ಹೊಸದಿಲ್ಲಿ: ದೇಶದ ಎಲ್ಲಾ ಜನರಿಗೆ ಕೋವಿಡ್-19 ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರತಾಪ್ ಸಾರಂಗಿ ಹೇಳಿದ್ದಾರೆ.
ಕಳೆದ ವಾರ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಬಿಹಾರದ ಜನತೆಗೆ ಉಚಿತ ಕೋವಿಡ್ ಲಸಿಕೆ ನೀಡುವುದಾಗಿ ಹೇಳಿದ್ದರು. ಇದು ವಿರೋಧ ಪಕ್ಷಗಳ ಕಣ್ಣು ಕೆಂಪಾಗಿಸಿತ್ತು. ಎನ್ ಡಿಎ ಸರ್ಕಾರ ಕೋವಿಡ್ ಲಸಿಕೆ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದೆ ಎಂದು ಟೀಕಿಸಿದ್ದವು. ಇದರ ಬೆನ್ನಲ್ಲೇ ತಮಿಳುನಾಡು ಸೇರಿ ಕೆಲವು ರಾಜ್ಯಗಳು ತಾವು ಉಚಿತ ಲಸಿಕೆ ಹಂಚುವುದಾಗಿ ಘೋಷಣೆ ಮಾಡಿದ್ದವು.
ದೇಶದ ಪ್ರತಿ ವ್ಯಕ್ತಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ದೇಶದಲ್ಲಿ ಪ್ರತಿಯೊಬ್ಬರಿಗೆ ಲಸಿಕೆ ನೀಡಲು ಅಂದಾಜು 500 ರೂ.ಗಳನ್ನು ಖರ್ಚು ಮಾಡಲಾಗುವುದು ಎಂದು ಪ್ರತಾಪ್ ಸಾರಂಗಿ ಹೇಳಿದ್ದಾರೆ.
ದೇಶದ ಎಲ್ಲಾ ಜನರಿಗೆ ಉಚಿತ ಲಸಿಕೆಗಳನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಪ್ರತಿ ವ್ಯಕ್ತಿಗೆ ಲಸಿಕೆ ಹಾಕಲು ಅಂದಾಜು 500 ರೂ.ಗಳನ್ನು ಖರ್ಚು ಮಾಡಲಾಗುವುದು ಎಂದು ಬಾಲಂಗೋರ್‌ನಲ್ಲಿ ನವೆಂಬರ್ 3 ರ ವಿಧಾನಸಭಾ ಉಪಚುನಾವಣೆಯ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಾರಂಗಿ ಸುದ್ದಿಗಾರರಿಗೆ ತಿಳಿಸಿದರು.
ತಮಿಳುನಾಡು, ಮಧ್ಯಪ್ರದೇಶ, ಅಸ್ಸಾಂ ಮತ್ತು ಪಾಂಡಿಚೇರಿ ಸರ್ಕಾರಗಳು ಈಗಾಗಲೇ ತಮ್ಮ ರಾಜ್ಯಗಳ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವುದಾಗಿ ಘೋಷಿಸಿದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೇಶಾದ್ಯಂತದ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆ ನೀಡುವಂತೆ ಒತ್ತಾಯಿಸಿದ್ದಾರೆ