Advertisement

176 ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ವಿತರಣೆ

04:20 PM Mar 11, 2018 | Team Udayavani |

ಮೂಡಬಿದಿರೆ: ಅಡುಗೆ ಅನಿಲವು ಹಿಂದೆ ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ಸಿದ್ದರಾಮಯ್ಯ ಸರಕಾರವು ಬಡವರಿಗೆ ಮತ್ತು ಎಸ್‌ಸಿ-ಎಸ್‌ಟಿ ಪಂಗಡದವರಿಗೆ ಉಚಿತವಾಗಿ ಅಡುಗೆ ಅನಿಲವನ್ನು ನೀಡುವ ಮೂಲಕ ಬಡವರ ಮನೆಯಲ್ಲೂ ಗ್ಯಾಸ್‌ ವ್ಯವಸ್ಥೆ ಇರಬೇಕೆಂದು ಸಮಾನ ಅವಕಾಶಗಳನ್ನು ಕಲ್ಪಿಸಿ ಬಡವರನ್ನು ಉದ್ಧಾರ ಮಾಡುತ್ತಿದೆ. ಬಡವರು ಉಪವಾಸ ಇರಬಾರದೆಂದು ಸರಕಾರವು ಅನ್ನಭಾಗ್ಯದಂತಹ ಉತ್ತಮ ಯೋಜನೆಗಳನ್ನು ಕೂಡಾ ಜಾರಿಗೆ ತಂದಿದೆ ಎಂದು ಶಾಸಕ ಕೆ.ಅಭಯಚಂದ್ರ ಜೈನ್‌ ಹೇಳಿದರು.

Advertisement

ಅವರು ಅರಣ್ಯ ಇಲಾಖೆಯ ಮಂಗಳೂರು ವೃತ್ತ ಕುಂದಾಪುರ ವಿಭಾಗ, ಮೂಡಬಿದಿರೆ ಉಪ ವಿಭಾಗ ಮೂಡಬಿದಿರೆಯ ವಲಯ ಇದರ ವತಿಯಿಂದ ಸರಕಾರದ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಲ್ಲಿ 2017-18ನೇ ಸಾಲಿನ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ 176 ಮಂದಿ ಫಲಾನುಭವಿಗಳಿಗೆ ಸಮಾಜ ಮಂದಿರದಲ್ಲಿ ಉಚಿತವಾಗಿ ಅಡುಗೆ ಅನಿಲ ವಿತರಿಸಿದರು.

ಪುರಸಭಾ ಉಪಾಧ್ಯಕ್ಷ ವಿನೋದ್‌ ಸೆರಾವೋ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್‌ ಬಶೀರ್‌, ಪುರಸಭಾ ಸದಸ್ಯರಾದ ಪಿ.ಕೆ. ಥೋಮಸ್‌, ಮೂಡಾ ಅಧ್ಯಕ್ಷ ಸುರೇಶ್‌ ಪ್ರಭು, ತಾ.ಪಂ. ಸದಸ್ಯ ಪ್ರಕಾಶ್‌ ಗೌಡ, ವಾಲ್ಪಾಡಿ ಗ್ರಾ.ಪಂ. ಉಪಾಧ್ಯಕ್ಷ ಅರುಣ್‌ ಕುಮಾರ್‌ ಶೆಟ್ಟಿ, ದರೆಗುಡ್ಡೆ ಗ್ರಾಮ ಪಂಚಾಯತ್‌ ಸದಸ್ಯ ಸುಭಾಶ್ಚಂದ್ರ ಚೌಟ, ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ನಾರಾಯಣ ಸಾಲ್ಯಾನ್‌, ವಾಸುದೇವ ನಾಯಕ್‌ ಅತಿಥಿಗಳಾಗಿದ್ದರು.

ವಲಯ ಅರಣ್ಯಾಧಿಕಾರಿ ಪ್ರಕಾಶ್‌ ಪೂಜಾರಿ ಸ್ವಾಗತಿಸಿದರು. ಮೂಡಬಿದಿರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್‌.ಆರ್‌. ಸುಬ್ರಹ್ಮಣ್ಯ ರಾವ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಉಪ ವಲಯಾರಣ್ಯಾಧಿಕಾರಿಗಳಾದ ಮಂಜುನಾಥ ಗಾಣಿಗ ನಿರೂಪಿಸಿದರು. ಚಂದ್ರಕಾಂತ್‌ ವಿ.ಪೋಳ್‌ ವಂದಿಸಿದರು. ವಿಶೇಷ ಘಟಕ ಯೋಜನೆಯಡಿಯಲ್ಲಿ 120 ಮತ್ತು ಗಿರಿಜನ ಯೋಜನೆಯಡಿ 56 ಹೀಗೆ ಒಟ್ಟು 176 ಅಡುಗೆ ಅನಿಲವನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next