Advertisement

ನಕಲಿ ಕಾಲ್‌ಸೆಂಟರ್‌ ತೆರೆದು ಯುಎಸ್‌ ಪ್ರಜೆಗಳಿಗೆ ಟೋಪಿ: 11 ಮಂದಿ ಬಂಧನ

02:19 PM Jul 09, 2022 | Team Udayavani |

ಬೆಂಗಳೂರು: ಬೆಂಗಳೂರಿನಲ್ಲಿ ಕಾಲ್‌ ಸೆಂಟರ್‌ ತೆರೆದು ಅಮೆರಿಕದ ಪ್ರಜೆಗಳನ್ನೇ ಟಾರ್ಗೆಟ್‌ ಮಾಡಿ ವಂಚಿಸುತ್ತಿದ್ದ ಜಾಲವನ್ನು ಭೇದಿಸಿರುವ ವೈಟ್‌ ಫೀಲ್ಡ್‌ ಠಾಣೆ ಪೊಲೀಸರು, 1 ಕೋಟಿ ರೂ. ಮೌಲ್ಯದ 132 ಡೆಸ್ಕ್ ಟಾಪ್‌, 15 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ.

Advertisement

ಗುಜರಾತ್‌ ಮೂಲದ ವೈಟ್‌ ಫೀಲ್ಡ್‌ ನಿವಾಸಿಗಳಾದ ಪ್ರತೀಕ್‌, ರಿಶ್ವಾಸ್‌, ಸೈಯ್ಯದ್‌, ಪರೀಕ್‌ ಬಿರೇನ್‌, ಕರಣ್‌, ಜಿತಿಯಾ ಕಿಶನ್‌, ಹೆಟಾ ಪಾಟೇಲ್‌, ಬಿಹಂಗ್‌, ರಾಜ್‌ ಲಾಲ್‌ ಸೋನಿ, ವಿಶಾಲ್‌ ಪರ್‌ಮರ್‌, ಮಿತೇಶ್‌ ಗುಪ್ತಾ ಬಂಧಿತರು. ತಲೆಮರೆಸಿಕೊಂಡಿರುವ ಕ್ಯಾಲಿಫೋರ್ನಿಯಾ ಪ್ರಜೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಮಹದೇವಪುರ ಠಾಣಾ ವ್ಯಾಪ್ತಿಯ ಸಿಲ್ವರ್‌ ಸಾಫ್ಟ್ ಪಾರ್ಕ್‌ನ 3ನೇ ಮಹಡಿಯಲ್ಲಿ ಹಾಗೂ ವೈಟ್‌ ಫೀಲ್ಡ್‌ ನಲ್ಲಿ ಆರೋಪಿಗಳು ಏಥಿಕಲ್‌ ಇನ್‌ಫೋ ಕಂ ಪ್ರೈ.ಲಿ. ಹೆಸರಿನಲ್ಲಿ ನಕಲಿ ಕಾಲ್‌ಸೆಂಟರ್‌ ಕಂಪನಿ ತೆರೆದಿದ್ದರು. ಕ್ಯಾಲಿಫೋರ್ನಿಯಾದಲ್ಲಿರುವ ಆಪ್ತನ ಮೂಲಕ ಅಮೆ ರಿಕದಲ್ಲಿರುವ ಪ್ರಜೆಗಳ ಮೊಬೈಲ್‌ ನಂಬರ್‌, ಇ- ಮೇಲ್‌ ಐಡಿ ಸಂಪರ್ಕಿಸುತ್ತಿದ್ದರು. ನಂತರ ಬೆಂಗಳೂರಿ ನಲ್ಲೇ ಕುಳಿತುಕೊಂಡು ಅಮೆರಿಕದ ಪ್ರಜೆಗಳನ್ನು ಸಂಪರ್ಕಿಸಿ ನಿಮಗೆ ನಮ್ಮ ಕಂಪನಿಯಿಂದ ಬೆಲೆ ಬಾಳುವ ಉಡುಗೊರೆ ಕೊಡಲಾಗುತ್ತದೆ, ಲಾಟರಿ ಬಂದಿದೆ, ನಿಮ್ಮ ಬ್ಯಾಂಕ್‌ ಖಾತೆಯಲ್ಲಿ ಸಮಸ್ಯೆಯಾಗಿದೆ, ಬ್ಯಾಂಕ್‌ ಖಾತೆ ನವೀಕರಿಸಬೇಕಿದೆ ಎಂಬಿತ್ಯಾದಿ ಸಬೂಬುಗಳನ್ನು ಹೇಳುತ್ತಿದ್ದರು.

