ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೋವಿಡ್ 19 ಸೋಂಕು ಗುಣಪಡಿಸಬಲ್ಲ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಭಾರತೀಯ ಜನತಾ ಪಕ್ಷ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಪಿಟಿಐ ವರದಿ ಪ್ರಕಾರ, ಕೋವಿಡ್ ಗುಣಪಡಿಸಬಲ್ಲ ಲಸಿಕೆ ಉಚಿತವಾಗಿ ನೀಡುವ ಬಿಜೆಪಿ ಭರವಸೆ ಬಗ್ಗೆ ಆರ್ ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಸಲ್ಲಿಸಿರುವ ಅರ್ಜಿಗೆ ಉತ್ತರ ನೀಡಿರುವ ಆಯೋಗ, ಈ ವಿಚಾರದಲ್ಲಿ ಯಾವುದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಚುನಾವಣೆಯಲ್ಲಿ ಬಿಜೆಪಿ ನೀಡಿರುವ ಭರವಸೆ ತಾರತಮ್ಯದ್ದಾಗಿದ್ದು ಮತ್ತು ಚುನಾವಣೆಯಲ್ಲಿ ಕೇಂದ್ರ ಸರ್ಕಾರ ತಮ್ಮ ಆಡಳಿತವನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ಗೋಖಲೆ ದೂರಿನಲ್ಲಿ ಅರೋಪಿಸಿರುವುದಾಗಿ ಪಿಟಿಐ ತಿಳಿಸಿದೆ.
ಇದನ್ನೂ ಓದಿ: ದೇಶದ ಮೊದಲ ಸೀ ಪ್ಲೇನ್ ಗೆ ಪ್ರಧಾನಿ ಮೋದಿ ಚಾಲನೆ: ಏನಿದರ ವಿಶೇಷ, ಪ್ರಯಾಣ ದರ ಎಷ್ಟು?
ಚುನಾವಣಾ ನೀತಿ ಸಂಹಿತೆಯ ಭಾಗ VIIIರ ಪ್ರಕಾರ ಪ್ರಣಾಳಿಕೆಯಲ್ಲಿನ ಭರವಸೆ ನೀತಿ ಸಂಹಿತೆಯ ಉಲ್ಲಂಘನೆಯಾಗಿಲ್ಲ ಎಂಬುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿರುವುದಾಗಿ ಪಿಟಿಐ ಮೂಲಗಳು ಹೇಳಿವೆ.