Advertisement

ಎಸಿಬಿ ಹೆಸರಿನಲ್ಲಿ ವಂಚನೆ: ಬಿಡಿಎ ಅಧಿಕಾರಿಗಳಿಗೆ ವಂಚನೆ; ಮೂವರ ಬಂಧನ

08:28 PM Mar 17, 2022 | Team Udayavani |

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳಿಂದ ದಾಳಿಗೊಳಗಾಗಿದ್ದ ಬಿಡಿಎ ಅಧಿಕಾರಿಗಳಿಗೆ ಪ್ರಕರಣದಲ್ಲಿ ಆರೋಪ ಮುಕ್ತಗೊಳಿಸುವುದಾಗಿ ನಂಬಿಸಿ ಹತ್ತು ಲಕ್ಷ ರೂ. ವಂಚಿಸಿದ ಮೂವರು ಹೈಗ್ರೌಂಡ್ಸ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಬನಶಂಕರಿ ನಿವಾಸಿ ಪ್ರವೀಣ್‌(27), ನಾಗರಭಾವಿ ನಿವಾಸಿ ಚೇತನ್‌(33) ಮತ್ತು ದೊಮ್ಮಲೂರು ನಿವಾಸಿ ಮನೋಜ್‌ ಕುಮಾರ್‌ (46) ಬಂಧಿತರು.

ವಿಜಯ್‌ಕುಮಾರ್‌ ಎಂಬಾತ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ಚೇತನ್‌ ಬಿಡಿಎ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್‌ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಇತರೆ ಆರೋಪಿಗಳು ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೇಲೆ ಎಸಿಬಿ ಅಧಿಕಾರಿಗಳು,ಮಹದೇವಗೌಡ, ಗೋವಿಂದರಾಜು ಮತ್ತು ಅರವಿಂದ್‌ ಎಂಬವರ ಮೇಲೆ ದಾಳಿ ನಡೆಸಿದ್ದರು.

Advertisement

ಈ ವಿಚಾರ ತಿಳಿದ ಆರೋಪಿ ಚೇತನ್‌, ತನ್ನ ಸಹಚರರಿಗೆ ತಮ್ಮ ಕಚೇರಿಯ ಅಧಿಕಾರಿಗಳ ಮೊಬೈಲ್‌ ನೀಡಿ, ವಂಚನೆಗೆ ಸಂಚು ರೂಪಿಸಿದ್ದ. ಹೀಗಾಗಿ ಆರೋಪಿಗಳು ಕೆಲ ದಿನಗಳ ಹಿಂದೆ ಮೂವರು ದಾಳಿಗೊಳಗಾದ ಬಿಡಿಎ ಅಧಿಕಾರಿಗಳ ಪೈಕಿ ಅರವಿಂದ್‌ರನ್ನು ಸಂಪರ್ಕಿಸಿದ್ದು, ಎಸಿಬಿಯಲ್ಲಿ ಹಿರಿಯ ಅಧಿಕಾರಿಗಳ ಪರಿಚಯವಿದ್ದು, ತಮ್ಮ ಮೇಲಿನ ಆರೋಪ ಮುಕ್ತಗೊಳಿಸುತ್ತೇವೆ. ಅದಕ್ಕಾಗಿ 10 ಲಕ್ಷ ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಬಳಿಕ ಅರವಿಂದ್‌ ಇತರೆ ಇಬ್ಬರು ಅಧಿಕಾರಿಗಳ ಜತೆ ಚರ್ಚಿಸಿ, ಆರೋಪಿಗಳಿಗೆ ಸದಾಶಿವನಗರದ ಹೋಟೆಲ್‌ವೊಂದರಲ್ಲಿ ಹತ್ತು ಲಕ್ಷ ರೂ. ನೀಡಿದ್ದರು.ಕೆಲ ದಿನಗಳ ನಂತರ ಆರೋಪಿಗಳಿಗೆ ಎಸಿಬಿಯಲ್ಲಿ ಯಾವುದೇ ಅಧಿಕಾರಿಗಳು ಪರಿಚಯವಿಲ್ಲ ಎಂಬುದು ಗೊತ್ತಾಗಿದೆ. ಹಣ ವಾಪಸ್‌ಗೆ ಕರೆ ಮಾಡಿದಾಗ, ಬೆದರಿಕೆ ಹಾಕಿದ್ದಾರೆ. ನಂತರ ಫೋನ್‌ ಸ್ವಿಚ್‌x ಆಫ್ ಮಾಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಅರವಿಂದ್‌ ದೂರು ನೀಡಿದ್ದರು. ಮೂವರ ಬಂಧಿಲಾಗಿದೆ. ಮತ್ತೂಬ್ಬನಿಗಾಗಿ ಶೋಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕೆಐಎಡಿಬಿ ಅಧಿಕಾರಿಗೆ ವಂಚನೆ :

