Advertisement

ರೈತರ ಮಕ್ಕಳಿಗೆ ಖಾಸಗಿ ಕಾಲೇಜಲ್ಲೂ ಉಚಿತ ಶಿಕ್ಷಣ

03:45 AM Jun 04, 2017 | Team Udayavani |

ಬಾಗಲಕೋಟೆ: ಸಾಲಬಾಧೆ ಅಥವಾ ಬೆಳೆ ಹಾನಿಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಸದ್ಯ ಸರ್ಕಾರ ಉಚಿತ ಶಿಕ್ಷಣ ಕೊಡಿಸುತ್ತಿದೆ. ಇದು ಸರ್ಕಾರಿ ಶಾಲಾ-ಕಾಲೇಜುಗಳಿಗೆ ಮಾತ್ರ ಸಿಮೀತವಾಗಿತ್ತು. ಅದನ್ನು ಖಾಸಗಿ ಶಾಲೆ-ಕಾಲೇಜಿಗೂ ವಿಸ್ತರಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

Advertisement

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ವೃತ್ತಿ ಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಗಳು ಜಂಟಿಯಾಗಿ ಹೊಸ ಮಾರ್ಗಸೂಚಿ ತಯಾರಿಸಲು ಮುಂದಾಗಿವೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಉನ್ನತ ಶಿಕ್ಷಣವರೆಗೂ ಉಚಿತ ಶಿಕ್ಷಣ: ಆತ್ಮಹತ್ಯೆ ಮಾಡಿಕೊಂಡ ರೈತರ ಅರ್ಹ ಪ್ರಕರಣಗಳಲ್ಲಿ ಅವರ ಮಕ್ಕಳಿಗೆ ಉನ್ನತ ಶಿಕ್ಷಣವರೆಗೆ ಉಚಿತ ಶಿಕ್ಷಣ ಕೊಡಲು ಸರ್ಕಾರದ ಶಿಕ್ಷಣ ಇಲಾಖೆ (ಆದೇಶ ಸಂಖ್ಯೆ-ಇಡಿ/31/ವಿವಿಧ-2015) 2015 ನ.13ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು, ಪ್ರಾಥಮಿಕ, ಪ್ರೌಢ, ಪಪೂ, ಪದವಿ ಅಥವಾ ವೃತ್ತಿ ಶಿಕ್ಷಣವನ್ನು ಸರ್ಕಾರಿ ಕಾಲೇಜುಗಳಲ್ಲಿ ಪೂರೈಸಿದರೆ ಅದರ ಶುಲ್ಕ, ವಸತಿ ಸೌಲಭ್ಯ ಒದಗಿಸಲು ಅವಕಾಶವಿದೆ. ಅದೇ ಖಾಸಗಿ ಕಾಲೇಜುಗಳಲ್ಲಿ ಕಲಿತರೆ ಅದರ ಶುಲ್ಕ ಪಾವತಿಸಲು ಅವಕಾಶವಿಲ್ಲ.

ಹೀಗಾಗಿ ಖಾಸಗಿ ಶಾಲೆ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವ ನೊಂದ ಕುಟುಂಬದ ಮಕ್ಕಳಿಗೆ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆ ಸರ್ಕಾರದ ಮುಂದಿದೆ. ಆದ್ದರಿಂದ ಈಗಿರುವ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವ ಮಾರ್ಗಸೂಚಿಗಳಲ್ಲಿ ಬದಲಾವಣೆ ತರುವ ಅಗತ್ಯವಿದ್ದು, ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ, ಉನ್ನತ ಶಿಕ್ಷಣ ಇಲಾಖೆ ಸಚಿವರೊಂದಿಗೆ ಚರ್ಚೆ ಮಾಡಿದ್ದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ “ಉದಯವಾಣಿ’ಗೆ ತಿಳಿಸಿದ್ದಾರೆ.

ಜಿಲ್ಲೆಯ ಪ್ರಕರಣ ಕಾರಣ: ಜಿಲ್ಲೆಯ ಆತ್ಮಹತ್ಯೆ ಮಾಡಿಕೊಂಡ ರೈತನ ಪ್ರಕರಣವೊಂದು ಇಂಥವೊಂದು ಹೊಸ ಚಿಂತನೆಗೆ ಕಾರಣವಾಗಿದೆ. ಮುಧೋಳ ತಾಲೂಕು ಲಕ್ಷಾನಟ್ಟಿಯ ಲೋಕಣ್ಣ ಕನಕಪ್ಪನವರ ಎಂಬ ರೈತ, 2015ರ ಆ.13ರಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಅವರ ಇಬ್ಬರು ಮಕ್ಕಳಲ್ಲಿ ಓರ್ವ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಫಾರ್ಮಸಿ ಕಾಲೇಜಿನಲ್ಲಿ ಹಾಗೂ ಇನ್ನೊಬ್ಬ ಮಗ ಮಂಗಳೂರಿನ ಶ್ರೀನಿವಾಸ ತಾಂತ್ರಿಕ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದ. ರೈತ ಲೋಕಣ್ಣ ಅವರ ಪತ್ನಿ ಅನಸೂಯಾ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ನೀಡುವ ಉಚಿತ ಶಿಕ್ಷಣ ಸೌಲಭ್ಯವನ್ನು ತಮ್ಮ ಇಬ್ಬರೂ ಮಕ್ಕಳಿಗೆ ನೀಡುವಂತೆ ಕೋರಿದ್ದರು.

Advertisement

ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಲಾಗುತ್ತಿದೆ. ಆದರೆ, ಖಾಸಗಿ ಶಾಲೆ- ಕಾಲೇಜುಗಳಲ್ಲಿ ಕಲಿತರೆ ಅವರಿಗೆ ಶುಲ್ಕ ಮರುಪಾವತಿ ಹೇಗೆ ಮಾಡಬೇಕು ಎಂಬುದರ ಕುರಿತು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿದ್ದು, ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
-ಉಮಾಶ್ರೀ, ಜಿಲ್ಲಾ ಉಸ್ತುವಾರಿ ಸಚಿವೆ

ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ಖಾಸಗಿ ಕಾಲೇಜಿನಲ್ಲಿ ಕಲಿತರೆ ಅವರಿಗೆ ಶುಲ್ಕ ಪಾವತಿಸಲು ಹೊಸ ನಿಯಮದ ಆದೇಶ ಮಾಡಬೇಕು. ಈ ಕುರಿತು ಬಾಗಲಕೋಟೆಯ  ಪ್ರಕರಣ ನನ್ನ ಗಮನಕ್ಕೂ ಬಂದಿದ್ದು, ಈ ಕುರಿತು ಸಂಬಂಧಿಸಿದವರೊಂದಿಗೆ ಚರ್ಚಿಸುವೆ.
-ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ

– ಶ್ರೀಶೈಲ ಕೆ.ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next