ವಿಜಯಪುರ : ಸರ್ಕಾರೇತರ ಸಂಸ್ಥೆಗಳಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ಜಿಲ್ಲೆಯ ಸೈಬರ್ ಕ್ರೈಂ ವಿಭಾದ ಪೊಲೀಸರು ಆಂಧ್ರ ಮೂಲದ ತುಮಕೂರು ಜಿಲ್ಲೆಯ ನಿವಾಸಿಗಳಾದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನೆಲೆಸಿರುವ ಆಂಧ್ರಪ್ರದೇಶದ ಅನಂತಪುರ ಮೂಲದ ಎಸ್.ಸುಧೀರಬಾಬು, ಎಸ್.ಎನ್.ಶಶಾಂಕ ಇಬ್ಬರನ್ನು ಬಂಧಿಸಿದ್ದು, ಇತರೆ 10 ಜನ ಆರೋಪಿಗಳಿಗೆ ಶೋಧ ನಡೆಸಿದ್ದಾರೆ.
ತುಮಕೂರು ಜಿಲ್ಲೆಯ ಆರೋಪಿಗಳು ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಶಶಿಕಲಾ ತಳಸದಾರ ಇವರಿಗೆ ಮಧುಗಿರಿ ನಿವಾಸಿ ಎಸ್.ಸುಧೀರಬಾಬು ಇತರೆ 10 ಜನರು ಆನ್‍ಲೈನ್ ಮೂಲಕ ಹಣ ಪಡೆದು ವಂಚಿಸಿದ್ದಾರೆ.
ಸರ್ಕಾರೇತರ ಸಂಸ್ಥೆಯನ್ನು ನಡೆಸುತ್ತಿರುವ ಶಶಿಕಲಾ ಅವರನ್ನು ಸಂಪರ್ಕಿಸಿದ ಆರೋಪಿಗಳು, ಕೇಂದ್ರ ಸರ್ಕಾರದ ಒನ್ ನೇಷನ್-ಒನ್ ಕಾರ್ಡ್ ಯೋಜನೆಯ ಕರ್ನಾಟಕ ರಾಜ್ಯದ ಗುತ್ತಿಗೆ ನಮಗೆ ಲಭ್ಯವಾಗಿದೆ. ಈ ಕೆಲಸ ಮಾಡಲು ಗುತ್ತಿಗೆ ಆಧಾರದಲ್ಲಿ ಯುವಜನರನ್ನು ನೇಮಿಸಿಕೊಳ್ಳಲಾಗುತ್ತದೆ. ಇದಕ್ಕಾಗಿ ಸಂಯೋಜಕರು, ಕಾರ್ಡ್ ಪ್ರಿಂಟರ್‍ಗಳು ಸೇರಿದಂತೆ ಇತರೆ ಕೆಲಸಗಳಿಗೆ ಸೇರಲ್ಪಡುವವರಿಂದ ತಲಾ 10 ಸಾವಿರ ರೂ. ಭದ್ರತಾ ಠೇವಣಿ, ಪ್ರವೇಶ ಪರೀಕ್ಷಾ ಶುಲ್ಕವಾಗಿ 1299 ರೂ. ಹಣ ಭರಿಸಬೇಕು ಎಂದು ತಿಳಿಸಿದ್ದಾರೆ.
ಇದಕ್ಕೆ ಒಪ್ಪಿದ ಶಶಿಕಲಾ 95,75,548 ರೂ. ಹಣವನ್ನು ಆನ್‍ಲೈನ್ ಮೂಲಕ ಪಡೆದಿದ್ದಾರೆ. ನಂತರ ವಂಚಕರು ಸುಳ್ಳು ದಾಖಲೆಗಳನ್ನು ಕಳಿಸಿದ್ದು, ಇದರಿಂದ ಬಾಧಿತ ಶಶಿಕಲಾ ಆರೋಪಿಗಳ ವಿರುದ್ಧ ನಗರದಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಸಿಇಎನ್ ಪೊಲೀಸ್ ಠಾಣೆ ಸಿಪಿಐ ರಮೇಶ ಅವಜಿ ನೇತೃತ್ವದ ಪೊಲೀಸರು, ಆರೋಪಿಗಳನ್ನು ಬಂಧಿಸಿ, 14 ಆರೋಪಿಗಳ ಬ್ಯಾಂಕ್ ಖಾತೆಗಳಲ್ಲಿದ್ದ 10 ಲಕ್ಷ ರೂ. ಹಣವನ್ನು ವಹಿವಾಟು ನಿಷ್ಕ್ರೀಯಗೊಳಿಸಿದ್ದಾರೆ.