ಉಡುಪಿ: ಶಾಲೆಗೆ ಸೈಕಲ್ನಲ್ಲೇ ಹೋಗುವ ಕನಸು ಕಂಡಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ತಮಗೆ ಸಿಗುವ ಉಚಿತ ಸೈಕಲ್ ಪಡೆಯಲು ಇನ್ನೂ ಒಂದು ತಿಂಗಳು ಕಾಯಬೇಕಾದ ಪರಿಸ್ಥಿತಿ ಇದೆ.
ಸರಕಾರಿ ಹಾಗೂ ಅನುದಾನಿತ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ವಿತರಣೆ ಮಾಡಲಾಗುತ್ತಿದ್ದು, ಕಳೆದ ಬಾರಿ ಈ ಹೊತ್ತಿಗೆ ವಿದ್ಯಾರ್ಥಿಗಳು ಸೈಕಲ್ನ ಉಪಯೋಗ ಪಡೆದು ಕೊಂಡಿದ್ದರು.
ಆದರೆ ಈ ಬಾರಿ ಸರಕಾರದಿಂದ ಇನ್ನೂ ಸೈಕಲ್ ಬಂದಿಲ್ಲ. ಈ ತಿಂಗಳಲ್ಲಿ ಬರುವ ನಿರೀಕ್ಷೆ ಇದ್ದು, ಬಿಡಿ ಭಾಗಗಳ ಜೋಡಣೆ ಮುಗಿದ ಅನಂತರ ಸೈಕಲ್ ವಿತರಣೆ ಕಾರ್ಯಕ್ರಮಗಳು ನಡೆಯಲಿದೆ.
ಉಡುಪಿ ಜಿಲ್ಲೆಯಲ್ಲಿ 106 ಸರಕಾರಿ ಶಾಲೆಗಳು 73 ಅನುದಾನಿತ ಪ್ರೌಢಶಾಲೆ ಗಳಿವೆ. ದ.ಕ. ಜಿಲ್ಲೆಯಲ್ಲಿ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳು ಸೇರಿ 1,472 ಶಾಲೆಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀ ವರ್ಷ ಶಿಕ್ಷಣ ಇಲಾಖೆಯು ಮಾರ್ಚ್ ಅಂತ್ಯಕ್ಕೆಅಗತ್ಯ ಇರುವ ಬೈಸಿಕಲ್ಗಳ ಸಂಖ್ಯೆಯನ್ನು ಸರಕಾರಕ್ಕೆ ಕಳುಹಿಸುತ್ತದೆ. ಅದರಂತೆ ಜೂನ್ ಅಂತ್ಯಕ್ಕೆ ಬೈಸಿಕಲ್ಗಳು ವಿದ್ಯಾರ್ಥಿಗಳ ಕೈಸೇರುತ್ತವೆ.
ಕಳೆದ ವರ್ಷ ಉಡುಪಿ ಜಿಲ್ಲೆಯಲ್ಲಿ 8,572 ಸೈಕಲ್ಗಳನ್ನು ವಿತರಿಸಲಾಗಿತ್ತು. ಬ್ರಹ್ಮಾವರ 1,801, ಬೈಂದೂರು 1,527, ಕಾರ್ಕಳ 1,713, ಕುಂದಾಪುರ 1,710, ಉಡುಪಿ 1,821 ಸೈಕಲ್ಗಳನ್ನು ವಿತರಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13,715 ಸೈಕಲ್ವಿತರಿಸಲಾಗಿತ್ತು. ಬಂಟ್ವಾಳ 3,699, ಬೆಳ್ತಂಗಡಿ 2,810, ಮಂಗಳೂರು ಉತ್ತರ 823, ಮಂಗಳೂರು ದಕ್ಷಿಣ 1,804, ಮೂಡುಬಿದಿರೆ 889, ಪುತ್ತೂರು 2,862, ಸುಳ್ಯ 828. ಈ ಬಾರಿಯೂ ಇಷ್ಟೇ ಪ್ರಮಾಣದಲ್ಲಿ ಸೈಕಲ್ ಬೇಡಿಕೆಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಶೀಘ್ರ ಸೈಕಲ್ ಬರಲಿದೆ ಮತ್ತು ವಿತರಣೆ ಮಾಡಲಾಗುತ್ತದೆ ಎಂಬುವುದು ಶಿಕ್ಷಣ ಇಲಾಖೆಯ ಸಮಜಾಯಿಷಿ.
ದುರುಪಯೋಗ ಆರೋಪ
ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಗಮನ ದಲ್ಲಿರಿಸಿಕೊಂಡು ಶಿಕ್ಷಣ ಇಲಾಖೆ ಸೈಕಲ್ ತೂಕವನ್ನು ನಿರ್ಧಾರ ಮಾಡಿದೆ. ಅದೇನಿದ್ದರೂ, ರಾಜ್ಯದ ಬಹುತೇಕ ಕಡೆಗಳಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗಿಂತ ಹೆಚ್ಚು ಅವರ ಪೋಷಕರೇ ಅನ್ಯ ಕಾರ್ಯಗಳಿಗೆ ಆ ಸೈಕಲ್ಗಳನ್ನು ಉಪಯೋಗಿಸುತ್ತಿರುವ ಆರೋಪವೂ ಇದೆ. ಈ ಹಿಂದೆಯೂ ಈ ಆರೋಪ ಇತ್ತು. ಆದರೆ ಇಲ್ಲಿವರೆಗೂ ಅದಕ್ಕೆ ಕಡಿವಾಣ ಬಿದ್ದಂತಿಲ್ಲ. ಕಡಿವಾಣ ಹಾಕುವ ನಿಟ್ಟಿನಲ್ಲಿ ಪೋಷಕರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೀಘ್ರದಲ್ಲೇ ವಿತರಣೆ
ಸೈಕಲ್ ವಿತರಣೆಯಲ್ಲಿ ಈ ಬಾರಿ ಸ್ವಲ್ಪ ವಿಳಂಬವಾಗಿದೆ. ಈ ತಿಂಗಳಲ್ಲಿ ಸೈಕಲ್ ಬರುವ ನಿರೀಕ್ಷೆ ಇದೆ. ಅದರ ಬಿಡಿಭಾಗಗಳ ಜೋಡಣೆಗಳು ನಡೆದು ಆಗಸ್ಟ್ ತಿಂಗಳ ಮೊದಲಾದರೂ ವಿತರಣೆ ಮಾಡುವ ಬಗ್ಗೆ ಗಮನಹರಿಸಲಾಗುವುದು.
–
ಶೇಷಶಯನ ಕಾರಿಂಜ,ಡಿಡಿಪಿಐ,
-ಪುನೀತ್ ಸಾಲ್ಯಾನ್