ಬೆಂಗಳೂರು: ವ್ಯಕ್ತಿಯೊಬ್ಬರು ತಮ್ಮ ಅಮೂಲ್ಯವಾದ ಕಿಡ್ನಿ ಮಾರಾಟ ಮಾಡಲು ಹೋಗಿ ಸೈಬರ್ ಕಳ್ಳರ ಬಲೆಗೆ ಬಿದ್ದು 6 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಚಾರ್ಟೆಡ್ ಅಕೌಂಟೆಂಟ್ ಕಚೇರಿಯಲ್ಲಿ ಲೆಕ್ಕಪರಿಶೋಧಕ ನಾಗಿ ಕೆಲಸ ಮಾಡುತ್ತಿರುವ ಶ್ರೀನಿವಾಸ್ ವಂಚನೆಗೆ ಒಳಗಾದವರು.
ಸಾಲ ಮಾಡಿಕೊಂಡಿದ್ದ ಶ್ರೀನಿವಾಸ್ ಸಾಲಗಾರರ ಕಾಟದಿಂದ ತತ್ತರಿಸಿದ್ದರು. ಮನೆಯಲ್ಲಿದ್ದ ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲಿತ್ತು. ಬೇರೆಯವರ ಬಳಿ ದುಡ್ಡಿಗೆ ಕೈ ಚಾಚಿದರೆ ಕೀಳಾಗಿ ನೋಡುತ್ತಾರೆ ಎಂದು ಮಾರ್ಯಾದೆಗೆ ಅಂಜಿ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದರು. ಆನ್‌ಲೈನ್‌ನಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿದ್ದರು.
ವೆಬ್‌ಸೈಟ್‌ವೊಂದರಲ್ಲಿ ಯಾರಿಗಾದರೂ ತುರ್ತು ಕಿಡ್ನಿ ಬೇಕಾದರೆ ಸಂಪರ್ಕಿಸಿ ಎಂದು ಶ್ರೀನಿವಾಸ್ ತಮ್ಮ ಮೊಬೈಲ್ ನಂಬರ್ ನಮೂದಿಸಿದ್ದರು. ಇದೇ ವೇಳೆ ಅದರಲ್ಲಿದ್ದ ಲಿಂಕ್ ವೊಂದನ್ನು ಕ್ಲಿಕ್ ಮಾಡಿದಾಗ ಕಿಡ್ನಿ ಕೊಟ್ಟರೆ 2 ಕೋಟಿ ರೂ. ಕೊಡುವುದಾಗಿ ಜಾಹೀರಾತು ಹಾಕಿರುವುದನ್ನು ಗಮನಿಸಿದ್ದರು.
ಕೂಡಲೇ ಆ ಮೊಬೈಲ್ ನಂಬರ್ ಪಡೆದು ವಾಟ್ಸ್‌ಆ್ಯಪ್ ಕರೆ ಮಾಡಿ ಮಾತನಾಡಿದ್ದರು. ಈ ಪ್ರಕ್ರಿಯೆಗೆ ಹಣ ಪಾವತಿಸ ಬೇಕೆಂದು ಹೇಳಿ ಶ್ರೀನಿವಾಸ್ ಅವರಿಂದ 6 ಲಕ್ಷ ರೂ. ಲಪಟಾಯಿಸಿದ್ದರು. ಹಣ ಕಳೆದುಕೊಂಡ ಶ್ರೀನಿವಾಸ್ ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈಚಳಕ ಎಂಬುದು ಗೊತ್ತಾಗಿದೆ.
■ ಉದಯವಾಣಿ ಸಮಾಚಾರ