ಬೆಂಗಳೂರು: ಆ್ಯಂಬಿಡೆಂಟ್, ಅಜಮೇರಾ ಗ್ರೂಪ್ಸ್, ಇಂಜಾಸ್ ಇಂಟರ್‌ನ್ಯಾಷನಲ್ ಸಹಿತ ವಿವಿಧ ವಂಚಕ ಕಂಪೆನಿಗಳ ವಿರುದ್ಧ ನಿಧಾನಗತಿಯ ತನಿಖೆಗೆ ರಾಜ್ಯ ಸರಕಾರದ ವಿರುದ್ಧ ಹೈಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತಂತೆ ಸಲ್ಲಿಕೆಯಾಗಿರುವ ಹಲವು ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಸರಕಾರದ ಕಾರ್ಯವೈಖರಿ ಬಗ್ಗೆ ಬೇಸರ ಹೊರಹಾಕಿತು.
ವಿಚಾರಣೆ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯ ತನಿಖಾ ಪ್ರಗತಿ ವರದಿಯನ್ನು ಸರಕಾರದ ಪರ ವಕೀಲರು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಇದನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರು ಆರೋಪಿಸಿರುವ ಕಂಪೆನಿಗಳ ಪೈಕಿ ಬಹುತೇಕ ಕಂಪೆನಿಗಳ ಆಸ್ತಿ ಜಪ್ತಿ, ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಹೂಡಿಕೆದಾರರ ಹಿತರಕ್ಷಣ (ಕೆಪಿಐಡಿ) ಕಾಯ್ದೆ-2004ರನ್ವಯ ಕ್ರಮ ಕೈಗೊಂಡಿಲ್ಲ. ನಿಮ್ಮದೇ ಅಧಿಕಾರಿಗಳು ನಿಮ್ಮ ಮಾತು ಕೇಳುತ್ತಿಲ್ಲ ಎಂದರೆ ಏನರ್ಥ, ಮಾತು ಕೇಳದ ಜಿಲ್ಲಾಧಿಕಾರಿ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ? ರಾಜ್ಯ ಸರಕಾರ ಇಷ್ಟೊಂದು ಅಸಹಾಯಕವಾಗಬಾರದು ಎಂದು ನ್ಯಾಯಪೀಠ ಚಾಟಿ ಬೀಸಿತು.
ಒಂದೆರಡು ಕಂಪೆನಿಗಳ ಆಸ್ತಿ ಜಪ್ತಿಗೆ ಸಕ್ಷಮ ಪ್ರಾಧಿಕಾರ ನೇಮಕ ಮಾಡಲಾಗಿದೆ. ಕೆಲವು ಕಂಪೆನಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ಕೆಲವು ಪ್ರಕರಣಗಳನ್ನು ಮುಂದಿನ ತನಿಖೆಗೆ ಸಿಸಿಬಿಯಿಂದ ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ತನಿಖಾ ಪ್ರಗತಿ ವರದಿಯಲ್ಲಿ ಹೇಳಲಾಗಿದೆ. ಆದರೆ ಬಹುತೇಕ ಕಂಪೆನಿಗಳ ವಿರುದ್ಧ ಕೆಪಿಐಡಿ ಕಾಯ್ದೆ-2004ರಡಿ ಕ್ರಮ ಕೈಗೊಂಡಿಲ್ಲ. ವಿಳಂಬ ಮಾಡಿದರೆ ಕಂಪೆನಿಗಳು ತಮಗೆ ಸೇರಿದ ಆಸ್ತಿಯನ್ನು ಪರಭಾರೆ ಮಾಡುವ ಅಪಾಯವಿರುತ್ತದೆ. ಆದ್ದರಿಂದ ಕಂಪೆನಿಗಳ ವಿರುದ್ಧ ಕೆಪಿಐಡಿ ಕಾಯ್ದೆಯಡಿ ಕ್ರಮ ಜರಗಿಸಿ ಮತ್ತು ಸರಕಾರದ ಪತ್ರಕ್ಕೆ ಸ್ಪಂದಿಸದ ಜಿಲ್ಲಾಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ. ಇದರ ಕುರಿತು ನ.21ಕ್ಕೆ ಅನುಪಾಲನಾ ವರದಿ ಸಲ್ಲಿಸಿ ಎಂದು ನಿರ್ದೇಶ ನೀಡಿದ ನ್ಯಾಯಪೀಠ ವಿಚಾರಣೆಯನ್ನು ನ.22ಕ್ಕೆ ಮುಂದೂಡಿತು.
ಇದೇ ವೇಳೆ ಐಎಂಎ ಕಂಪೆನಿ ವಿರುದ್ಧ ಕೆಪಿಐಡಿ ಕಾಯ್ದೆ-2004ರಡಿ ಜರಗಿಸಿರುವ ಕ್ರಮಗಳು ಕುರಿತು ಮುಂದಿನ ವಿಚಾರಣೆ ವೇಳೆಗೆ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ನ್ಯಾಯಪೀಠ ನಿರ್ದೇಶ ನೀಡಿತು.