ಧಾರವಾಡ: ಪೆಡಲ್ ಇದ್ದರೆ ಟೈರ್ ಇಲ್ಲ, ಟೈರ್ ಸರಿ ಇದ್ದರೆ ಪೆಡಲ್‌ಗಳೇ ಇಲ್ಲ. ಇವೆರಡೂ ಸರಿ ಇದ್ದರೆ ಟೈರ್ ಒಳಗಡೆಯ ಟ್ಯೂಬ್‌ಗಳೇ ಮಾಯ. ಇನ್ನು ಹ್ಯಾಂಡಲ್ ಸ್ಥಿತಿಯಂತೂ ಅಷ್ಟಕಷ್ಟೆ. ಒಂದಿಷ್ಟಕ್ಕೆ ಬುಟ್ಟಿಗಳನ್ನು ಜೋಡಿಸಿಯೇ ಇಲ್ಲ. ಬೈಸಿಕಲ್‌ಗಳ ಕಿಟ್ ಅಂತೂ ಕೇಳ್ಳೋದೇ ಬೇಡ. ಜಿಲ್ಲೆಯ ಗ್ರಾಮೀಣ ಭಾಗದ ಸರಕಾರಿ ಪ್ರೌಢಶಾಲೆಗಳ 8ನೇ ತರಗತಿಯ ಅರ್ಹ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿತರಿಸುವ ಉಚಿತ ಬೈಸಿಕಲ್‌ಗಳ ದುಸ್ಥಿತಿಯಿದು.
ಗುಣಮಟ್ಟದ ಕೊರತೆ ಜತೆಗೆ ತಕ್ಕಮಟ್ಟಿಗೆ ಸರಿಯಾಗಿ ಜೋಡಣೆ ಮಾಡದೇ ಹಾಗೆ ಪೂರೈಸಿರುವ ಬಗ್ಗೆ ಪೋಷಕರು, ವಿದ್ಯಾರ್ಥಿಗಳಿಂದ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಕೆಲ ಪ್ರೌಢಶಾಲೆಗಳ ಎಸ್‌ಡಿಎಂಸಿಗಳು ಠರಾವು ಪಾಸ್ ಮಾಡಿ ದೂರು ನೀಡಿದ್ದರೆ ಕೆಲವೊಂದಿಷ್ಟು ಎಸ್ ಡಿಎಂಸಿಗಳು ಮೌನಕ್ಕೆ ಶರಣಾಗಿವೆ.
ಶಾಸಕರದ್ದೇ ಪ್ರೌಢಶಾಲೆ: ಕಲಘಟಗಿ ತಾಲೂಕಿನ ವೀರಾಪುರ ಗ್ರಾಮದ ಸರಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಆ ಭಾಗದ ಶಾಸಕರಾದ ಸಿ.ಎಂ.ನಿಂಬಣ್ಣವರ. ಅವರೇ ಅಧ್ಯಕ್ಷರಾಗಿರುವ ಈ ಶಾಲೆಗೆ ಪೂರೈಸಿರುವ 55 ಬೈಸಿಕಲ್‌ಗಳ ಪೈಕಿ ಅರ್ಧ ಬೈಸಿಕಲ್‌ಗಳ ಕೆಲ ಬಿಡಿ ಭಾಗಗಳೇ ಇಲ್ಲದಂತಾಗಿವೆ. ವಿತರಿಸಿರುವ ಕೆಲ ಸೈಕಲ್ ಗಳ ಬಿಡಿ ಭಾಗಗಳನ್ನು ವಿದ್ಯಾರ್ಥಿಗಳೇ ಹಾಕಿಸಿಕೊಂಡಿದ್ದರೆ, ಇನ್ನರ್ಧ ಬೈಸಿಕಲ್‌ಗಳು ಆ ಶಾಲೆಯ ಕೊಠಡಿ ಸೇರಿವೆ. ಈ ಬಗ್ಗೆ ಪ್ರೌಢಶಾಲೆ ಎಸ್‌ಡಿಎಂಸಿ ಸದಸ್ಯರು ತಕರಾರು ಎತ್ತಿದ್ದಾರೆ. ಹೀಗಾಗಿ ಬೈಸಿಕಲ್ ವಿತರಣೆ ನಿಲ್ಲಿಸಿ, ಗುಣಮಟ್ಟದ ಬೈಸಿಕಲ್ ವಿತರಿಸುವಂತೆ ಠರಾವು ಪಾಸ್ ಮಾಡಿ ನ.2ರಂದೇ ಬಿಇಒ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಈವರೆಗೂ ಪ್ರಯೋಜನವಾಗಿಲ್ಲ. ಇದು ಈ ಪ್ರೌಢಶಾಲೆಯೊಂದರ ಕಥೆಯಲ್ಲ. ಜಿಲ್ಲೆಯಲ್ಲಿ ಪೂರೈಕೆಯಾಗಿರುವ ಬಹುತೇಕ ಬೈಸಿಕಲ್‌ಗಳ ದುಸ್ಥಿತಿ. ಇದಲ್ಲದೇ ಬಳಸಲು ಯೋಗ್ಯವಲ್ಲದ ಬೈಸಿಕಲ್ ಪಡೆದ ವಿದ್ಯಾರ್ಥಿಗಳು ನಿಯಂತ್ರಣ ತಪ್ಪಿ ಬೈಸಿಕಲ್‌ನಿಂದ ಬಿದ್ದು ಗಾಯಗೊಂಡ ಘಟನೆಗಳು ವರದಿ ಆಗುತ್ತಲಿವೆ. ಸದ್ಯ ಶಾಸಕರೇ ಅಧ್ಯಕ್ಷರಾಗಿರುವ ಶಾಲೆಯ ಬೈಸಿಕಲ್ ಸ್ಥಿತಿಯೇ ಹೀಗಿರುವಾಗ ಉಳಿದ ಶಾಲೆಗಳ ಬೈಸಿಕಲ್ ಸ್ಥಿತಿಯಂತೂ ಆ ದೇವರಿಗೆ ಪ್ರೀತಿ.
