ಬೆಂಗಳೂರು: ಪ್ರೀ ಆಕ್ಟಿವೇಟೆಡ್ ಸಿಮ್‌ಕಾರ್ಡ್ ಗಳನ್ನು ಬಳಸಿ ನಕಲಿ ಚಾಲಕರು ಮತ್ತು ಸವಾರರ ಹೆಸರಿನಲ್ಲಿ ನೋಂದಾಯಿಸಿ ಕ್ಯಾಬ್, ಬೈಕ್ ಟ್ಯಾಕ್ಸಿಗಳು ಸಂಚರಿಸಿದಂತೆ ದಾಖಲೆ ಸೃಷ್ಟಿಸಿ ಉಬರ್, ರ್ಯಾಪಿಡೋ ಕಂಪನಿಗಳಿಂದ ಕಮಿಷನ್ ಪಡೆದು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮನೋಜ್ ಕಮಾರ್, ಸಚಿನ್ ಹಾಗೂ ಶಂಕರ್ ಬಂಧಿತರು. ಆರೋಪಿಗಳಿಂದ 1,055 ಸಿಮ್ ಕಾರ್ಡ್, 15 ಮೊಬೈಲ್, 4 ಲ್ಯಾಪ್ ಟಾಪ್, ಕಂಪ್ಯೂಟರ್, ಬಯೋಮೆಟ್ರಿಕ್ ಉಪ ಕರಣ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅರೋಪಿಗಳ ಪೈಕಿ ಮನೋಜ್ ಕಮಾರ್ ಉಬರ್ ಮತ್ತು ರ್ಯಾಪಿಡೋ ಕಂಪನಿಗಳ ಕ್ಯಾಬ್ ಮತ್ತು ಬೈಕ್ ಟ್ಯಾಕ್ಸಿಗಳನ್ನು ಕಂಪನಿಗಳಿಗೆ ಅಟ್ಯಾಚ್ ಮಾಡುತ್ತಿದ್ದ. ಸಚಿನ್ ಫೈನಾನ್ಸ್ ಕಂಪನಿಯಲ್ಲಿ ಲೋನ್ ಕೊಡಿಸುವ ಕೆಲಸ ಮಾಡುತ್ತಿದ್ದ. ಇನ್ನು ಶಂಕರ್ ವೋಡಾಫೋನ್ ಕಂಪನಿಯಲ್ಲಿ ಸಿಮ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಕೃತ್ಯ ಎಸಗಿದ್ದಾರೆ.
ಮನೋಜ್ ಬಳಿ ಉಬರ್ ಹಾಗೂ ರ್ಯಾಪಿಡೋ ಕಂಪನಿ ಸಾಫ್ಟ್ವೇರ್ ಇದ್ದು, ಪ್ರೀ- ಆಕ್ಟಿವೇಟೆಡ್ ಸಿಮ್‌ಕಾರ್ಡ್‌ಗಳನ್ನು ಬಳಸಿ ಕೊಂಡು ಕಾರು-ಬೈಕ್ ಟ್ಯಾಕ್ಸಿಗಳಲ್ಲಿ ಪ್ರಯಾ ಣಿಕರು ಓಡಾಡುವ ರೀತಿಯಲ್ಲಿ ನೋಂದಣಿ ಮಾಡುತ್ತಿದ್ದ. ಆದರೆ, ಅಸಲಿಗೆ ಯಾವುದೇ ವಾಹನಗಳು ಚಲಿಸುತ್ತಿರಲಿಲ್ಲ. ಈ ರೀತಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಯಾವುದೇ ವಾಹನಗಳು ಚಲಿಸದಿದ್ದರೂ ಚಲಿಸಿದ ರೀತಿಯಲ್ಲಿ ಡೇಟಾ ಸೃಷ್ಟಿಸಿ ಟ್ಯಾಕ್ಸಿ ಕಂಪನಿಗಳಿಂದ ಕಮಿಷನ್ ಪಡೆಯುತ್ತಿದ್ದ. ಅದನ್ನು ಮೂವರು ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸ್ ಆಯುಕ್ತರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಎಸ್.ಡಿ. ಶರಣಪ್ಪ ಹಾಗೂ ಇತರೆ ಅಧಿಕಾರಿಗಳು ಇದ್ದರು.