Advertisement

Fake document: ನಕಲಿ ದಾಖಲೆ ನೀಡಿ ಬ್ಯಾಂಕ್‌ಗೆ 2.30 ಕೋಟಿ ರೂ. ವಂಚನೆ

11:07 AM Jul 31, 2024 | Team Udayavani |

ಬೆಂಗಳೂರು: ಬ್ಯಾಂಕ್‌ವೊಂದರಿಂದ 2.30 ಕೋಟಿ ರೂ. ಸಾಲ ಪಡೆದು ಮರು ಪಾವತಿಸದೆ ವಂಚಿಸಿದ ಆರೋಪದಡಿ ಸಿಸಿಬಿ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

Advertisement

ಯಲಹಂಕದ ರಾಷ್ಟ್ರೀಕೃತ ಬ್ಯಾಂಕ್‌ಗೆ ಆರೋಪಿಗಳು ವಂಚಿಸಿದ್ದು, ಬ್ಯಾಂಕಿನ ವ್ಯವಸ್ಥಾಪಕ ಟಿ.ಎಂ.ರವಿ ನೀಡಿದ ದೂರಿನ ಮೇರೆಗೆ ಮಲ್ಲತಹಳ್ಳಿ ಕೆಂಗುಂಟೆಯ ಶಿವಣ್ಣ (43), ವೀರಭದ್ರಪ್ಪ (90), ತೆಲಂಗಾಣ ಮೂಲದ ಕೊಲುಪುಲಾ ವಿಜಯ್ (29), ಹರಿಯಾಣ ಮೂಲದ ವಿಜಯಕುಮಾರ್‌(35) ವಿರುದ್ಧ ನಕಲಿ ದಾಖಲೆ ಸೃಷ್ಟಿ, ವಂಚನೆ ಬಗ್ಗೆ ಕೇಸ್‌ ದಾಖಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು. ‌

ಏನಿದು ಪ್ರಕರಣ?: ಆರೋಪಿಗಳ ಪೈಕಿ ಕೊಲುಪುಲಾ ವಿಜಯ್‌ ಮತ್ತು ವಿಜಯ್‌ ಕುಮಾರ್‌ ಬ್ಯಾಂಕ್‌ನ ಲೋನ್‌ ಏಜೆಂಟ್‌ಗಳಾದ ಪ್ರಮೋದ್‌ ಸಿಂಗ್‌ ಮತ್ತು ಮೊಹಮ್ಮದ್‌ ಸುಹೇಲ್‌ ಮೂಲಕ ಬ್ಯಾಂಕ್‌ಗೆ ಬಂದಿದ್ದರು. ಶಿವಣ್ಣ ಎಂಬುವವರ ಯಶವಂತಪುರ ಹೋಬಳಿಯ ಎರಡು ನಿವೇಶನ ಖರೀದಿಸಲು ಸಾಲ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಬ್ಯಾಂಕ್‌ ಸಿಬ್ಬಂದಿ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಬಳಿಕ ಬ್ಯಾಂಕ್‌ ಅಧಿಕಾರಿಗಳು ಒಂದು ನಿವೇಶನಕ್ಕೆ 97.40 ಲಕ್ಷ ರೂ. ಹಾಗೂ ಮತ್ತೂಂದು ನಿವೇಶನಕ್ಕೆ 1.33 ಕೋಟಿ ರೂ. ಸೇರಿ ಒಟ್ಟು 2.30 ಕೋಟಿ ರೂ. ಸಾಲ ಮಂಜೂರು ಮಾಡಿದ್ದಾರೆ.

ಬಳಿಕ ಕೊಲುಪುಲಾ ವಿಜಯ್‌ ಮತ್ತು ವಿಜಯ್‌ ಕುಮಾರ್‌ ಈ ನಿವೇಶನಗಳನ್ನು ಕ್ರಮವಾಗಿ ಶ್ರೀರಾಮಪುರದ ಉಪನೋಂದಣಾಧಿಕಾರಿಗಳ ಕಚೇರಿ ಹಾಗೂ ಯಶವಂತಪುರ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಸೇಲ್‌ ಡೀಡ್‌ ಮಾಡಿಸಿದ್ದಾರೆ. ಬಳಿಕ ಕೊಲುಪುಲಾ ವಿಜಯ್‌ ಮತ್ತು ವಿಜಯ್‌ ಕುಮಾರ್‌ ಸಾಲ ಮರುಪಾವತಿಸಿಲ್ಲ. ಬಳಿಕ ಬ್ಯಾಂಕ್‌ನಿಂದ ನೋಟಿಸ್‌ ಜಾರಿ ಮಾಡಿದ್ದು, ಆ ನೋಟಿಸ್‌ಗಳು ಸ್ವೀಕೃತವಾಗದೆ ವಾಪಸ್‌ ಬಂದಿವೆ. ಈ ವೇಳೆ ಬ್ಯಾಂಕ್‌ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದಾಗ, ಆ ನಿವೇಶನಗಳ ಮಾಲೀಕರು ಬೇರೆಯವರು ಎಂಬುದು ಗೊತ್ತಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next