Advertisement

Fraud: ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗೆ 2.32 ಕೋಟಿ ರೂ. ವಂಚನೆ

10:42 AM Jul 09, 2024 | Team Udayavani |

ಬೆಂಗಳೂರು: ನಿವೇಶನ ಖರೀದಿಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 2.32 ಕೋಟಿ ರೂ. ಸಾಲ ಪಡೆದು ವಂಚಿಸಿದ್ದ ಐವರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬೌರಿಂಗ್‌ ಆಸ್ಪತ್ರೆ ಮುಂಭಾಗದಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ಬೆಂಗಳೂರು ಕೇಂದ್ರ ಶಾಖೆಯ ಎಜಿಎಂ ದೊರೈರಾಜು ಅವರು ನೀಡಿರುವ ದೂರು ಆಧರಿಸಿ, ಸಿಸಿಬಿ ಪೊಲೀಸರು ಶಿವಣ್ಣ, ಪಿ.ಅಚ್ಚುಕುಟ್ಟನ್‌, ಮೊಹಮ್ಮದ್‌ ಫ‌ಯಾಜ್‌, ವೀರಭದ್ರಪ್ಪ ಹಾಗೂ ಸೈಯದ್‌ ಹಾಶೀಂ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ನಿವೇಶನ ಖರೀದಿಗಾಗಿ ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ 2.32 ಕೋಟಿ ಸಾಲ ಪಡೆದು ವಂಚಿಸಿದ್ದಾರೆ ಎಂಬ ಆರೋಪದಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಬೆಂಗಳೂರು ಉತ್ತರ ತಾಲೂಕಿನ ಮಲ್ಲತ್ತಹಳ್ಳಿ ಗ್ರಾಮದಲ್ಲಿ ಶಿವಣ್ಣ ಎಂಬುವರಿಗೆ ಸೇರಿದ ನಿವೇಶನ ಖರೀದಿಸಲು ಸಾಲಕ್ಕಾಗಿ ಬ್ಯಾಂಕ್‌ಗೆ ಅಚ್ಚುಕುಟ್ಟನ್‌ ಅರ್ಜಿ ಸಲ್ಲಿಸಿದ್ದರು. 2023ರ ಜನವರಿಯಲ್ಲಿ 1.16 ಕೋಟಿ ಸಾಲ ಮಂಜೂರು ಆಗಿತ್ತು. ಸಾಲ ಮರುಪಾವತಿ ಮಾಡದಿದ್ದಾಗ ಬ್ಯಾಂಕ್‌ನಿಂದ ಅಚ್ಚುಕುಟ್ಟನ್‌ಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ನೋಟಿಸ್‌ ಸ್ವೀಕೃತಿಯಾಗದೇ ವಾಪಸ್‌ ಬಂದಿತ್ತು. ಬಳಿಕ  ಬ್ಯಾಂಕ್‌ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ನಿವೇಶನ ಬೇರೆಯವರ ಹೆಸರಿನಲ್ಲಿ ಇರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೇ ರೀತಿ ಆರೋಪಿ ಮೊಹಮ್ಮದ್‌ ಫ‌ಯಾಜ್‌ ಎಂಬವರೂ ಶಿವಣ್ಣಗೆ ಸೇರಿದ ಮತ್ತೂಂದು ನಿವೇಶನ ಖರೀದಿಸಲು ಸಾಲಕ್ಕಾಗಿ ಅರ್ಜಿ ಸಲ್ಲಿಸಿ 1.16 ಕೋಟಿ ರೂ. ಪಡೆದುಕೊಂಡಿದ್ದರು. ಅವರಿಗೂ ನೋಟಿಸ್‌ ನೀಡಿದ್ದು ಸ್ವೀಕೃತವಾಗದೇ ವಾಪಸ್‌ ಬಂದಿತ್ತು. ಅವರೂ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದಿದ್ಧಾರೆ ಎಂಬುದು ಗೊತ್ತಾಗಿದೆ. ಹೀಗಾಗಿ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ ಐವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೊರೈರಾಜು ದೂರು ನೀಡಿದ್ದಾರೆೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next