ಕೃಷಿಯೊಂದಿಗೆ ಪರ್ಯಾಯವಾಗಿ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಲು ಮಹಿಳೆಯರಿಗೆ ಉತ್ತಮ ಅವಕಾಶ ಇದೆ. ಸರಕಾರದ ವಿವಿಧ ಯೋಜನೆಗಳು ಸಹ ಇದಕ್ಕೆ ಸಹಕಾರಿಯಾಗುತ್ತಿದೆ ಎಂದು ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜಾ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಶುಸಂಗೋಪನ ಇಲಾಖೆ ವತಿಯಿಂದ ಇಂದಿರಾನಗರದ ಪಶು ಸಂಗೋಪನ ಕೇಂದ್ರದಲ್ಲಿ ಪಶುಗಳಿಗೆ ಉಚಿತ ಕಾಲು ಬಾಯಿ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಚಾಲನೆ ನೀಡಿ, ಲಾಭದೊಂದಿಗೆ ಹಲವು ಉತ್ಪನ್ನಗಳನ್ನು ಉತ್ಪಾದಿಸಿಕೊಂಡು ಪರಿಸರದಲ್ಲಿ ವ್ಯವಹಾರ ನಡೆಸಲು ಹೈನುಗಾರಿಕೆಯಿಂದ ಸಾಧ್ಯವಿದೆ. ಪಶುಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲು ಇಂತಹ ಲಸಿಕಾ ಕಾರ್ಯಕ್ರಮಗಳಿಗೆ ವಿಶೇಷ ಆದ್ಯತೆ ನೀಡಬೇಕಾಗುತ್ತದೆ ಎಂದರು.
ತಾಲೂಕು ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಪಿ.ಸಿ.ಎ. ಬ್ಯಾಂಕ್ ನಿರ್ದೇಶಕ ಎಚ್. ವಸಂತ ಬೆರ್ನಾಡ್, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ಮೀರಾಬಾ„ ಕೆ, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್‌ಅಝೀಝ್, ವೈದ್ಯಾಧಿಕಾರಿಗಳಾದ ಡಾ| ನೇತ್ರಾ ಶಂಕರ್, ಡಾ| ವಿಶ್ವರಾದ್ಯ, ಪಶುವೈದ್ಯ ಪರಿವೀಕ್ಷಕಿ ಲೀಲಾವತಿ, ಮಸ್ಕರೇನ್ಹಸ್, ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವೆಂಕಟೇಶ್ ಸ್ವಾಗತಿಸಿ, ನಿರೂಪಿಸಿದರು.