Advertisement

ರಿವಾರ್ಡ್‌ ಪಾಯಿಂಟ್ಸ್‌ಗಾಗಿ ಸ್ವೈಪಿಂಗ್‌ ಯಂತ್ರ ಪಡೆದು ವಂಚನೆ

10:36 AM Jan 02, 2023 | Team Udayavani |

ಬೆಂಗಳೂರು: ಬ್ಯಾಂಕ್‌ಗಳಿಂದ ಸಿಗುವ ರಿವಾರ್ಡ್‌ ಪಾಯಿಂಟ್ಸ್‌ಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ರೆಸ್ಟೋರೆಂಟ್‌ಗಳ ಹೆಸರಿನಲ್ಲಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಸ್ವೈಪಿಂಗ್‌ (ಪಿಒಎಸ್‌) ಯಂತ್ರಗಳನ್ನು ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಉತ್ತರಪ್ರದೇಶ ಮೂಲದ ನವನೀತ್‌ ಪಾಂಡೆ(34) ಬಂಧಿತ. ಆರೋಪಿಯಿಂದ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಹಾಗೂ ಇತರೆ ಪರಿಚಿತರ ಹೆಸರಿನಲ್ಲಿರುವ 110 ಡೆಬಿಟ್‌ ಮತ್ತು 110 ಕ್ರೆಡಿಟ್‌ ಕಾರ್ಡ್‌ಗಳು, 3 ಲ್ಯಾಪ್‌ ಟಾಪ್‌, 6 ಮೊಬೈಲ್‌ಗ‌ಳು, ಕಿಂಡಬೀಸ್‌ ರೆಸ್ಟೋರೆಂಟ್‌ ಹಾಗೂ ಇತರೆ 14 ವಿವಿಧ ನಕಲಿ ಸೀಲುಗಳು, ಹತ್ತಾರು ಮಂದಿ ಹೆಸರಿನಲ್ಲಿ ಬ್ಯಾಂಕ್‌ ಗಳ ಪಾಸ್‌ಬುಕ್‌ ಮತ್ತು ಚೆಕ್‌ ಪುಸ್ತಕಗಳು ಹಾಗೂ ಆರು ಮೊಬೈಲ್‌, 12 ಸಿಮ್‌ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಉತ್ತರ ಪ್ರದೇಶದಿಂದ ಬಹಳ ವರ್ಷಗಳ ಹಿಂದೆಯೆ ಬೆಂಗಳೂರಿಗೆ ಬಂದಿದ್ದು, ಬನಶಂಕರಿಯಲ್ಲಿ ವಾಸವಾಗಿದ್ದಾನೆ. ಇತ್ತೀಚೆಗೆ ಬನಶಂಕರಿ 2ನೇ ಹಂತದ ಬಿಡಿಎ ಕಾಂಪ್ಲೆಕ್ಸ್‌ ಬಳಿಯ ಕಿಂಡಬೀಸ್‌ ರೆಸ್ಟೋರೆಂಟ್‌ನ ಮಾಲೀಕ ವಿವೇಕ್‌ ಎಂಬುವರಿಗೆ ವಂಚನೆ ಮಾಡಿದ್ದಾನೆ. ಡಿ.26ರಂದು ಸಂಜೆ 4.30ರ ವೇಳೆ ವಿವೇಕ್‌ ರೆಸ್ಟೋರೆಂಟ್‌ನಲ್ಲಿರುವಾಗ ಯೆಸ್‌ ಬ್ಯಾಂಕ್‌ನ ಸಿಬ್ಬಂದಿ ಎಂದು ಹೇಳಿಕೊಂಡು ಪಾಪರೆಡ್ಡಿ ಎಂಬುವರು ಬಂದು, ಸ್ವೈಪಿಂಗ್‌ಮಿಷನ್‌ಗಾಗಿ ಅರ್ಜಿ ಸಲ್ಲಿಸಿದ್ದು, ಅದರ ಪರಿಶೀಲನೆಗೆ ಬಂದಿರುವುದಾಗಿ ಹೇಳಿದ್ದಾರೆ. ಆದರೆ, ಈ ಬಗ್ಗೆ ಅರ್ಜಿ ಸಲ್ಲಿಸಿಲ್ಲ ಎಂದು ವಿವೇಕ್‌ ತಿಳಿಸಿದ್ದಾರೆ.

