ಬೆಳಗಾವಿ: ಈ ದೇಶ ಯಾರೋ ಒಬ್ಬರ ಸ್ವತ್ತಲ್ಲ, ಅದಾನಿ ಅವರ ಸ್ವತ್ತಲ್ಲ. ಈ ದೇಶ ರೈತರು, ಯುವಕರು, ಬಡವರು ಸೇರಿದಂತೆ ಎಲ್ಲರಿಗೂ ಸೇರಿದ್ದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಸೋಮವಾರ ಯುವ ಕ್ರಾಂತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ ಜೋಡೋ ಯಾತ್ರೆ ಕರ್ನಾಟಕದ ಮೂಲಕ ಸಾಗಿದ ಸಂದರ್ಭದಲ್ಲಿ ಅಭೂತಪೂರ್ವ ಬೆಂಬಲ ನೀಡಿ ಯಾತ್ರೆ ಯಶಸ್ಸುಗೊಳಿಸಿದ್ದಿರಿ.ಅದಕ್ಕಾಗಿ ಕರ್ನಾಟಕದ ಜನತೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ನೀರುದ್ಯೋಗ, ರಾಜ್ಯದಲ್ಲಿ ನಡೆದಿರುವ ಹಗರಣಗಳು ಮತ್ತು ಗುತ್ತಿಗೆದಾರರಿಂದ ಸರ್ಕಾರ ಶೇ.40ರಷ್ಟು ಕಮಿಷನ್ ಪಡೆಯುತ್ತದೆ ಎಂಬ ಆರೋಪ ಮಾಡಿದ ರಾಹುಲ್ ಗಾಂಧಿ ಅವರು, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಯುವಕರು ನನ್ನ ಬಳಿ ಬಂದು ಈ ರಾಜ್ಯದಲ್ಲಿ ಉದ್ಯೋಗವಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪ್ರತಿ ಪದವೀಧರರಿಗೆ ಎರಡು ವರ್ಷಕ್ಕೆ ಪ್ರತಿ ತಿಂಗಳು 3,000 ರೂ. ಮತ್ತು ಡಿಪ್ಲೋಮಾ ಹೊಂದಿರುವವರಿಗೆ ಎರಡು ವರ್ಷಗಳವರೆಗೆ 1,500 ರೂ. ನೀಡಲಿದೆ, ನಾವು ಅಲ್ಲಿಗೇ ನಿಲ್ಲುವುದಿಲ್ಲ. ಐದು ವರ್ಷದೊಳಗೆ 10 ಲಕ್ಷ ಯುವಕ ಯುವತಿಯರಿಗೆ ಉದ್ಯೋಗ ನೀಡುತ್ತೇವೆ ಮತ್ತು ರಾಜ್ಯದಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದರು.
ಮಹಿಳೆಯರು ಕೂಡ ಯಾತ್ರೆಯಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಮಹಿಳೆಯರಿಗೆ ಮಾಸಿಕ 2,000 ರೂ., ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ಮತ್ತು 2,000 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದರು.
ಭಾರತ್ ಜೋಡೋ ಯಾತ್ರೆಯಲ್ಲಿ ಎಲ್ಲರೂ ಒಗ್ಗೂಡಿ ನಡೆದಿದ್ದೇವೆ ಮತ್ತು ಯಾವುದೇ ದ್ವೇಷ, ಹಿಂಸೆ ಇಲ್ಲ. ಎಲ್ಲರಿಗೂ ಸಹೋದರತೆ ಮತ್ತು ಗೌರವವಿತ್ತು. ದ್ವೇಷದ ಮಾರುಕಟ್ಟೆಯಲ್ಲಿ ಲಕ್ಷಾಂತರ ಜನರು ಪ್ರೀತಿಯ ಅಂಗಡಿಗಳನ್ನು ತೆರೆದರು. ಇದು ನಮ್ಮ ಭಾರತ” ಎಂದು ರಾಹುಲ್ ಗಾಂಧಿ ಹೇಳಿದರು.