Advertisement

SSLC; ಕೃಪಾಂಕದಿಂದ 1.70 ಲಕ್ಷ ವಿದ್ಯಾರ್ಥಿಗಳು ಪಾಸ್‌!

01:34 AM May 10, 2024 | Team Udayavani |

ಬೆಂಗಳೂರು: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ-1ರಲ್ಲಿ 1.70 ಲಕ್ಷ ವಿದ್ಯಾರ್ಥಿಗಳ ಪಾಲಿಗೆ ಕೃಪಾಂಕ ವರವಾಗಿದೆ.
ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಿದ ಹಿನ್ನೆಲೆಯಲ್ಲಿ ಫ‌ಲಿತಾಂಶದಲ್ಲಿ ಭಾರೀ ಪ್ರಮಾಣದ ಇಳಿಕೆ ದಾಖಲಾಗಿತ್ತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಪ್ರಕಾರ ಫ‌ಲಿತಾಂಶ ಶೇ. 54ಕ್ಕೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಫ‌ಲಿತಾಂಶವನ್ನು ಹೆಚ್ಚಿಸಲು ಶೇ. 20ರ ಕೃಪಾಂಕವನ್ನು ನೀಡಿ ಒಟ್ಟು ಫ‌ಲಿತಾಂಶವನ್ನು ಶೇ.73.40ಕ್ಕೆ ಏರಿಸಲಾಗಿದೆ. ಕೃಪಾಂಕ ದಿಂದ 1.70 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆೆ.

Advertisement

ಕೃಪಾಂಕ ಪಡೆಯಲು ಇದುವರೆಗೆ 6 ವಿಷಯಗಳ ಲಿಖೀತ ಪರೀಕ್ಷೆ ಯಲ್ಲಿ ಒಟ್ಟು ಶೇ.35ರಷ್ಟು (175 ಅಂಕ) ಅಂಕ ಗಳಿಸಬೇಕು ಎಂಬ ನಿಯಮವಿತ್ತು. ಇದನ್ನು ಶೇ.25ಕ್ಕೆ(125 ಅಂಕ) ಇಳಿಸಲಾಗಿದೆ. ಇದರಿಂದ 3 ವಿಷಯ ಗಳಲ್ಲಿ ಕಡ್ಡಾಯವಾಗಿ ಪಾಸಾಗಿದ್ದು, ಇನ್ನು 3 ವಿಷಯಗಳಲ್ಲಿ ಫೇಲಾಗಿದ್ದರೂ ಒಟ್ಟಾರೆ ಆರೂ ವಿಷಯಗಳಿಂದ 125 ಅಂಕಗಳನ್ನು(ಲಿಖೀತ ಪರೀಕ್ಷೆಯಲ್ಲಿ) ಪಡೆದಿರುವ ವಿದ್ಯಾರ್ಥಿಗಳು ಶೇ. 20ರಷ್ಟು ಗ್ರೇಸ್‌ ಅಂಕಗಳೊಂದಿಗೆ ಪಾಸಾಗಿದ್ದಾರೆ. ಶೇ. 20 ಅಂಕವನ್ನು ಅಗತ್ಯವಿದ್ದರೆ ಒಂದೇ ವಿಷಯಕ್ಕೆ ಅಥವಾ ಎರಡು ಅಥವಾ ಮೂರು ವಿಷಯಕ್ಕೆ ಹಂಚಿ ಉತ್ತೀರ್ಣಗೊಳಿಸಲಾಗಿದೆ.

ಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್‌ಕಾಸ್ಟಿಂಗ್‌ ಮಾಡುವ ಪದ್ಧತಿ ಯನ್ನು ಆರಂಭಿಸಿದ ಹಿನ್ನೆಲೆಯಲ್ಲಿ ಪರೀಕ್ಷೆಯ ಸಮಗ್ರತೆ ಮರು ಸ್ಥಾಪಿಸಲು ಸಹಾಯಕವಾಗಿದೆ. ಆದರೆ ಒಟ್ಟಾರೆ ಫ‌ಲಿತಾಂಶ ಶೇ. 30ರಷ್ಟು ಕಡಿಮೆಯಾಗಿದೆ. ಮೊದಲ ಬಾರಿಗೆ ವೆಬ್‌ಕಾಸ್ಟಿಂಗ್‌ ವಿಧಾನ ಪರಿಚಯಿಸಿದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಡಿಮೆಯಾಗಿರುವ ಫ‌ಲಿತಾಂಶವನ್ನು ಉತ್ತಮ ಪಡಿಸಲು ಸರಕಾರ ತೀರ್ಮಾನಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂಬ ವಿಚಿತ್ರ ತರ್ಕವೊಂದನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಿಟ್ಟಿದೆ.
ಕೃಪಾಂಕಕ್ಕೆ ವಿರೋಧ

ಕಟ್ಟುನಿಟ್ಟಿನ ಪರೀಕ್ಷೆಯ ಪರಿಣಾಮ ದಿಂದ ಅನುತ್ತೀರ್ಣಗೊಂಡ ವಿದ್ಯಾರ್ಥಿ ಗಳಿಗೆ ಶೇ. 20 ಕೃಪಾಂಕ ನೀಡಿ ತೇರ್ಗಡೆ ಮಾಡುವ ಉದ್ದೇಶವೇನು? ಇದರಿಂದ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಿ ಏನು ಪ್ರಯೋಜನ ಎಂಬ ಪ್ರಶ್ನೆಯನ್ನು ಹಲವು ಶಿಕ್ಷಣ ತಜ್ಞರು ಎತ್ತಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳಿಗೆ ತಮ್ಮ ಫ‌ಲಿತಾಂಶವನ್ನು ಸುಧಾರಿಸಿಕೊಳ್ಳಲು ವಾರ್ಷಿಕ ಪರೀಕ್ಷೆ- 2 ಮತ್ತು 3 ಎಂಬ ಇನ್ನೆರಡು ಅವಕಾಶಗಳಿವೆ. ಆದ್ದರಿಂದ ಮಂಡಳಿಯ ಇತಿಹಾಸದಲ್ಲೇ ಗರಿಷ್ಠ ಶೇ. 20 ಕೃಪಾಂಕ ನೀಡುವ ಸರಕಾರದ ಈ ತೀರ್ಮಾನ ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದಾರೆ.

