ಬೆಂಗಳೂರು: ವಿಶ್ವದ ದೈತ್ಯ ಕಂಪನಿಗಳಲ್ಲೊಂದಾದ ಅಮೆ ಜಾನ್‌ಗೆ ಸಿನಿಮಾ ಮಾದರಿಯಲ್ಲಿ ಹ್ಯಾಕರ್ಸ್‌ಗಳು ವಂಚಿಸಿರುವ ಪ್ರಕರಣದಲ್ಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಕಳ್ಳಾಟದಲ್ಲಿ ಅಮೆರಿಕಾ ಹ್ಯಾಕರ್ ಕೈವಾಡ ವಿರುವ ಕುತೂಹಲಕಾರಿ ಅಂಶ ಹೊರಬಿದ್ದಿದೆ.
ಆರೋಪಿಗಳು ಇದೇ ದಂಧೆ ನಡೆಸಿ ಕೋಟ್ಯಂತರ ರೂ. ಸಂಪಾದಿಸಲು ಮುಂದಾಗಿದ್ದ ಸಂಗತಿ ಬಂಧಿತ ಖಾಸಗಿ ಕಾಲೇಜು ವಿದ್ಯಾರ್ಥಿ ಚಿರಾಗ್ ಗುಪ್ತ ವಿಚಾರಣೆ ವೇಳೆ ತಿಳಿದು ಬಂದಿದೆ. ಚಿರಾಗ್ ಅಮೆಜಾನ್ ವೆಬ್‌ಸೈಟ್‌ನಲ್ಲಿ ಐಷಾರಾಮಿ ಐಫೋನ್, ಲ್ಯಾಪ್‌ಟಾಪ್ ಅನ್ನು ಬುಕ್ ಮಾಡಿ ದುಡ್ಡು ಪಾವತಿಸಿ ತರಿಸಿಕೊಳ್ಳುತ್ತಿದ್ದ. ಬುಕ್ ಮಾಡಿದ ವಸ್ತು ಕೈ ಸೇರುತ್ತಿದ್ದಂತೆ ರಿಟರ್ನ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಕೂಡಲೇ ಚಿರಾಗ್ ಸಹಚರರು ಅಮೆರಿಕಾದಲ್ಲಿ ಕುಳಿತುಕೊಂಡು ಇವರಿಗೆ ನೆರವು ನೀಡುತ್ತಿದ್ದ ಹ್ಯಾಕರ್‌ಗೆ ಮಾಹಿತಿ ನೀಡುತ್ತಿದ್ದರು.
ಆತ ಅಮೆಜಾನ್ ಕಂಪನಿಯ ಸರ್ವರನ್ನೇ ಹ್ಯಾಕ್ ಮಾಡಿ ಲಾಗಿನ್ ಆಗುತ್ತಿದ್ದ. ಬಳಿಕ ಚಿರಾಗ್ ಕಳಿಸಿರುವ ವಸ್ತುಗಳು ವಾಪಾಸ್ ಕಂಪನಿಗೆ ಬಂದಿದೆ ಎಂದು ನಮೂದಿಸಿ ಅಪ್‌ಡೇಟ್ ಮಾಡುತ್ತಿದ್ದ. ವಸ್ತು ವಾಪಾಸ್ ಕಂಪನಿಗೆ ಬಂದಿದೆ ಎಂಬ ಸಂದೇಶ ಕಂಪನಿ ಸಿಬ್ಬಂದಿಗೆ ಬಂದ ಕೆಲವೇ ಸಮಯಗಳಲ್ಲಿ ಚಿರಾಗ್ ಬ್ಯಾಂಕ್ ಖಾತೆಗೆ ದುಡ್ಡು ಪುನಃ ಜಮೆಯಾಗುತ್ತಿತ್ತು. ಅಮೆಜಾನ್‌ನಿಂದ ತನ್ನ ಕೈ ಸೇರಿದ ಬೆಲೆ ಬಾಳುವ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಚಿರಾಗ್ ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ.
ಬಂದ ದುಡ್ಡಿನಲ್ಲಿ ಚಿರಾಗ್ ಹಾಗೂ ಆತನ ಗ್ಯಾಂಗ್‌ನ ಸಹಚರರು ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗೆ ವಸ್ತುಗಳು ವಾಪಾಸಾಗದೇ ದುಡ್ಡು ಮಾತ್ರ ಕಡಿತಗೊಂಡಿರುವ ಸಂಗತಿ ಅಮೆಜಾನ್ ಕಂಪನಿ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಕೂಡಲೇ ಅಮೆಜಾನ್ ಕಂಪನಿ ಸಿಬ್ಬಂದಿ ಯಶವಂತಪುರ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು. ಕಾರ್ಯಾಚರಣೆಗೆ ಇಳಿದ ಖಾಕಿ ಪಡೆ ಕೆಲ ದಿನಗಳಲ್ಲೇ ಆರೋಪಿಗಳನ್ನು ಹೆಡೆಮುರಿಕಟ್ಟಿ ವಿಚಾರಣೆ ನಡೆಸಿದಾಗ ಈ ಕಳ್ಳಾಟ ಬಹಿರಂಗಗೊಂಡಿದೆ. ಆರೋಪಿಗಳಿಂದ 30 ಲಕ್ಷ ರೂ.ನ 20ಕ್ಕೂ ಹೆಚ್ಚಿನ ವಸ್ತು ಜಪ್ತಿ ಮಾಡಲಾಗಿದೆ. ಅಮೆಜಾನ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕೈವಾಡವಿದೆಯೇ? ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಅಮೆರಿಕಾದಲ್ಲಿ ಬಚ್ಚಿಕೊಂಡಿರುವ ಹ್ಯಾಕರ್ ಭಾರತದಾದ್ಯಂತ ಇಂತಹ ಯುವಕರನ್ನು ಬಳಸಿಕೊಂಡು ವಿವಿಧ ವೆಬ್‌ಸೈಟ್ ಹ್ಯಾಕ್ ಮಾಡಿ ಕೋಟ್ಯಂತರ ರೂ. ದೋಖಾ ಮಾಡಿರುವ ಶಂಕೆ ವ್ಯಕ್ತವಾಗಿದೆ. ಚಿರಾಗ್ ಗ್ಯಾಂಗ್‌ಗೆ ಅಮೆರಿಕಾದ ಹ್ಯಾಕರ್ ತನ್ನ ಸಣ್ಣ ಸುಳಿವೂ ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಆತನ ಮಾಹಿತಿ ಕಲೆ ಹಾಕುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.