Advertisement

ಯುವತಿ ಹೆಸರಲ್ಲಿ ಚಾಟಿಂಗ್‌; 15 ಲಕ್ಷ ಪಂಗನಾಮ

01:15 PM Jan 10, 2020 | Suhan S |

ಹುಬ್ಬಳ್ಳಿ: ಯುವತಿಯೊಬ್ಬಳ ಹೆಸರಿನಲ್ಲಿ ಫೇಸ್‌ ಬುಕ್‌ನಲ್ಲಿ ಪರಿಚಯ ಮಾಡಿಕೊಂಡು ಚಾಟಿಂಗ್‌ ಮೂಲಕವೇ ನಂಬಿಸಿ ವಿವಾಹಿತ ವ್ಯಕ್ತಿಯೊಬ್ಬರಿಗೆ ಸುಮಾರು 15 ಲಕ್ಷ ರೂ. ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ತಾಲೂಕಿನ ಗಂಗಿವಾಳ ಗ್ರಾಮದ ರುದ್ರಗೌಡ ಪಾಟೀಲ ಎಂಬುವರೆ ವಂಚನೆಗೊಳಗಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಹಂತ ಹಂತವಾಗಿ ಸುಮಾರು 15 ಲಕ್ಷ ರೂ. ಕಳೆದುಕೊಂಡಿದ್ದಾರೆ. ಇದೀಗ ನ್ಯಾಯಕ್ಕಾಗಿ ಧಾರವಾಡದ ಸೈಬರ್‌ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.

ಘಟನೆ ವಿವರ: ಕಳೆದ ಮೂರು ವರ್ಷಗಳ ಹಿಂದೆ ಫೆಸ್‌ ಬುಕ್‌ನಲ್ಲಿ ಸುಷ್ಮಾ ಎನ್ನುವ ಹೆಸರಿನಲ್ಲಿ ರುದ್ರಗೌಡಅವರಿಗೆ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು. ಮೆಸೆಂಜರ್‌ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ಚಾಟಿಂಗ್‌ ಮಾಡುತ್ತಿದ್ದರು. ಮನೆಯ ಸಮಸ್ಯೆ, ಗೆಳೆಯರಿಂದ ಪಡೆದ ಹಣ ಮರಳಿಸಬೇಕು ಎಂದೆಲ್ಲಾ ಹೇಳಿ ಚಾಟಿಂಗ್‌ ಮೂಲಕ ನಂಬಿಸಿ ಹಣ ಬೇಡಿಕೆಯಿಟ್ಟು ಪಡೆದಿದ್ದಾರೆ. ಈ ಕುರಿತು ಕರೆ ಮಾಡಿ ಮಾತನಾಡಬೇಕು ಎಂದು ರುದ್ರಗೌಡ ಬೇಡಿಕೆಯಿಟ್ಟಾಗ ತಾನು ಮೂಕಿಯಾಗಿದ್ದೇನೆ ಎಂದು ನಂಬಿಸಿದ್ದಾರೆ. ಖುದ್ದಾಗಿ ಭೇಟಿಯಾಗಬೇಕು ಎಂದಾಗಲೂ ಒಂದಲ್ಲಾ ಒಂದು ನೆಪ ಹೇಳಿ ನುಣುಚಿಕೊಂಡಿದ್ದಾರೆ. ಹಂತ ಹಂತವಾಗಿ ನೀಡಿದ ಹಣ ಮರಳಿ ಕೊಡಿ ಎಂದಾಗ ಇಲ್ಲದ ನೆಪ ಹೇಳಲಾರಂಭಿಸಿದ್ದು, ಮೋಸ ಹೋಗಿದ್ದು ಅರಿವಿಗೆ ಬಂದಿದೆ.

ಪ್ರತಿಷ್ಠಿತ ಕುಟುಂಬದ ಸೋಗು: ಚಾಟಿಂಗ್‌ ಮೂಲಕವೇ ತಾನು ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ್ದು, ತಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಂಜಿನಿಯರ್‌, ತಾಯಿ ಮುಖ್ಯ ಶಿಕ್ಷಕಿಯಾಗಿದ್ದಾರೆ. ಸಾಕಷ್ಟು ಕಾಫಿ ತೋಟವಿದೆ. ಒಬ್ಬಳೇ ಮಗಳು ಎಲ್ಲಾ ಆಸ್ತಿ ತನಗೆ ಸೇರುತ್ತದೆ. ತಾನು ಮೂಕಿಯಾಗಿರುವುದರಿಂದ ನೀವು ಬಾಳು ಕೊಡಬೇಕು ಎಂದು ನಂಬಿಸಿದ್ದಾರೆ. ಮೇಲಾಗಿ ಪ್ರತಾಪ ಎನ್ನುವ ಹೆಸರಿನ ಯುವಕ ಇದಕ್ಕೆ ಪೂರಕವಾಗಿ ಸುಷ್ಮಾ ಹೇಳಿದ್ದು ಸತ್ಯ, ಸದ್ಯಕ್ಕೆ ಸಮಸ್ಯೆ ಇದೆ ಎಂದು ನಂಬಿಸಿದ್ದಾನೆ.

