ಬೆಂಗಳೂರು: ಜಿಮ್‌ನಲ್ಲಿ ಪರಿಚಯವಾದ ಯುವಕ ನೊಬ್ಬ ಮದುವೆಯಾಗುವುದಾಗಿ ನಂಬಿಸಿ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾನೆ ಎಂದು ಆರೋಪಿಸಿ ಮಹಿಳಾ ಟೆಕಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೊಮ್ಮನಹಳ್ಳಿಯ ಹೊಸಪಾಳ್ಯ ನಿವಾಸಿ 27 ವರ್ಷದ ಮಹಿಳಾ ಟೆಕಿ ನೀಡಿದ ದೂರಿನ ಮೇರೆಗೆ ಬಂಡೇಪಾಳ್ಯ ಠಾಣೆ ಪೊಲೀಸರು ಉತ್ತರ ಪ್ರದೇಶ ಮೂಲದ ಆದಿತ್ಯನಾಥ್ ಸಿಂಗ್(26) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಉತ್ತರ ಭಾರತ ಮೂಲದ ಸಂತ್ರಸ್ತೆ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ನಗರದ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಬೊಮ್ಮನಹಳ್ಳಿಯಲ್ಲಿ ವಾಸವಾಗಿದ್ದರು. ಇನ್ನು ಆರೋಪಿ ಕೂಡ ಮೂರು ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಆತ ಕೂಡ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ.
ಈ ಮಧ್ಯೆ ಸಂತ್ರಸ್ತೆ 2022ರ ಜುಲೈನಲ್ಲಿ ಜಿಮ್‌ವೊಂದಕ್ಕೆ ಸೇರಿಕೊಂಡಿದ್ದರು. ಅದೇ ಜಿಮ್‌ನಲ್ಲಿ ದೇಹದಾಡ್ಯì ತರಬೇತಿಗೆ ಬರುತ್ತಿದ್ದ ಆರೋಪಿಯ ಪರಿಚಯವಾಗಿದ್ದು, ಕೆಲ ತಿಂಗಳ ನಂತರ ಇಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದ್ದಾರೆ. ಆ ನಂತರ ಆದಿತ್ಯನಾಥ್ ಸಿಂಗ್ ಮದುವೆಯಾಗುವುದಾಗಿ ನಂಬಿಸಿದ್ದರಿಂದ ಆತನೊಂದಿಗೆ 2022ರ ನವೆಂಬರ್‌ನಿಂದ ಸಹ ಜೀವನ ನಡೆಸುತ್ತಿದ್ದೆ. ಈ ವೇಳೆ ಇಬ್ಬರು ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದೇವೆ. 2023ರ ಜುಲೈ ನಂತರ ಆರೋಪಿ ತನ್ನೊಂದಿಗೆ ಅಂತರ ಕಾಯ್ದುಕೊಂಡಿದ್ದಾನೆ. ಆ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ.
ಈ ನಡುವೆ 2023ರ ಆಗಸ್ಟ್‌ನಲ್ಲಿ ಆದಿತ್ಯನಾಥ್ ಸಿಂಗ್, ತನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಕೆಲ ತಿಂಗಳ ಬಳಿಕ ಮತ್ತೆ ತನ್ನೊಂದಿಗೆ ಮಾತುಕತೆ ಮಾಡಿಕೊಂಡು ಮದುವೆಯಾಗುತ್ತೇನೆಂದು ತನ್ನೊಂದಿಗೆ ಮತ್ತೆ ದೈಹಿಕ ಸಂಬಂಧ ಮುಂದುವರಿಸಿದ್ದ. ಇತ್ತೀಚೆಗೆ ಮದುವೆಯಾಗುವಂತೆ ಒತ್ತಾಯಿಸಿದಾಗ ಮತ್ತೆ ತನ್ನಿಂದ ಅಂತರ ಕಾಯ್ದುಕೊಂಡು ದೂರವಾಗಿದ್ದ. ಅದನ್ನು ಪ್ರಶ್ನಿಸಿದಕ್ಕೆ “ನನ್ನ ಮೇಲೆ ಹಲ್ಲೆ ನಡೆಸಿ, ಗೋಡೆಗೆ ತಲೆ ಗುದ್ದಿಸಿ, ಚಾಕುವಿನಿಂದ ಕೊಲೆಗೆ ಯತ್ನಿಸಿದ್ದಾನೆ’. ಹೀಗಾಗಿ ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸಂತ್ರಸ್ತೆ ದೂರು ನೀಡಿದ್ದಾರೆ.
ಮತ್ತೂಂದೆಡೆ ದೂರುದಾರ ಸಂತ್ರಸ್ತೆಗೆ ಈಗಾಗಲೇ ಮದುವೆಯಾಗಿದ್ದು, ಪತಿಯಿಂದ ದೂರವಾಗಿದ್ದಾರೆ ಎಂಬ ವಿಚಾರಕ್ಕೆ ಆದಿತ್ಯನಾಥ್ ಸಿಂಗ್ ಅಂತರ ಕಾಯ್ದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಪ್ರಕರಣ ಸಂಬಂಧ ಆರೋಪಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.