ಉಡುಪಿ: ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜಿ.ಪಂ. ಸಹಕಾರದೊಂದಿಗೆ ನವೆಂಬರ್ ಮೊದಲ ವಾರದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಆರಂಭವಾಗಲಿದೆ. ದ್ವಿತೀಯ ಪಿಯುಸಿ ಅನಂತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಹಾಗೂ ವೈದ್ಯಕೀಯ ಕೋರ್ಸ್‌ಗಳನ್ನು ಹೊರತುಪಡಿಸಿ ಎಂಜಿನಿಯರಿಂಗ್ ಮೊದಲಾದ ವೃತ್ತಿಪರ ಕೋಸ್
ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಎದುರಿಸುವುದು ಕಡ್ಡಾಯ.
ನೀಟ್, ಸಿಇಟಿ ರ್‍ಯಾಂಕ್ ಆಧಾರದಲ್ಲಿಯೇ ಈ ಎಲ್ಲ ಕೋರ್ಸ್‌ಗಳ ಸೀಟು ಹಂಚಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಿತ್ಯದ ತರಗತಿಯ ಜತೆಗೆ ಸಿಇಟಿ, ನೀಟ್ ಕೋಚಿಂಗ್ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಆನ್‌ಲೈನ್ ತರಗತಿ: ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಜಿ.ಪಂ. ಸಹಕಾರದೊಂದಿಗೆ ನೀಡುವ ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ಕೋಚಿಂಗ್ ಆನ್ ಲೈನ್ ಮೂಲಕ ನೀಡಲಾಗುತ್ತದೆ. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ವಿಷಯ ತಜ್ಞರಿಗೆ ತರಬೇತಿಯನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಹೇಗೆ ಎದುರಿಸಬೇಕು, ಪರೀಕ್ಷಾ ಸಿದ್ಧತೆ ಹೇಗಿರಬೇಕು ಎಂಬ ಜತೆಗೆ ಪ್ರತೀ ವಿಷಯದ ವಿಸ್ತೃತವಾದ ವಿವರಣೆಯನ್ನು ನೀಡಲಾಗುತ್ತದೆ. ಬಹುತೇಕ ಖಾಸಗಿ ಪ.ಪೂ. ಕಾಲೇಜುಗಳಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗೆ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಸಿಇಟಿ, ನೀಟ್ ಕೋಚಿಂಗ್ ನೀಡಲಾಗುತ್ತದೆ. ಈ ವ್ಯವಸ್ಥೆ ಸರಕಾರಿ ಕಾಲೇಜಿನಲ್ಲಿ ಇಲ್ಲ. ಪ್ರಸಕ್ತ ಸಾಲಿನಿಂದ ಸರಕಾರಿ ಪಿಯು ಕಾಲೇಜಿನಲ್ಲೂ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
ಕಾಲೇಜುಗಳ ಆಯ್ಕೆ: ವಿದ್ಯಾರ್ಥಿಗಳಿಗೆ ನಿತ್ಯವೂ ಒಂದು ತಾಸು ಆನ್‌ಲೈನ್ ತರಗತಿ ಇರಲಿದೆ. ಬಳಿಕ ಯಾವುದೇ ಗೊಂದಲ ಇದ್ದಲ್ಲಿ ಪ್ರಾಧ್ಯಾಪಕರನ್ನು ಭೇಟಿ ಮಾಡಲು ಅನುಕೂಲವಾಗುವಂತೆ ಹಾಗೂ ಆನ್‌ಲೈನ್ ಶಿಕ್ಷಣ ಬೋಧನೆಗೆ ಅಗತ್ಯವಿರುವ ಎಲ್ಲ ಪರಿಕರಗಳನ್ನು ಹೊಂದಿರುವ ಕೆಲವು ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ. ಆ ಕಾಲೇಜುಗಳಲ್ಲಿ ವಿಷಯ ತಜ್ಞರು ಇರಲಿದ್ದಾರೆ.
ವಿದ್ಯಾರ್ಥಿಗಳು ವಿಷಯ ತಜ್ಞರನ್ನು ಭೇಟಿ ಮಾಡಿ, ಸಂಶಯಗಳನ್ನು ಪರಿಹರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಯಾವ ಕಾಲೇಜುಗಳಲ್ಲಿ ಯಾವೆಲ್ಲ ವಿಷಯದ ತಜ್ಞರು ಲಭ್ಯರಿರಲಿದ್ದಾರೆ ಎಂಬ ಮಾಹಿತಿಯನ್ನು ಕಾಲೇಜು ಪ್ರಾಂಶುಪಾಲರ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ಕೋಚಿಂಗ್ ನೀಡಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಇರುವ ವಿಷಯ ತಜ್ಞರ ಮೂಲಕವೇ ಕೊಡಿಸಲಾಗುವುದು.
●ಬಿ.ಸಿ.ನಾಗೇಶ್ , ಶಿಕ್ಷಣ ಸಚಿವ
ಸರಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಒ, ನೀಟ್ ಕೋಚಿಂಗ್ ನವೆಂಬರ್ ಮೊದಲ ವಾರದಿಂದ ಆರಂಭಿಸಲಾಗುವುದು. ಇದಕ್ಕೆ ಬೇಕಾದ ಸಿದ್ಧತೆ, ವಿಷಯ ತಜ್ಞರಿಗೆ ತರಬೇತಿಯನ್ನು ನೀಡಲಾಗಿದೆ. ಮಧ್ಯವಾರ್ಷಿಕ ಪರೀಕ್ಷೆ ಮುಗಿದ ಬಳಿಕ ಆನ್ ಲೈನ್ ಮೂಲಕ ನಿತ್ಯ ಒಂದು ತಾಸು ಕೋಚಿಂಗ್ ನೀಡಲಿದ್ದೇವೆ.
●ಮಾರುತಿ, ಡಿಡಿಪಿಯು, ಉಡುಪಿ