ಮತ್ತೂಂದು ಪ್ರಕರಣದಲ್ಲಿ ಎಸಿಬಿ ದಾಳಿಗೊಳಗಾಗಿದ್ದ ಕೆಐಎಡಿಬಿ ಅಧಿಕಾರಿಯೊಬ್ಬರಿಗೆ ಪ್ರಕರಣದಲ್ಲಿ ಆರೋಪ ಮುಕ್ತಗೊಳಿಸುವುದಾಗಿ ನಂಬಿಲಿ ಒಂದೂವರೆ ಲಕ್ಷ ರೂ. ಪಡೆದುಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಸ್ಥಳೀಯ ನಿವಾಸಿ ಧರ್ಮೇಂದ್ರ (35) ಬಂಧಿತ. ಆರೋಪಿ ಇತ್ತೀಚೆಗೆ ಕೆಐಎಡಿಬಿ ಅಧಿಕಾರಿಯೊಬ್ಬರ ಮೇಲೆ ದಾಳಿ ನಡೆಸಲಾಗಿತ್ತು. ಅವರನ್ನು ಸಂಪರ್ಕಿಸಿದ ಧರ್ಮೇಂದ್ರ ಒಂದೂವರೆ ಲಕ್ಷ ರೂ. ನೀಡಿದರೆ ಆರೋಪ ಮುಕ್ತಗೊಳಿಸಲು ಸಹಾಯ ಮಾಡುತ್ತೇನೆ ಎಂದು ಹಣ ಪಡೆದುಕೊಂಡು ವಂಚಿಸಿದ್ದ ಎಂದು ಪೊಲೀಸರು ಹೇಳಿದರು.

ಈ ರೀತಿಯ ವಂಚನೆಗಳ ಬಗ್ಗೆ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಎಸಿಬಿ ಮನವಿ ಮಾಡಿದೆ. ಇತ್ತೀಚೆಗೆ ಎಸಿಬಿ ಹೆಸರಿನಲ್ಲಿ ಕೆಲ ವ್ಯಕ್ತಿಗಳು ಎಸಿಬಿ ದಾಳಿಗೊಳಗಾದ ಅಧಿಕಾರಿಗಳನ್ನು ಸಂಪರ್ಕಿಸಿ, ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ನಂಬಿಸಿ ವಂಚಿಸುತ್ತಿದ್ದಾರೆ. ಹೀಗಾಗಿ ಸರ್ಕಾರಿ ಅಧಿಕಾರಿಗಳು ಇಂತಹ ವ್ಯಕ್ತಿಗಳ ಬಗ್ಗೆ ಜಾಗೃತರಾಗಿರಬೇಕು. ಯಾರಾದರೂ ಅಪರಿಚಿತ ವ್ಯಕ್ತಿಗಳು ಹಣಕ್ಕೆ ಬೇಡಿಕೆ ಇಟ್ಟರೆ ಕಚೇರಿಗೆ ಮಾಹಿತಿ ನೀಡುವಂತೆ ಎಸಿಬಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ನಿರ್ಮಿತಿ ಕೇಂದ್ರದ ಅಧಿಕಾರಿಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ಎಸಿಬಿಯಲ್ಲಿ ದೂರು ನೀಡುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಈ ಸಂಬಂಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸಿಬಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next