Advertisement

20 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌: ರೇವಣ್ಣ

11:20 AM Feb 19, 2018 | Team Udayavani |

ರಾಯಚೂರು (ಮಸ್ಕಿ): ರಾಜ್ಯದಲ್ಲಿ 20 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಲು ತೀರ್ಮಾನಿಸಿದ್ದು, ಇಡೀ ದೇಶದಲ್ಲಿಯೇ ನಮ್ಮ ರಾಜ್ಯ ಮೊದಲು ಎಂದು ಸಾರಿಗೆ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಂ. ರೇವಣ್ಣ ಹೇಳಿದರು.

Advertisement

ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ರವಿವಾರ ಏರ್ಪಡಿಸಿದ್ದ ಮಸ್ಕಿ ತಾಲೂಕು ಉದ್ಘಾಟನೆ, 2,097 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾರಿಗೆ ಇಲಾಖೆ 207 ಪ್ರಶಸ್ತಿ ಪಡೆದು ವಿನೂತನ ಸಾಧನೆ ಮಾಡಿದೆ. ನಮ್ಮ ಇಲಾಖೆಯಲ್ಲಿ 27 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದರ ಜತೆಗೆ 371(ಜೆ) ಅಡಿ 4 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಎಂದರು. 

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಮೇಲೆ ಐದು ವರ್ಷದಲ್ಲಿ ಜನ ಅತ್ಯಂತ ನೆಮ್ಮದಿಯಿಂದ ಬಾಳುವಂತೆ ಮಾಡಿದ್ದೇವೆ. ಅನ್ನಭಾಗ್ಯದ ಮೂಲಕ ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದ್ದೇವೆ ಎಂದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶಕುಮಾರ್‌ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಒಂದು ಪರೀಕ್ಷೆ ಇದ್ದ ಹಾಗೆ. ಐದು ವರ್ಷಗಳಲ್ಲಿ ಯಾವ ರೀತಿ ಕೆಲಸ ಮಾಡಿದ್ದೇವೆ ಎಂಬುದೇ ಮುಖ್ಯ. ಪರೀಕ್ಷೆಯಲ್ಲಿ ಫಲಿತಾಂಶ ತೀರ್ಮಾನ ಮಾಡುವವರು ಜನರು. ಚುನಾವಣೆ ಸಂದರ್ಭದಲ್ಲಿ ನಾವು ನೀಡಿರುವ ಅಶ್ವಾಸನೆಗಳನ್ನು ಈಡೇರಿಸಿದ್ದೇವೆ. ನಮ್ಮ ಉತ್ತರ ಸರಿ ಇದ್ದರೆ ನಮಗೆ ಮತ ಕೊಡಿ; ಇಲ್ಲದಿದ್ದರೆ ಇಲ್ಲ. ರಾಜ್ಯದ 6.50 ಕೋಟಿ ಕುಟುಂಬಗಳ ಆರೋಗ್ಯ ಕಾಪಾಡುವ ಜವಾಬ್ದಾರಿ ನಮ್ಮ ಸರ್ಕಾರ ಹೊತ್ತಿದೆ. ಇದಕ್ಕಾಗಿ 2,500 ಕೋಟಿ ರೂ. ತೆಗೆದಿರಿಸಲಾಗಿದೆ. ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋದರೂ ಸಹ ಅದರ ಜವಾಬ್ದಾರಿ ನಾವೇ ಹೊರುತ್ತಿದ್ದೇವೆ.

Advertisement

ಕಳೆದ ಐದು ವರ್ಷದಲ್ಲಿ ನಮ್ಮ ಸರ್ಕಾರದ ಅವಧಿ ಯಲ್ಲಿ ಒಂದು ಕಡೆಯೂ ಗೋಲಿಬಾರ್‌ ಆಗಿಲ್ಲ. ಮತೀಯ ಗಲಭೆ ಆಗುವುದಕ್ಕೆ ಅವಕಾಶ ಕೊಟ್ಟಿಲ್ಲ. ಆರ್ಥಿಕ ಶಿಸ್ತು ಮೀರಿಲ್ಲ. ಜನರಿಗೆ ನೀಡಿದ ಆಶ್ವಾಸನೆ ಮೀರಿಲ್ಲ. ಒಳ್ಳೆಯ ದಿನ ಬರುತ್ತದೆ ಅಂತ ಹೇಳಿ ಕಾಲ ತಳ್ಳದೇ ಹೇಳಿದಂತೆ ಮಾಡಿದ್ದೇವೆ. ವಿರೋಧ ಪಕ್ಷಗಳು ಚಾರಿತ್ರ್ಯವಧೆ ಮಾಡುವಂತ ಆರೋಪಗಳನ್ನು ಮಾಡುತ್ತಿರುವುದನ್ನು ಬಿಟ್ಟರೆ ಪ್ರಗತಿ ಮತ್ತು ಅಭಿವೃದ್ಧಿ ಬಗ್ಗೆ ಕಿಂಚಿತ್‌ ಮಾತನಾಡುವುದೇ ಇಲ್ಲ ಎಂದು ಟೀಕಿಸಿದರು.

ಶಾಸಕ ಪ್ರತಾಪ್‌ಗೌಡ ಪಾಟೀಲ್‌ ಮಾತನಾಡಿ, ನನ್ನ 10 ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ರಸ್ತೆ ಅಭಿವೃದ್ಧಿ, ಶಿಕ್ಷಣ ಕ್ಷೇತ್ರಕ್ಕೆ ಒತ್ತು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ 100ಕ್ಕೂ ಹೆಚ್ಚು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ. 16 ಸಾವಿರಕ್ಕೂ ಹೆಚ್ಚು ಜನರಿಗೆ ಮನೆಗಳನ್ನು ಒದಗಿಸಲಾಗಿದೆ. 2 ಸಾವಿರಕ್ಕೂ ಹೆಚ್ಚು ಜನರಿಗೆ ನಿವೇಶನ ಒದಗಿಸಲಾಗಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next