ತೆಕ್ಕಟ್ಟೆ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಪ್ರಮುಖ ಭಾಗದ ಜವುಳಿ ಮಳಿಗೆ ಹಾಗೂ ಇನ್ನಿತರ ಅಂಗಡಿಗಳಿಗೆ ತೆರಳಿ 2 ಸಾವಿರ ರೂ. ಮುಖ ಬೆಲೆಯ ನೋಟ್ ನೀಡಿ ಹಣ ಪೀಕುವ ಅಂತಾರಾಜ್ಯ ಅಪರಿಚಿತ ವ್ಯಕ್ತಿಗಳ ತಂಡವೊಂದು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಇಲ್ಲಿನ ಪ್ರಮುಖ ಜವುಳಿ ಮಳಿಗೆಯೊಂದರಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಗ್ರಾಹಕರ ಸೋಗಿನಲ್ಲಿ ಬಂದು 2 ಸಾವಿರ ರೂ. ಮುಖಬೆಲೆಯ 5 ನೋಟುಗಳನ್ನು ನೀಡಿ, 100 ರೂ. ಮುಖ ಬೆಲೆಯ ಚಿಲ್ಲರೆ ನೀಡುವಂತೆ ವಿನಂತಿಸುತ್ತಾರೆ.ಅಂಗಡಿಯ ವ್ಯವಸ್ಥಾಪಕರು 100 ರೂ. ಚಿಲ್ಲರೆ ಇಲ್ಲ ಬದಲಾಗಿ 500 ರೂ. ಮುಖಬೆಲೆಯ 20 ನೋಟ್‌ಗಳನ್ನು ನೀಡುತ್ತಾರೆ. ವ್ಯಾಪಾರದ ಗಡಿಬಿಡಿಯಲ್ಲಿರುವುದನ್ನು ಅರಿತ ಅಪರಿಚಿತ ಇಬ್ಬರು ವ್ಯಕ್ತಿಗಳು ಈ ವಿಷಯವನ್ನೇ ಮುಖ್ಯವಾಗಿರಿಸಿಕೊಂಡು ನಾನು ನೀಡಿದ ಹಣವನ್ನು ವಾಪಸು ನೀಡುವಂತೆ ವ್ಯವಸ್ಥಾಪಕರ ನಡುವೆ ಕೈಮುಗಿದು ವ್ಯವಸ್ಥಾಪಕರ ಗಮನವನ್ನು ಬೇರೆಡೆಗೆ ಸೆಳೆದು 3,500 ರೂಪಾಯಿ ಯಾಮಾರಿಸಿದ್ದಾರೆ.
ಇದನ್ನೂ ಓದಿ: ಗೊಂಡಾ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ 13 ವರ್ಷದ ಬಾಲಕ
ಅದರಂತೆ ಇಲ್ಲಿನ ಪ್ರಮುಖ ಭಾಗದಲ್ಲಿರುವ ಪೂಜಾ ಸಾಮಾಗ್ರಿಗಳ ಅಂಗಡಿಗೆ ತೆರಳಿ ತಂಬಿಗೆ ಖರೀದಿಸಿ ರೂ. 2 ಸಾವಿರ ಮುಖಬೆಲೆಯ ನೋಟ್ ನೀಡಿ, ಚಿಲ್ಲರೆ ಪಡೆದುಕೊಂಡು ತೆರಳುತ್ತಾರೆ. ತದ ನಂತರ ಪುನಃ ಅದೇ ಅಂಗಡಿಗೆ ಬಂದು ತಾವು ನೀಡಿದ ರೂ.2 ಸಾವಿರ ಮುಖಬೆಲೆಯ ನೋಟ್ ವಾಪಾಸು ನೀಡುವಂತೆ ವಿನಂತಿಸಿಕೊಂಡು ಹಿಂಪಡೆದ ಬಳಿಕ, ಅಂಗಡಿಯವರು ನೀಡಿದ ಚಿಲ್ಲರೆ ಆಟೋದಲ್ಲಿದೆ ತರುವುದಾಗಿ ಅಂಗಡಿ ಮಾಲಕರಿಗೆ ಹೇಳಿ ಹೋದವರು ಹಿಂದಿರುಗಿ ಬಾರದೇ ರೂ.1900ವನ್ನು ಯಾಮಾರಿಸಿದ ಘಟನೆಗಳು ಕೂಡಾ ನಡೆದಿದೆ.
ಅಟೋದಲ್ಲಿ ಆಗಮಿಸುತ್ತಾರೆ ಖತರ್ನಾಕ್ ಗ್ಯಾಂಗ್ !: ತಮಿಳುನಾಡು ಮೂಲದ ಪುರುಷ ಹಾಗೂ ಮಹಿಳೆಯರ ತಂಡವೊಂದು ಗ್ರಾಹಕರ ಸೋಗಿನಲ್ಲಿ ಅಟೋ ಮೂಲಕ ತೆರಳುತ್ತಾರೆ ಈ ಖತರ್ನಾಕ್ ಗ್ಯಾಂಗ್. ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿಯ ಅನತಿ ದೂರದಲ್ಲಿಯೇ ಅಟೋ ನಿಲ್ಲಿಸಿ, ಸಾಮಾನ್ಯ ವ್ಯಕ್ತಿಗಳಂತೆ ಬಂದು ಅಂಗಡಿಯ ಒಳ ಪ್ರವೇಶಿಸಿ, ನಂತರ ಚಿಲ್ಲರೆ ನೆಪದಲ್ಲಿ ಗಮನ ಬೇರೆಡೆಗೆ ಸೆಳೆದು ಹಣ ಯಾಮಾರಿಸುವ ದೃಶ್ಯಾವಳಿಗಳು ತೆಕ್ಕಟ್ಟೆಯ ಪ್ರಮುಖ ಜವುಳಿ ಮಳಿಗೆಯೊಂದರಲ್ಲಿ ಅಳವಡಿಸಿದ ಸಿಸಿ ಟಿವಿ ಕೆಮರಾದಲ್ಲಿ ಸಂಪೂರ್ಣ ಸೆರೆಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಅಂಗಡಿ ಮಾಲಕರು ಅಂಗಡಿಯಲ್ಲಿ ಅಳವಡಿಸಿದ ಸಿಸಿ ಟಿವಿ ಕೆಮರಾ ದೃಶ್ಯಾವಳಿಗಳನ್ನು ಸಂಬಂಧಪಟ್ಟ ಪೊಲೀಸ್ ಇಲಾಖೆಯ ಗಮನಕ್ಕೂ ಕೂಡಾ ತಂದಿದ್ದಾರೆ.