ಬಳಿಕ ಬ್ಯಾಂಕ್‌ ಸಿಬ್ಬಂದಿ ಅರ್ಜಿ ಪರಿಶೀಲಿಸಿದಾಗ ನವನೀತ್‌ ಪಾಂಡೆ ಎಂಬುವರ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದು, ಅದರ ಕೆಳ ಭಾಗದಲ್ಲಿ ಫಾರ್‌ ಕಿಡಂಬೀಸ್‌ ಕಿಚನ್‌ ಎಂದು ಬರೆದಿದ್ದು, ಅದರ ಕೆಳಗೆ ಪ್ರೊಪೈಟರ್‌ ಎಂದು ಸೀಲ್‌ ಹಾಕಲಾಗಿತ್ತು. ಬಳಿಕ ಅದನ್ನು ವಿವೇಕ್‌ ಪರಿಶೀಲಿಸಿದಾಗ, ನಕಲಿ ಸೀಲ್‌ ಬಳಸಿದ್ದಾರೆ ಎಂಬುದು ಗೊತ್ತಾಗಿದೆ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸ್ನೇಹಿತರು, ಸಂಬಂಧಿಕರ ಕಾರ್ಡ್‌ಗಳು: ಆರೋಪಿಯ ವಿಚಾರಣೆ ವೇಳೆ ತನ್ನ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಇತರೆ ಪರಿಚಯಸ್ಥರ ಹೆಸರಿನಲ್ಲಿರುವ ವಿವಿಧ ಬ್ಯಾಂಕ್‌ ಗಳ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾನೆ. ಇನ್ನ ಕೆಲವರ ಬಳಿ ಅವರ ದೃಢೀಕೃತ ದಾಖಲೆಗಳನ್ನು ಪಡೆದುಕೊಂಡು ಬ್ಯಾಂಕ್‌ಗಳಲ್ಲಿ ಖಾತೆ ತೆಗೆದು ಎರಡ್ಮೂರು ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾನೆ. ಈ ರೀತಿ ಕಾರ್ಡ್‌ ಪಡೆಯಲು ಆರೋಪಿ ಖಾತೆದಾರರಿಗೆ ಮಾಸಿಕ 2-3 ಸಾವಿರ ರೂ. ಹಣ ನೀಡುತ್ತಿದ್ದ ಎಂದು ಪೊಲೀಸರು ಹೇಳಿದರು.

Advertisement

ರಿವಾರ್ಡ್‌ ಪಾಯಿಂಟ್ಸ್‌ಗೆ ಸ್ವೈಪಿಂಗ್‌ಯಂತ್ರ: ಇನ್ನು ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳನ್ನು ಬೇರೆಡೆ ಸ್ವೈಪಿಂಗ್‌ ಮಾಡಿದರೆ ಜಿಎಸ್‌ಟಿ ಹಾಗೂ ಇತರೆ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ತನ್ನ ಹೆಸರಿನಲ್ಲಿಯೇ ಸ್ವೈಪಿಂಗ್‌ ಯಂತ್ರವಿದ್ದರೆ ತೆರಿಗೆಯಿಂದ ವಿನಾಯಿತಿ ಪಡೆಯಬಹುದು. ಆದರೆ, ವಾಣಿಜ್ಯ ಉದ್ದೇಶ ಹೊರತು ಪಡಿಸಿ ಬೇರೆ ಕಾರಣಕ್ಕೆ ಸ್ವೈಪಿಂಗ್‌ಯಂತ್ರ ನೀಡುವುದಿಲ್ಲ. ಹೀಗಾಗಿ ಆರೋಪಿ, ಹೋಟೆಲ್‌, ರೆಸ್ಟೋರೆಂಟ್‌ ಗೆ ಹೋದಾಗ ಸಿಬ್ಬಂದಿ ಅಥವಾ ಮಾಲೀಕರನ್ನು ಪುಸಲಾಯಿಸಿ ಪರವಾನಗಿಯ ಫೋಟೋ ಪಡೆದು ಪಿಒಎಸ್‌ ಯಂತ್ರಕ್ಕೆ ಅರ್ಜಿ ಹಾಕುತ್ತಿದ್ದ. ಈ ವಿಚಾರ ಕೆಲ ಮಾಲೀಕರಿಗೆ ಗೊತ್ತಿತ್ತು. ಇನ್ನು ಕೆಲವಡೆ ಸಿಬ್ಬಂದಿಗೆ ಹಣ ನೀಡಿ ನಕಲು ಪಡೆಯುತ್ತಿದ್ದ. ಇನ್ನು ಈ ಯಂತ್ರದಲ್ಲಿ ಕ್ರೆಡಿಟ್‌ ಕಾರ್ಡ್‌ ಸ್ವೈಪಿಂಗ್‌ ಮಾಡಿ ಸಂಪೂರ್ಣ ಹಣ(ಸಾಲದ ಮಿತಿ) ಪಡೆದುಕೊಳ್ಳುತ್ತಿದ್ದ. ಅದು ತನ್ನ ಖಾತೆಗೆ ವರ್ಗಾವಣೆ ಆಗುತ್ತಿದ್ದಂತೆ, ನಿಗದಿತ ಅವಧಿಯನ್ನು ಡೆಬಿಟ್‌ ಕಾರ್ಡ್‌ನಲ್ಲಿ ಪಾವತಿ ಮಾಡುತ್ತಿದ್ದ. ಕೆಲ ದಿನಗಳಲ್ಲಿ ಈ ಮೂಲಕ ಬರುವ ರಿವಾರ್ಡ್‌ ಪಾಯಿಂಟ್ಸ್‌ಗಳನ್ನು ವಿವಿಧ ಮಾರ್ಗಗಳ ಮೂಲಕ ಹಣವಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದ ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ಗೊತ್ತಾಗಿದೆ. ಈತನ ಬಳಿ ಪತ್ತೆಯಾಗಿರುವ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ಮಾಲೀಕರ ವಿಚಾರಣೆ ನಡೆಸಬೇಕಿದೆ ಎಂದು ಪೊಲೀಸರು ಹೇಳಿದರು.

ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್‌, ಜಯನಗರ ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಶ್ರೀನಿವಾಸ್‌ ಮತ್ತು ಬನಶಂಕರಿ ಠಾಣಾಧಿಕಾರಿ ಗಿರೀಶ್‌ ನಾಯಕ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next