ಹತ್ತು ಅಕೌಂಟ್‌ಗಳಿಗೆ ಜಮೆ :  ಪ್ರತಿ ಬಾರಿಯೂ ಚಾಟಿಂಗ್‌ ಮೂಲಕವೇ ಒಂದಲ್ಲಾ ಒಂದು ಕಾರಣ ಹೇಳಿ ಹಣ ಪಡೆದುಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ವಿವಿಧ ಹೆಸರಲ್ಲಿ ಒಟ್ಟು ಹತ್ತು ಬ್ಯಾಂಕ್‌ ಖಾತೆಗಳಿಗೆ ಹಣ ಪಡೆದಿದ್ದಾರೆ. ಪುಷ್ಪಾ, ಲಕ್ಷ್ಮೀ, ಪ್ರತಾಪ, ಡಿ.ಎಸ್. ನಿತಿನ್‌, ಗಂಗಾಧರ, ಡಿ. ರವಿ, ಸಾಕ್ಷಿ, ರಕ್ಷಿತಾ, ಪುನೀತ ಹಾಗೂ ಅಕ್ಷತಾ ಎನ್ನುವ ಹೆಸರಿಗೆ ಹಣ ಪಡೆದಿದ್ದಾರೆ. ವಿಚಿತ್ರ ಎಂದರೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಸುಷ್ಮಾ ಹೆಸರಿನಲ್ಲಿ ಹಣವನ್ನೇ ಪಡೆದಿಲ್ಲ. ಕೇವಲ ಚಾಟಿಂಗ್‌ ಮೂಲಕವೇ ಇಷ್ಟೆಲ್ಲಾ ಹಣ ಕಳೆದುಕೊಂಡಿರುವುದಾಗಿ ರುದ್ರಗೌಡ ಹೇಳುತ್ತಾರೆ.

Advertisement

ಸುಷ್ಮಾ’ ಎಂಬುದು ಕೇವಲ ಸೃಷ್ಟಿಯೇ? :  ಮಾತನಾಡಬೇಕು, ಮುಖತಃ ಭೇಟಿಯಾಗಬೇಕು ಎನ್ನುವ ನಾಲ್ಕೈದು ಪ್ರಶ್ನೆಗೆ ಒಂದಲ್ಲ ಒಂದು ನೆಪ ಹೇಳಿ ಪಾರಾಗಿರುವುದರಿಂದ “ಸುಷ್ಮಾ’ ಎಂಬುದು ಕೇವಲ ಸೃಷ್ಟಿಯೇ ಎಂಬ ಪ್ರಶ್ನೆ ಕಾಡುತ್ತಿದೆ. ಹಣ ಜಮೆ ಮಾಡಿದ ಖಾತೆಯ ವಿವರ ಕಲೆ ಹಾಕಿದಾಗ ಎಲ್ಲರೂ ಹಾಸನ ಮೂಲದವರು ಎಂಬುದು ಗೊತ್ತಾಗಿದೆ. ಮದುವೆಯಾಗಿದೆ ಎಂದು ತಿಳಿಸಿದರೂ ಮೆಸೇಜ್‌ ಮಾಡುವುದು ಬಿಡಲಿಲ್ಲ. ಸುಷ್ಮಾ ಸಂಬಂಧಿ ಎಂದು ಪ್ರತಾಪ ಕರೆ ಮಾಡಿ ಹಣಕ್ಕೆ ಬೇಡಿಕೆಯಿಡುತ್ತಿದ್ದ. ಇದೊಂದು ವಂಚನೆಯ ತಂಡ ಎಂಬುದು ರುದ್ರಗೌಡ ಆರೋಪ.

ಕುಟುಂಬ ಸಮಸ್ಯೆ ಎನ್ನುವ ಕಾರಣಕ್ಕೆ ಹಂತ ಹಂತವಾಗಿ ಹಣ ನೀಡಿದೆ. ಮರಳಿ ನೀಡುವುದಾಗಿ ಹೇಳುತ್ತಿದ್ದರು. ನನಗೆ ಮದುವೆಯಾಗಿದೆ ಇನ್ನೊಂದು ಮದುವೆಯಾಗುವುದಿಲ್ಲ ನನ್ನ ಹಣ ವಾಪಸ್‌ ಕೊಡಿ ಎಂದು ಕೇಳಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ದೂರು ದಾಖಲು ಮಾಡಿದ್ದೇನೆ. ಸ್ವಂತ ಹಾಗೂ ಒಂದಿಷ್ಟು ಸಾಲ ಮಾಡಿ ಹಣ ಕೊಟ್ಟಿದ್ದೇನೆ.  -ರುದ್ರಗೌಡ ಪಾಟೀಲ, ವಂಚನೆಗೊಳಗಾದ ವ್ಯಕ್ತಿ

Advertisement

Udayavani is now on Telegram. Click here to join our channel and stay updated with the latest news.

Next