ನಂತರ ಅಮೆರಿಕದ ಪ್ರಜೆಗಳ ಬ್ಯಾಂಕ್‌ ದಾಖಲೆ, ಪಾಸ್‌ ವರ್ಡ್‌ಗಳನ್ನು ಕೊಡುವಂತೆ ಸೂಚಿಸುತ್ತಿದ್ದರು. ಆರೋಪಿಗಳ ಮಾತಿಗೆ ಮರುಳಾಗಿ ಅವರು ಕೇಳಿದ ದಾಖಲೆಗಳನ್ನು ಕೊಟ್ಟರೆ, ಅಂತಹವರ ಬ್ಯಾಂಕ್‌ ಖಾತೆಯನ್ನು ಹ್ಯಾಕ್‌ ಮಾಡಿ, ಲಕ್ಷ- ಲಕ್ಷ ರೂ. ಲಪಟಾಯಿಸುತ್ತಿದ್ದರು. ಮತ್ತೆ ಆರೋಪಿಗಳನ್ನು ಸಂಪರ್ಕಿಸಿದರೆ ಒಂದಿಷ್ಟು ಹಣ ನಮಗೆ ಕೊಟ್ಟರೆ ನಿಮ್ಮ ಬ್ಯಾಂಕ್‌ ಖಾತೆಯ ಲ್ಲಿದ್ದ ಹಣ ರೀ-ಫ‌ಂಡ್‌ ಮಾಡುವುದಾಗಿ ಸೂಚಿಸಿ ಮತ್ತೆ ವಂಚಿಸುತ್ತಿದ್ದರು.

ನೌಕರರಿಗೆ ವಂಚನೆ ಬಗ್ಗೆ ಗೊತ್ತಿರಲಿಲ್ಲ: ಆರೋಪಿಗಳು ನಡೆಸುತ್ತಿದ್ದ ನಕಲಿ ಕಾಲ್‌ ಸೆಂಟರ್‌ನಲ್ಲಿ ನೂರಾರು ಮಂದಿ ಕೆಲಸಕ್ಕಿದ್ದರು. ಅಚ್ಚರಿ ಸಂಗತಿ ಎಂದರೆ, ಅಲ್ಲಿ ಕೆಲಸ ಮಾಡುತ್ತಿದ್ದ ನೌಕರರಿಗೆ ಆರೋಪಿಗಳು ವಂಚನೆ ಎಸಗುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿಯೇ ಇರಲಿಲ್ಲ. ಸಮಯಕ್ಕೆ ಸರಿಯಾಗಿ ಒಳ್ಳೆಯ ವೇತನ ಬರುತ್ತಿದ್ದ ಹಿನ್ನೆಲೆಯಲ್ಲಿ ಕಂಪನಿ ವ್ಯವಹಾರದ ಬಗ್ಗೆ ನೌಕರರರು ವಿಚಾರಿ ಸುತ್ತಿರಲಿಲ್ಲ. ಇನ್ನು ಆರೋಪಿಗಳು ಪೊಲೀಸ ರಿಗೆ ತಮ್ಮ ವ್ಯವಹಾರದ ಬಗ್ಗೆ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ನಗದು ರೂಪದಲ್ಲೇ ನೌಕರರಿಗೆ ವೇತನ ಕೊಡುತ್ತಿ ದ್ದರು ಎಂದು ಹೇಳಲಾಗಿದೆ.

Advertisement

ಕಂಪನಿಯಲ್ಲಿ 70 ಮಂದಿಗೆ ಉದ್ಯೋಗ: ನಕಲಿ ಕಾಲ್‌ ಸೆಂಟರ್‌ ಕಂಪನಿಯಲ್ಲಿ 70 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ರಾಜಸ್ಥಾನ, ಹರಿಯಾಣ, ಮಹಾರಾಷ್ಟ್ರ ಮೂಲದ ಕೆಲಸಗಾರರನ್ನೇ ಹೆಚ್ಚಾಗಿ ಇಲ್ಲಿ ಬಳಕೆ ಮಾಡ ಲಾಗಿತ್ತು. ಕಂಪನಿ ಸ್ಥಾಪಿಸಿದ್ದ ಆರೋಪಿಗಳು ಶಾಲಾ ಬಸ್‌ನಲ್ಲೇ ಕೆಲಸಗಾರರನ್ನು ಕರೆ ತರುತ್ತಿದ್ದರು. ಬಸ್‌ ಮೇಲೆ ಎಸ್‌ಪಿಎಸ್‌ ವಿದ್ಯಾಕೇಂದ್ರ ಹಾಗೂ ಪರದೇಶಿ ಮಠ ಎಂದು ಬರೆಸಿದ್ದರು.

