Advertisement

ದಿವ್ಯಾಂಗರಿಗೆ ಉಚಿತ ಕ್ಯಾಬ್‌ ವ್ಯವಸ್ಥೆ

03:30 AM Apr 14, 2019 | Team Udayavani |

ಬೆಂಗಳೂರು: ದಿವ್ಯಾಂಗ ಮತದಾರರಿಗಾಗಿ ಕಲ್ಪಿಸಲಾದ ಉಚಿತ ಕ್ಯಾಬ್‌ ಸೇವೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಬೆಂಗಳೂರು ಜತೆಗೆ ರಾಜ್ಯದ ಇತರ ಪ್ರಮುಖ ನಗರಗಳಿಗೂ ವಿಸ್ತರಿಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ.

Advertisement

ನಗರದಲ್ಲಿ ಕಲ್ಪಿಸಿರುವ ಉಚಿತ ಓಲಾ ಮತ್ತು ಉಬರ್‌ ಕ್ಯಾಬ್‌ ಸೇವೆ ಸುಮಾರು 5,627 ದಿವ್ಯಾಂಗ ಮತದಾರರು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಈ ಸಂಖ್ಯೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಇದರ ಅಗತ್ಯತೆಯನ್ನು ಮನಗಂಡು ಹೆಚ್ಚು ದಿವ್ಯಾಂಗ ಮತದಾರರು ಹಾಗೂ ಅವರಿಗೆ ಅವಶ್ಯಕತೆ ಇರುವ ಕಡೆಗಳಲ್ಲಿ ಇದೇ ಮಾದರಿಯ ಸೇವೆಯನ್ನು ಪರಿಚಯಿಸಲು ಆಯೋಗ ನಿರ್ಧರಿಸಿದೆ.

ಮೊದಲ ಹಂತದಲ್ಲಿ ಅಂದರೆ ಏಪ್ರಿಲ್‌ 18ರಂದು ಬೆಂಗಳೂರು ಜತೆಗೆ ಮೈಸೂರು ಮತ್ತು ಮಂಗಳೂರಿನಲ್ಲಿ ಪರಿಚಯಿಸಲಾಗಿದೆ. ಅದೇ ರೀತಿ, ಎರಡನೇ ಹಂತದಲ್ಲಿ ಏಪ್ರಿಲ್‌ 23ರಂದು ಬಳ್ಳಾರಿ, ಕಲಬುರಗಿ, ಬೆಳಗಾವಿ, ಧಾರವಾಡದಲ್ಲಿ ಉಚಿತ ಕ್ಯಾಬ್‌ ಸೇವೆ ಕಲ್ಪಿಸಲಾಗುವುದು.

ಇದಕ್ಕಾಗಿ ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆಗಳ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ದಿವ್ಯಾಂಗ ಮತದಾರರು ಸಹಾಯವಾಣಿ 1950ಗೆ ಕರೆ ಮಾಡಿ, ಈ ಸೇವೆ ಪಡೆಯಬಹುದು ಎಂದು ಆಯೋಗದ ಅಧಿಕಾರಿಗಳು ತಿಳಿಸಿದರು.

ಎಲ್ಲೆಲ್ಲಿ ಎಷ್ಟು ಬುಕಿಂಗ್‌?: ಪ್ರಸ್ತುತ ಬೆಂಗಳೂರು ಉತ್ತರದಲ್ಲಿ 4,050, ದಕ್ಷಿಣದಲ್ಲಿ 1,165 ಹಾಗೂ ಕೇಂದ್ರದಲ್ಲಿ 412 ಮಂದಿ ದಿವ್ಯಾಂಗರು ಕ್ಯಾಬ್‌ ಸೇವೆಗಾಗಿ ಹೆಸರು ನೋಂದಾಯಿಸಿದ್ದಾರೆ. ಇವರನ್ನು ಕರೆತರಲು 350 ಒಲಾ , 40 ಉಬರ್‌ ನಿಯೋಜಿಸಲಾಗಿದೆ.

Advertisement

ಮತದಾನದ ಹಿಂದಿನ ದಿನ ರಾತ್ರಿ ವಾಹನ ಸಂಖ್ಯೆ ಹಾಗೂ ಚಾಲಕನ ಮೊಬೈಲ್‌ ನಂಬರ್‌ ಒಳಗೊಂಡ ಮೆಸೇಜ್‌ ಅನ್ನು ಆಯಾ ಮತದಾರರ ಮೊಬೈಲ್‌ಗೆ ಕಳುಹಿಸಲಾಗುವುದು. ಮತದಾನದಂದು ನಿಗದಿತ ಸಮಯಕ್ಕೆ ಕ್ಯಾಬ್‌ ಬರಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್‌. ಮಂಜುನಾಥ ಪ್ರಸಾದ್‌ ಮಾಹಿತಿ ನೀಡಿದರು.

ಮತದಾರರಿಗೆ ವಾಹನ ವ್ಯವಸ್ಥೆ: 1950ಗೆ ಕರೆ ಮಾಡಿ, ವಾಹನಕ್ಕಾಗಿ ಹೆಸರು ನೋಂದಾಯಿಸಿಕೊಂಡು ಸ್ಥಳ, ಸಮಯ ಸೇರಿದಂತೆ ಎಲ್ಲ ಮಾಹಿತಿಯನ್ನು ನೀಡಬೇಕು. ಆಗ, ನಿಗದಿತ ಸಮಯಕ್ಕೆ ಕ್ಯಾಬ್‌ ಮನೆ ಮುಂದೆ ಬರುತ್ತದೆ. ಮತದಾನದ ನಂತರ ಪುನಃ ಮನೆಗೆ ತಲುಪಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next