Advertisement

ರಾಜ್ಯದ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌

03:45 AM Jun 03, 2017 | |

ಬೆಂಗಳೂರು: ಪರಿಶಿಷ್ಟ  ಜಾತಿ ಮತ್ತು ಪಂಗಡದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಒದಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ನಡೆದ ಅನುಸೂಚಿತ ಜಾತಿ ಉಪ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯ ರಾಜ್ಯ ಪರಿಷತ್‌ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದರು. 
 
ಇದಕ್ಕಾಗಿ, ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣದಲ್ಲಿ 105 ಕೋಟಿ ರೂ. ಮೀಸಲಿಡಲು ಸಭೆಯಲ್ಲಿ  ನಿರ್ಧರಿಸಲಾಯಿತು.
ಈ ಮುನ್ನ  ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್‌ ಪಾಸ್‌ ನೀಡಲಾಗುತ್ತಿತ್ತು. ರಾಜ್ಯ ಸರ್ಕಾರ ಶೇ.50 ರಷ್ಟು, ಅಂಬೇಡ್ಕರ್‌ ಹಾಗೂ ವಾಲ್ಮೀಕಿ ನಿಗಮದಿಂದ ಶೇ.25 ಹಾಗೂ ವಿದ್ಯಾರ್ಥಿಗಳು ಶೇ.25 ರಷ್ಟು ಭರಿಸುತ್ತಿದ್ದರು. ಆದರೆ, ಪ್ರಸಕ್ತ ಸಾಲಿನಿಂದ ಸಂಪೂರ್ಣವಾಗಿ ಉಚಿತವಾಗಿ ಬಸ್‌ ಪಾಸ್‌ ನೀಡಬೇಕು. ಎಸ್‌ಸಿಪಿ, ಟಿಎಸ್‌ಪಿ ಹಣದಲ್ಲಿ ವೆಚ್ಚ ಭರಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಗಿದೆ.

ತಾಕೀತು: ವಿಶೇಷ ಘಟಕ ಯೋಜನೆಯಡಿ ಅನುಮೋದನೆಗೊಂಡಿರುವ ಕ್ರಿಯಾ ಯೋಜನೆಗಳನ್ನು ಸಕಾಲದಲ್ಲಿ ಜಾರಿಗೊಳಿಸಿ. ಕಾರ್ಯಕ್ರಮಗಳ ಅನುಷ್ಠಾನದಲ್ಲಿ ವಿಳಂಬ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ತಾಕೀತು ಮಾಡಿದರು. 2015-16 ನೇ ಸಾಲಿನ ಉಳಿಕೆ 751 ಕೋಟಿ ರೂ. ಸೇರಿದಂತೆ ಪ್ರಸಕ್ತ ಸಾಲಿನಲ್ಲಿ 27,703 ಕೋಟಿ ರೂ. ಅನುದಾನ ಲಭ್ಯವಿದೆ. ಅದೇ ರೀತಿ 2016-17 ನೇ ಸಾಲಿನಲ್ಲಿ 1,782 ಕೋಟಿ ರೂ. ವೆಚ್ಚವಾಗಿಲ್ಲ. ಅವಶ್ಯಕತೆಗೆ ಅನುಗುಣವಾಗಿ ಅನುದಾನ ಒದಗಿಸಿದರೂ ಸಕಾಲದಲ್ಲಿ ವೆಚ್ಚ ಮಾಡದ ಧೋರಣೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಕ್ರಿಯಾ ಯೋಜನೆ ಸಿದ್ಧಗೊಂಡಿರುವ ಎಲ್ಲ ಯೋಜನೆಗಳನ್ನು ಮುಂದಿನ ವರ್ಷದ ಮಾರ್ಚ್‌ ಒಳಗೆ ಕಡ್ಡಾಯವಾಗಿ ಅನುಷ್ಠಾನಗೊಳಿಸಿ ಶೇ.100ಕ್ಕೆ 100 ರಷ್ಟು ಸಾಧನೆ ಮಾಡಲೇಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಸಂಸದ ಧ್ರುವನಾರಾಯಣ್‌, ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ಸಭೆಯಲ್ಲಿ ಉಪಸ್ಥಿತರಿದ್ದರು. ಪರಿಷತ್‌ನ ಸಭೆಯಲ್ಲಿ ವಿವಿಧ ಇಲಾಖೆಗಳು 2017-18 ನೇ ಸಾಲಿಗೆ ರೂಪಿಸಿರುವ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next