ಜೋಡಣೆ ವಿಳಂಬ: ಧಾರವಾಡ ಮತ್ತು ಹುಬ್ಬಳ್ಳಿ ಗ್ರಾಮೀಣ, ನವಲಗುಂದ, ಕುಂದಗೋಳ, ಕಲಘಟಗಿ ಒಳಗೊಂಡಂತೆ 6030 ಹೆಣ್ಣು, 5816 ಗಂಡು ಮಕ್ಕಳು ಸೇರಿದಂತೆ ಒಟ್ಟು 11,846 ಬೈಸಿಕಲ್ ಅಗತ್ಯವಿರುವ ಬಗ್ಗೆ ಮಾಹಿತಿ ಸಲ್ಲಿಸಲಾಗಿತ್ತು. ಈ ಪೈಕಿ 5370 ಹೆಣ್ಣು, 5293 ಗಂಡು ಮಕ್ಕಳಿಗೆ ಒಟ್ಟು 10,663 ಬೈಸಿಕಲ್‌ಗಳು ಜಿಲ್ಲೆಗೆ ಪೂರೈಕೆಯಾಗಿದೆ. ಬೈಸಿಕಲ್‌ಗಳ ಭಾಗಗಳು ತಡವಾಗಿ ಪೂರೈಕೆಯಾಗಿರುವ ಕಾರಣ ಜೋಡಣೆ ಕಾರ್ಯವೂ ವಿಳಂಬವಾಗಿ ಪೂರೈಕೆಯಲ್ಲೂ ವಿಳಂಬ ಆಗಿದೆ. ಸದ್ಯ ಬಹುತೇಕ ವಿತರಣೆ ಕಾರ್ಯ ಮುಕ್ತಾಯ ಹಂತದಲ್ಲಿದೆ. ಆದರೆ ವಿತರಿಸಿರುವ ಬೈಸಿಕಲ್ ಗುಣಮಟ್ಟ ಕೊರತೆ ಜತೆಗೆ ಕೆಲವೊಂದಿಷ್ಟು ಬೈಸಿಕಲ್ ಭಾಗಗಳೇ ಇಲ್ಲದೆಯೇ ವಿತರಿಸಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಗುಣಮಟ್ಟದ ಬೈಸಿಕಲ್ ವಿತರಿಸುವಂತೆ ಮಾಡಬೇಕಿದೆ.
