ನ್ಯೂಯಾರ್ಕ್ : ದಿ ವರ್ಲ್ಡ್ ಬಲೂಚ್ ಆರ್ಗನೈಸೇಶನ್ (ಡಬ್ಲ್ಯುಬಿಓ) ತಾನು ನಡೆಸಿಕೊಂಡು ಬರುತ್ತಿರುವ “ಸ್ವತಂತ್ರ ಬಲೂಚಿಸ್ಥಾನ್” ಅಭಿಯಾನವನ್ನು ಈಗ ಟಾಪ್ ಗೇರ್ ಗೆ ಒಯ್ದಿದೆ. ಇದರಿಂದ ಪಾಕಿಸ್ಥಾನಕ್ಕೆ ತೀವ್ರವಾದ ಬಿಸಿ ಮುಟ್ಟಿದೆ.
ಇತ್ತೀಚೆಗೆ ಡಬ್ಲ್ಯುಬಿಓ ನ್ಯೂಯಾರ್ಕ್‌ನಲ್ಲಿ ಮೊಬೈಲ್ ಡ್ರೈವ್ ಮೂಲಕ ಜಾಹೀರಾತು ಫಲಕಗಳನ್ನು ಬಳಸಿಕೊಂಡು ಬಲೂಚಿಸ್ಥಾನದಲ್ಲಿ ಪಾಕ್ ಸೇನೆ ನಡೆಸುತ್ತಿರುವ ಅತಿರೇಕಗಳು ಮತ್ತು ದೌರ್ಜನ್ಯಗಳನ್ನು ಸಾರಿ ಹೇಳುವ ಚಿತ್ರಗಳನ್ನು ಜನರಿಗೆ ತೋರಿಸುತ್ತಾ ಪಾಕ್ ವಿರೋಧಿ ಅಭಿಯಾನಕ್ಕೆ ಚುರುಕು ಮುಟ್ಟಿಸಿದೆ.
ನ್ಯೂಯಾರ್ಕ್‌ನಲ್ಲಿನ ಸುಮಾರು 100 ಕ್ಯಾಬ್‌ಗಳಲ್ಲಿ “ಫ್ರೀ ಬಲೂಚಿಸ್ಥಾನ್’ ಪ್ರಚಾರಾಭಿಯಾನವನ್ನು ಕೈಗೊಂಡ ಮರುದಿನವೇ ಡಬ್ಲ್ಯುಬಿಓ, ಘನ ಡೆರಿವರಿ ಟ್ರಕ್ ಬಳಸಿಕೊಂಡು ಅದರ ಹಿಂಬದಿ ಮತ್ತು ಎರಡೂ ಬದಿಗಳಿಗೆ ಪಾಕ್ ಸೇನಾ ದೌರ್ಜನ್ಯ ಬಿಂಬಿಸುವ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಅಂಟಿಸಿ
ವಿಶೇಷ ರೀತಿಯ ಪ್ರಚಾರಾಭಿಯಾನವನ್ನು ನಡೆಸಿತು.
ಬಲೂಚ್ ಜನರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮತ್ತು ಅವರ ಮೇಲೆ ಪಾಕ್ ಸೇನೆ ನಡೆಸುತ್ತಿರುವ ಅಮಾನುಷ ದೌರ್ಜನ್ಯದ ಬಗ್ಗೆ ನ್ಯೂಯಾರ್ಕ್ ಜನರಲ್ಲಿ ಜಾಗೃತಿ ಮೂಡಿಸುವುದೇ ಈ ಅಭಿಯಾನದ ಉದ್ದೇಶವಾಗಿದೆ ಎಂದು ಸಂಘಟಕರು ಹೇಳಿಕೊಂಡಿದ್ದಾರೆ.
ಡಬ್ಲ್ಯುಬಿಓ ತೀರ ಈಚೆಗೆ ಚೀನ-ಪಾಕಿಸ್ಥಾನ ಇಕಾನಮಿಕ್ ಕಾರಿಡಾರ್ ವಿರುದ್ಧ ಜನಜಾಗೃತಿ ಹುಟ್ಟಿಸುವ ಪ್ರಚಾರಾಭಿಯಾನವನ್ನು ಕೈಗೊಂಡಿತ್ತು. “ನೋ ಟು ಸಿಪಿಇಸಿ, ಚೀನ – ಪಾಕಿಸ್ಥಾನದ ಈ ಯೋಜನೆ ಬಲೂಚಿಸ್ಥಾನವನ್ನು ಲೂಟುವ ಉದ್ದೇಶವನ್ನು ಹೊಂದಿದೆ’ ಎಂದು ಅಭಿಯಾನದಲ್ಲಿ ಜನಜಾಗೃತಿ ಮಾಡಲಾಗಿತ್ತು.