ಕೋವಿಡ್‌ ಪೂರ್ವದಲ್ಲಿ ಶೇ. 5 ಕೃಪಾಂಕವನ್ನು ನೀಡಲಾಗುತ್ತಿತ್ತು. ಕೋವಿಡ್‌ ಕಾಲದಲ್ಲಿ ಕೃಪಾಂಕವನ್ನು ಶೇ. 10ಕ್ಕೆ ಏರಿಸಿತ್ತು. ಈ ಹಿನ್ನೆಲೆಯಲ್ಲಿ ದಾಖಲೆಯ ಫ‌ಲಿತಾಂಶ ಸಾಧ್ಯವಾ ಗಿತ್ತು. ಈ ಬಾರಿ ಶೇ. 20 ನೀಡಲಾಗಿದ್ದು, ಮುಂದಿನ ವರ್ಷಕ್ಕೆ ಇಷ್ಟೊಂದು ಕೃಪಾಂಕ ನೀಡುವುದಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
2024ರ ಎಲ್ಲ 3 ಎಸೆಸೆಲ್ಸಿ ಪರೀಕ್ಷೆಗಳಿಗೆ ನೀಡುವ ಕೃಪಾಂಕ ಪಡೆಯಲು ಬೇಕಾದ ಅರ್ಹ ಅಂಕಗಳನ್ನು ಶೇ. 35 ರಿಂದ ಶೇ. 25ಕ್ಕೆ ಇಳಿಸಲಾಗಿದೆ. ಕೃಪಾಂ ಕದ ಪ್ರಮಾಣವನ್ನು ಶೇ. 10ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.

Advertisement

ಶೇ.100 ಫ‌ಲಿತಾಂಶ ಪಡೆದ ಶಾಲೆಗಳಲ್ಲಿ ಇಳಿಕೆ
2023-24ರಲ್ಲಿ ಸರಕಾರಿ -785, ಅನುದಾನಿತ-206 ಮತ್ತು ಅನುದಾನ ರಹಿತ 1,287 ಶಾಲೆಗಳು ಸಹಿತ ಒಟ್ಟು 2,288 ಶಾಲೆಗಳು ಶೇ. 100 ಫ‌ಲಿ ತಾಂಶ ಪಡೆದಿವೆ. ಕಳೆದ ಬಾರಿ 3,823 ಶಾಲೆಗಳು ಈ ಸಾಧನೆ ಮಾಡಿದ್ದವು.

ಶೂನ್ಯ ಫ‌ಲಿತಾಂಶದ ಶಾಲೆಗಳು ಹೆಚ್ಚಳ
ಈ ಸಾಲಿನಲ್ಲಿ ಸರಕಾರಿ- 3, ಅನುದಾನಿತ-13, ಅನುದಾನ ರಹಿತ – 62 ಶಾಲೆಗಳು ಸಹಿತ ಒಟ್ಟು 78 ಶಾಲೆಗಳು ಶೂನ್ಯ ಫ‌ಲಿತಾಂಶ ಪಡೆದಿವೆ. ಕಳೆದ ಸಾಲಿನಲ್ಲಿ 34 ಶಾಲೆಗಳು ಮಾತ್ರ ಶೂನ್ಯ ಫ‌ಲಿತಾಂಶ ಪಡೆದಿದ್ದವು.

ಉತ್ತಮ ಶ್ರೇಣಿಯಲ್ಲಿಯೂ ಕುಸಿತ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎ ಪ್ಲಸ್‌ನಿಂದ ಬಿ ತನಕದ ಶ್ರೇಣಿ (ಶೇ. 60ರಿಂದ ಶೇ.100) ಪಡೆದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕುಸಿತ ಕಂಡಿದೆ. ಇದೇ ವೇಳೆ ಸಿ ಪ್ಲಸ್‌ ಮತ್ತು ಸಿ ಶ್ರೇಣಿ (ಶೇ.35 ರಿಂದ ಶೇ.59) ಪಡೆದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ದಾಖಲಾಗಿದೆ. ಈ ವರ್ಷ ಎ ಪ್ಲಸ್‌ ಶ್ರೇಣಿ ಯನ್ನು 39,034, ಎ ಶ್ರೇಣಿ 86619, ಬಿ ಪ್ಲಸ್‌ 1,12472, ಬಿ 1,39178 ವಿದ್ಯಾರ್ಥಿಗಳು ಪಡೆದಿದ್ದಾರೆ. ಸಿ ಪ್ಲಸ್‌ ಶ್ರೇಣಿಯನ್ನು 1,56,487 ಮತ್ತು ಸಿ ಶ್ರೇಣಿಯನ್ನು 1,65,443 ವಿದ್ಯಾರ್ಥಿಗಳು ಪಡೆದಿದ್ದಾರೆ. ಕೃಪಾಂಕದಿಂದಾಗಿ ಸಿ ಮತ್ತು ಸಿ ಪ್ಲಸ್‌ ಶ್ರೇಣಿಯಲ್ಲಿ ಪಾಸ್‌ ಆದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next