ಬಸ್‌ಪಾಸ್-ಬೈಸಿಕಲ್ ಎರಡೂ ಬೇಕು ಈಗ!: ಗ್ರಾಮೀಣದಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಬಸ್ ಪಾಸ್ ಪಡೆದವರಿಗೆ ಬೈಸಿಕಲ್ ಇಲ್ಲ. ಬೈಸಿಕಲ್ ಪಡೆದವರಿಗೆ ಬಸ್ ಪಾಸ್ ಸಿಗಲ್ಲ. ಆದರೆ ಗ್ರಾಮೀಣ ಭಾಗದ ಕೆಲ ವಿದ್ಯಾರ್ಥಿಗಳು ಬಸ್ ಪಾಸ್ ಪಡೆದು ಬೈಸಿಕಲ್ ಪಡೆದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಶುಕ್ರವಾರದವರೆಗೆ ಬಸ್ ವ್ಯವಸ್ಥೆ ಇದ್ದರೆ ಶನಿವಾರ ಒಂದು ದಿನ ಬೆಳಿಗ್ಗೆ ಸಾರಿಗೆ ಬಸ್ ಸರಿಯಾಗಿ ಇಲ್ಲದ ಕಾರಣ ವಾರದಲ್ಲಿ ಈ ಒಂದು ದಿನ ಶಾಲೆಗೆ ಹಾಜರಾಗಲು ಹರಸಾಹಸ ಪಡುವಂತಾಗಿದೆ. ಇಂತಹ ಪ್ರಕರಣಗಳಿಗಾಗಿಯೇ ಗುಡ್ಡಗಾಡು ಪ್ರದೇಶ ಮಕ್ಕಳಿಗೆ ಬಸ್ ಪಾಸ್ ಜತೆಗೆ ಬೈಸಿಕಲ್ ವಿತರಿಸುವಂತೆ ಸರಕಾರದ ಸುತ್ತೋಲೆ ಇದ್ದರೂ ಕಲಘಟಗಿ ಭಾಗದ ಪ್ರದೇಶಗಳಲ್ಲಿ ಇದು ಅನುಷ್ಠಾನವಾಗದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಗುಣಮಟ್ಟದ ಕೊರತೆ: ವಿದ್ಯಾರ್ಥಿಗಳಿಗೆ ಪೂರೈಸಿರುವ ಬೈಸಿಕಲ್ ಗಳ ಪೈಕಿ ಕೆಲವೊಂದಿಷ್ಟಕ್ಕೆ ಬ್ರೇಕ್, ಸ್ಟ್ಯಾಂಡ್ ಬ್ರೇಕ್ , ಬೀಗ, ಟಾಯರ್‌ಗಳ ಒಳ ಟ್ಯೂಬ್, ಪೆಡಲ್‌ಗಳೇ ಇಲ್ಲವಾಗಿವೆ. ವಿದ್ಯಾರ್ಥಿಗಳೇ ಬ್ರೇಕ್, ಒಳ ಟೂಬ್ ಹಾಕಿಸಿಕೊಂಡು ಸರಿ ಮಾಡಿಕೊಳ್ಳುತ್ತಿದ್ದು, ಇನ್ನೂ ಬೈಸಿಕಲ್‌ಗಳಿಗೆ ಕಿಟ್‌ಗಳನ್ನು ನೀಡಿಲ್ಲ. ಹೆಣ್ಣು ಮಕ್ಕಳ ಬೈಸಿಕಲ್ ಗೆ ಬುಟ್ಟಿ ಜೋಡಿಸದೆ ಹಾಗೇ ಬಿಡಿ ಭಾಗಗಳನ್ನು ನೀಡಿದ್ದು, ಬೈಸಿಕಲ್‌ಗಳ ಒಳ ಬಾರ್, ಬೇರಿಂಗ್ ಗಳೂ ಹಾಳಾಗಿವೆ. ಹೀಗಾಗಿ ಸದ್ಯ ಬೈಸಿಕಲ್ ಗಳನ್ನು ಪಡೆದಿರುವ ವಿದ್ಯಾರ್ಥಿಗಳು ತಾವೇ ರಿಪೇರಿ ಮಾಡಿಕೊಳ್ಳುವಂತಾಗಿದೆ. ಇಂತಹ ಆರೋಪಗಳು ಜಿಲ್ಲೆಯ ವಿವಿಧ ಗ್ರಾಮೀಣ ಭಾಗಗಳ ಪ್ರೌಢಶಾಲೆಗಳಿಂದ ಕೇಳಿ ಬರುತ್ತಲಿವೆ.
ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ವಿಳಂಬ ಆಗಿದ್ದು ಹೊರತುಪಡಿಸಿದರೆ ಬೈಸಿಕಲ್ ವಿತರಣೆ ಬಹುತೇಕ ಮುಗಿದಿದೆ. ಪೂರೈಕೆ ಆಗುವ ಬೈಸಿಕಲ್‌ಗಳನ್ನು ಸಂಪೂರ್ಣ ಪರಿಶೀಲಿಸಿಯೇ ಪೂರ್ಣ ಪ್ರಮಾಣದಲ್ಲಿ ಸರಿಯಾಗಿದ್ದರೆ ಮಾತ್ರವಷ್ಟೇ ಸ್ವೀಕರಿಸುವಂತೆ ಈಗಾಗಲೇ ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಒಂದು ವೇಳೆ ಲೋಷಗಳು ಕಂಡು ಬಂದರೆ ಸ್ವೀಕರಿಸದಂತೆ ತಿಳಿಸಲಾಗಿದ್ದು, ಶಾಲಾ ಮುಖ್ಯಸ್ಥರಿಂದ ಸ್ವೀಕಾರ ಪ್ರತಿ ನೀಡದ ಹೊರತು ಬೈಸಿಕಲ್ ಪೂರೈಸಿದ ಕಂಪನಿಗೆ ಬಿಲ್ ಪಾವತಿ ಆಗದು.
– ಗಜಾನನ ಮನ್ನಿಕೇರಿ, ಡಿಡಿಪಿಐ, ಧಾರವಾಡ
-ಶಶಿಧರ್ ಬುದ್ನಿ