ಬೆಂಗಳೂರು: ನಗರದಲ್ಲಿ ನಮ್ಮ ಮೆಟ್ರೋಗೆ ಸಂಪರ್ಕ ಕಾರ್ಯ ನಿರ್ವಹಿಸಲು ಎಲೆಕ್ಟ್ರಿಕ್ ಬೈಕ್ ಹಾಗೂ ಕಾರುಗಳ ಸೇವೆಯನ್ನು ಪರಿಚಯಿಸಲು ಮುಂದಾಗಿರುವ ಬಿಬಿಎಂಪಿ, ಎಲೆಕ್ಟ್ರಿಕ್ ಬೈಕ್‌ಗಳ ಬಳಕೆಯನ್ನು ಉಚಿತಗೊಳಿಸಲು ನಿರ್ಧರಿಸಿದೆ.
ಬಿಬಿಎಂಪಿಯ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ತಲಾ 200 ಎಲೆಕ್ಟ್ರಿಕ್ ಬೈಕ್ ಹಾಗೂ ಕಾರುಗಳನ್ನು ಪರಿಚಯಿಸುವ ಯೋಜನೆ ಘೋಷಿಸಲಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವ ಮೂಲಕ ಮಾಲಿನ್ಯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವುದು ಯೋಜನೆ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಕೆಲದಿನಗಳ ಕಾಲ ಬೈಕ್‌ಗಳ ಸೇವೆಯನ್ನು ಉಚಿತವಾಗಿ ನೀಡಲಿದ್ದು, ನಂತರದಲ್ಲಿ ಕನಿಷ್ಠ ದರ ನಿಗದಿಪಡಿಸುವ ಚಿಂತನೆ ಪಾಲಿಕೆಗಿದೆ.
ಇತ್ತೀಚೆಗೆ ಚೀನಾ ಪ್ರವಾಸ ಕೈಗೊಂಡಿದ್ದ ಮೇಯರ್ ಆರ್.ಸಂಪತ್‌ರಾಜ್, ಅಲ್ಲಿನ ಎಲೆಕ್ಟ್ರಿಕ್ ವಾಹನಗಳ ಬಳಕೆ ಕುರಿತು ಅಧ್ಯಯನ ನಡೆಸಿದ್ದಾರೆ. ಅದರಂತೆ ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು, ಪಾಲಿಕೆಯಿಂದಲೇ 400 ಎಲೆಕ್ಟ್ರಿಕ್ ವಾಹನ ಪರಿಚಯಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತಿದೆ.
ಸೈಕಲ್ ಬಳೆಕೆಯೂ ಉಚಿತ: ಮೈಸೂರು ಮಾದರಿಯಲ್ಲಿ “ಟ್ರಿಣ್ ಟ್ರಿಣ್’ ಯೋಜನೆ ಜಾರಿಗೊಳಿಸಲಿರುವ ಬಿಬಿಎಂಪಿ, ನಗರ ಭೂ ಸಾರಿಗೆ ನಿರ್ದೇಶನಾಲಯದ ಸಹಕಾರದೊಂದಿಗೆ 80.18 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸುತ್ತಿದೆ.
ಪ್ರಾರಂಭದಲ್ಲಿ ಸೈಕಲ್ ಸೇವೆಯನ್ನು ಉಚಿತವಾಗಿ ನೀಡಿ, ನಂತರ ಕನಿಷ್ಠ ದರ ನಿಗದಿಪಡಿಸಲಾಗುತ್ತದೆ. ಈಗಾಗಲೇ 71 ಕಿ.ಮೀ ಮಾರ್ಗದಲ್ಲಿ ಸೈಕಲ್ ಪಥ ನಿರ್ಮಿಸಲು ಯೋಜಿಸಿದ್ದು, ಪ್ರತಿ 250 ರಿಂದ 350 ಮೀಟರ್‌ಗೆ ಒಂದರಂತೆ ನಗರದಲ್ಲಿ ಒಟ್ಟು 345 ಸೈಕಲ್ ನಿಲುಗಡೆ ತಾಣ ನಿರ್ಮಿಸಲಾಗುತ್ತದೆ. ಜತೆಗೆ 6 ಸಾವಿರ ಸೈಕಲ್ ಖರೀದಿಸಲಾಗುತ್ತಿದೆ.
ಮಾಲಿನ್ಯ ನಿಯಂತ್ರಣ ಉದ್ದೇಶದಿಂದ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪಾಲಿಕೆಯಿಂದ ಖರೀದಿಸುವ ಎಲೆಕ್ಟ್ರಿಕ್ ಬೈಕ್‌ಗಳ ಬಳಕೆಗೆ ಆರಂಭದಲ್ಲಿ ಯಾವುದೇ ಶುಲ್ಕ ವಿಧಿಸುವುದಿಲ್ಲ. ಇದರೊಂದಿಗೆ ಸೈಕಲ್‌ಗಳ ಬಳಕೆಗೂ ಉತ್ತೇಜನ ನೀಡಲಾಗುತ್ತಿದೆ.
-ಆರ್.ಸಂಪತ್‌ರಾಜ್, ಮೇಯರ್