ಸಿಐಡಿಗೆ ವರ್ಗಾವಣೆ : ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸದ್ಯದಲ್ಲೇ ಸಿಐಡಿ ಸೈಬರ್‌ ಘಟಕಕ್ಕೆ ವರ್ಗಾವಣೆಯಾಗಲಿದೆ. ಇದಲ್ಲದೇ ಅಮೆರಿಕದ ಪೊಲೀಸರು ಬೆಂಗಳೂರಿಗೆ ಬಂದು ಆರೋಪಿಗಳ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಆರೋಪಿಗಳು ಕೋಟ್ಯಂತರ ರೂ. ವಂಚನೆ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹವಾಲಾ ದುಡ್ಡಲ್ಲೇ ಸಂಸ್ಥೆ ಸಿಬ್ಬಂದಿಗೆ ವೇತನ : ಅವೇರಿಕ ಪ್ರಜೆಗಳಿಂದ ಡಾಲರ್‌ ರೂಪದಲ್ಲಿ ಪಡೆದ ಹಣವನ್ನು ಆರೋಪಿಗಳು ಥಾಯ್ಲೆಂಡ್‌ ಮತ್ತು ಬ್ಯಾಂಕಾಕ್‌ನಲ್ಲಿ ತೆರೆದಿರುವ ಬ್ಯಾಂಕ್‌ ಖಾತೆಗೆ ಹಾಕಿಸಿಕೊಂಡು, ಹವಾಲಾ ಮೂಲಕ ಭಾರತಕ್ಕೆ ಹಣ ತರಿಸುತ್ತಿದ್ದರು. ಕಂಪನಿಯ ಉದ್ಯೋಗಿಗಳಿಗೆ ಪ್ರತಿ ತಿಂಗಳು ನಗದು ರೂಪದಲ್ಲೇ ವೇತನ ಪಾವತಿಸುತ್ತಿದ್ದರು. ಆರೋಪಿಗಳು ಅಮೆರಿಕ ಪ್ರಜೆಗಳ ಮೊಬೈಲ್‌ ಸಂಖ್ಯೆ, ಬ್ಯಾಂಕ್‌, ಅಮೆಜಾನ್‌ ಖಾತೆ, ವಾಲ್‌ ಮಾರ್ಟ್‌ ಖಾತೆ ಮಾಹಿತಿ ಸಂಗ್ರಹಸಿ 1 ಸಾವಿರ ಡಾಲರ್‌, 2 ಸಾವಿರ ಡಾಲರ್‌ಗೆ ಗಿಫ್ಟ್ ಕಾರ್ಡ್‌ ಖರೀದಿಸುತ್ತಿದ್ದರು. ನಂತರ ಕೋಡ್‌ ನಂಬರ್‌ ಬಗ್ಗೆ ಅಮೆರಿಕ ಪ್ರಜೆಗಳಿಂದ ಮಾಹಿತಿ ಕಲೆ ಹಾಕುತ್ತಿದ್ದರು. ಆ ಕೋಡ್‌ ಅನ್ನು ನಕಲಿ ಕಾಲ್‌ ಸೆಂಟರ್‌ ಟೀಮ್‌ ಲೀಡರ್‌ಗಳು, ಅಮೆರಿಕ ಕಿಂಗ್‌ ಪಿನ್‌ಗೆ ಹೇಳುತ್ತಿದ್ದರು. ಕ್ಯಾಲಿಫೋರ್ನಿಯಾದಲ್ಲಿರುವ ಕಿಂಗ್‌ಪಿನ್‌ ಆ ಕೋಡ್‌ ಬಳಸಿಕೊಂಡು ಗಿಫ್ಟ್ ಕಾರ್ಡ್‌ ಅನ್ನು ಡಾಲರ್‌ಗೆ ಪರಿವರ್ತಿಸುತ್ತಿದ್ದ. ಬಳಿಕ ಹವಾಲಾ ಮೂಲಕ ಆ ಹಣವನ್ನು ಭಾರತಕ್ಕೆ ಕಳುಹಿಸುತ್ತಿದ್ದ.

