ಉಡುಪಿ, ಫೆ. 18: ನಕಲಿ ದಾಖಲೆ ಅಪಘಾತ ವಿಮಾ ಪರಿಹಾರವನ್ನು ಲಪಟಾಯಿಸಿ ಸಂತ್ರಸ್ತರಿಗೆ 2.5 ರೂ. ಲಕ್ಷ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಉಡುಪಿಯ ವಕೀಲ ಅಲೆವೂರು ಪ್ರೇಮರಾಜ ಕಿಣಿಗೆ ಉಡುಪಿ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.
ಇದನ್ನೂ ಓದಿ:ಭಯೋತ್ಪಾದಕ ಸಂಘಟನೆಗೆ ರಹಸ್ಯ ಮಾಹಿತಿ ಸೋರಿಕೆ; ಐಪಿಎಸ್ ಅಧಿಕಾರಿ ಬಂಧನ
ಪ್ರಕರಣದ ಎರಡನೇ ಆರೋಪಿ ವಿನಯಕುಮಾರ್, ಈಗಾಗಲೇ ಮೃತಪಟ್ಟಿರುವ ಮೂರನೇ ಆರೋಪಿ ಹರೀಶ್ಚಂದ್ರ ಆಚಾರ್ಯ ಅವರೊಂದಿಗೆ ಸೇರಿ ಬೆಳ್ತಂಗಡಿ ತಾಲೂಕಿನ ನಾರಾವಿಯ ದಲಿತ ಕೂಲಿ ಕಾರ್ಮಿಕ ಸಾಧು ಮತ್ತು ಕುಟುಂಬಕ್ಕೆ ವಂಚಿಸಿ ಸುಮಾರು 2.5 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಅಪಘಾತ ವಿಮಾ ಪರಿಹಾರವನ್ನು ಕಬಳಿಸಿರುವ ಬಗ್ಗೆ ಉಡುಪಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.
ನಾರಾವಿಯ ಕೂಲಿ ಕಾರ್ಮಿಕರಾಗಿರುವ ಚಂಬು ಅವರ ಪತ್ನಿ ಕುಂದಾದು ಅವರು 2002ರ ಮೇ 13ರಂದು ಕೊಲ್ಲೂರಿಗೆಂದು ತೆರಳುತಿದ್ದಾಗ ಕಾರ್ಕಳ ಸಾಲ್ಮರದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಗಂಡ ಚಂಬು ಹಾಗೂ ಅವರ ಮಕ್ಕಳಾದ ಅಣ್ಣು, ಸಾಧು ಅಕ್ಕು ಹಾಗೂ ಕಜವೆ ಅಪಘಾತ ವಿಮಾ ಪರಿಹಾರ ಕೋರಿ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ಮೊದಲು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಅನಂತರ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು ಸಂತ್ರಸ್ತರಿಗೆ ಬಡ್ಡಿ ಸೇರಿ 2,57,549 ರೂ. ಪರಿಹಾರ ನೀಡಲು ವಿಮಾ ಕಂಪೆನಿಗೆ ತಿಳಿಸಿತ್ತು. ಕಂಪೆನಿ ಹಣವನ್ನು ನ್ಯಾಯಾಲಯದಲ್ಲಿ ಜಮೆ ಮಾಡಿತ್ತು. ಆದರೆ ಈ ಹಂತದಲ್ಲಿ ಆರೋಪಿಗಳು ಪಿರ್ಯಾದುದಾರರು, ನ್ಯಾಯಾಲಯ ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ವಂಚಿಸಿ ನಕಲಿ ದಾಖಲೆ ಹಾಗೂ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಪೂರ್ತಿ ಹಣವನ್ನು ಲಪಟಾಯಿಸಿದ್ದರು.
ಈ ಪ್ರಕರಣದಲ್ಲಿ ಶಿವಪ್ರಸಾದ್ ಆಳ್ವರನ್ನು ಕರ್ನಾಟಕ ಸರಕಾರ ವಿಶೇಷ ಸರಕಾರಿ ಅಭಿಯೋಜಕಾರರಾಗಿ ನೇಮಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಜೆ.ಎನ್. ಅವರು ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿ ಗುರುವಾರ ತೀರ್ಪು ನೀಡಿದ್ದರು. ಅದರಂತೆ ಇಂದು ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ನ್ಯಾಯಾಧೀಶರು ಮೊದಲ ಆರೋಪಿ ಪ್ರೇಮರಾಜ ಕಿಣಿ ಅವರಿಗೆ ಜೀವಾವಧಿ ಶಿಕ್ಷೆ ಎರಡನೇ ಆರೋಪಿಗೆ ಏಳು ವರ್ಷಗಳ ಶಿಕ್ಷೆ ವಿಧಿಸಿದರು.