ಇದನ್ನೂ ಓದಿ: ಕುಣಿಗಲ್: ಗೋ ಮಾಂಸ ಜಾಲದ ಮೇಲೆ ಪೊಲೀಸರ ದಾಳಿ; 15 ಹಸು,13 ಎಮ್ಮೆ ರಕ್ಷಣೆ

ಆರೋಪಿಗಳು ಸುಮಾರು ಒಂದು ವರ್ಷದಿಂದ ಅಮೆರಿಕ ಪ್ರಜೆಗಳನ್ನು ವಂಚಿಸುತ್ತಿದ್ದರು. ಪೊಲೀಸರಿಂದ ಬಂಧನಕ್ಕೊಳಗಾಗಿರುವ 11 ಮಂದಿ ಆರೋಪಿಗಳು ಕಂಪನಿಯ ಟೀಂ ಲೀಡರ್‌ಗಳಾಗಿದ್ದಾರೆ. ಇವರು ಗುಜರಾತ್‌, ಮುಂಬೈ, ಈಶಾನ್ಯ ರಾಜ್ಯಗಳ ಅಭ್ಯರ್ಥಿಗಳನ್ನು ಟೆಲಿ ಕಾಲರ್‌ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಕಂಪನಿಯ ಟೀಮ್‌ ಲೀಟರ್‌ಗಳ ಸೂಚನೆ ಮೇರೆಗೆ ಟೆಲಿ ಕಾಲರ್‌ಗಳು ಕಾರ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕ್ಯಾಲಿಫೋರ್ನಿಯಾದಲ್ಲಿ ಕಿಂಗ್ಪಿನ್‌ : ಪ್ರಕರಣದ ಕಿಂಗ್‌ ಪಿನ್‌ ಕ್ಯಾಲಿಫೋರ್ನಿಯಾದಲ್ಲಿರುವ ಆರೋಪಿ ಅಲ್ಲಿನ ಶಾಪಿಂಗ್‌ ಮಾಲ್‌ಗ‌ಳಿಂದ ವಿದೇಶಿ ಪ್ರಜೆಗಳ ಮೊಬೈಲ್‌ ನಂಬರ್‌ ಪಡೆಯುತ್ತಿದ್ದ. ಇದಲ್ಲದೇ, ನಕಲಿ ಆ್ಯಪ್‌ಗಳನ್ನು ಸೃಷ್ಟಿಸಿ ವಿದೇಶಿ ಪ್ರಜೆಗಳ ನಂಬರ್‌ ಪಡೆಯುತ್ತಿದ್ದ. ಕೃತ್ಯ ಎಸಗಿ ಬಂದ ಹಣವನ್ನು ಎಲ್ಲರೂ ಸಮಾನಾಗಿ ಹಂಚಿಕೊಳ್ಳುತ್ತಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ. ಕ್ಯಾಲಿಫೋರ್ನಿಯಾದಲ್ಲಿರುವ ಕಿಂಗ್‌ಪಿನ್‌ ಆರೋಪಿಗಳಿಗೆ ಹೇಗೆ ಪರಿಚಯವಾಗಿದ್ದಾನೆ. ಇದುವರೆಗೆ ಎಷ್ಟು ಜನರಿಗೆ ಆರೋಪಿಗಳು ವಂಚಿಸಿದ್ದಾರೆ ಎಂಬಿತ್ಯಾದಿ ವಿಚಾರಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ? : ಬಂಧಿತರು ನಕಲಿ ಕಾಲ್‌ ಸೆಂಟರ್‌ ನಡೆಸುವ ಬಗ್ಗೆ ಬಾತ್ಮೀದಾರರಿಂದ ವೈಟ್‌ ಫೀಲ್ಡ್‌ ಸೈಬರ್‌ ಕ್ರೈಂ ಠಾಣೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಮಾಹಿತಿ ಆಧರಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾಲಯದಿಂದ ಸರ್ಚ್‌ ವಾರೆಂಟ್‌ ಪಡೆದು ನಕಲಿ ಕಾಲ್‌ ಸೆಂಟರ್‌ಗಳ ಮೇಲೆ ದಾಳಿ ನಡೆಸಿ 6 ಜನರನ್ನು ಬಂಧಿಸಿದ್ದರು. ಇವರನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇವರು ಕೊಟ್ಟ ಮಾಹಿತಿ ಆಧರಿಸಿ ಇತರ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next