ಉಡುಪಿ: ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಯಿಂದ ಹಣ ಪಡೆದು ವಂಚಿಸಿದ ಎರಡು ಪ್ರಕರಣಗಳು ನಡೆದಿದ್ದು, ಒಟ್ಟು 14 ಲ.ರೂ.ಗಳನ್ನು ಲಪಟಾಯಿಸಲಾಗಿದೆ.
ಪ್ರಕರಣ ಒಂದು:
ಶ್ವೇತಾ ಅವರನ್ನು ಅಪರಿಚಿತರು ಟೆಲಿಗ್ರಾಂ ಅಪ್ಲಿಕೇಶನ್ ಮೂಲಕ ಸಂಪರ್ಕಿಸಿ ಮನೆಯಿಂದಲೇ ಮಾಡುವ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೆಲವು ಟಾಸ್ಕ್ಗಳನ್ನು ನೀಡಿರುತ್ತಾರೆ. ಟಾಸ್ಕ್ನಿಂದ ಬಂದ ಹಣವನ್ನು ಪಡೆಯಲು ಅಪರಿಚಿತರು ತಿಳಿಸಿದ ಬ್ಯಾಂಕ್ ಖಾತೆಗೆ ಹಣವನ್ನು ಪಾವತಿಸಿದ್ದು, ಫೆ.8ರಿಂದ 16ರ ವರೆಗೆ ಆರೋಪಿಗಳು ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ ಒಟ್ಟು 12,85,000 ರೂ. ಅನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಿ ಮೋಸ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಪ್ರಕರಣ ಎರಡು:
ಕೇಶವ ರಾವ್ ಅವರ ತಂದೆ ಉಡುಪಿಯ ಬ್ಯಾಂಕೊಂದರಲ್ಲಿ ಖಾತೆ ಹೊಂದಿದ್ದರು. ಫೆ.21ರಂದು ಅವರಿಗೆ ಕೆವೈಸಿ ಅಪ್‌ಡೇಟ್ ಮಾಡುವ ಬಗ್ಗೆ ಸಂದೇಶ ಬಂದಿದ್ದು, ಆ ನಂಬರಿಗೆ ಅವರು ದೂರವಾಣಿ ಕರೆ ಮಾಡಿದ್ದರು. ಕರೆ ಸ್ವೀಕರಿಸಿದಾತ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಆಧಾರ್ ಸಂಖ್ಯೆ ಮಾತ್ರವಲ್ಲದೆ ಅವರ ಮೊಬೈಲಿಗೆ ಬಂದ ಒಟಿಪಿ ಪಡೆದು ಅವರ ಖಾತೆಯಿಂದ 1,42,000 ರೂ. ಅನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದ.
ಎರಡೂ ಪ್ರಕರಣಗಳು ಉಡುಪಿಯ ಸೆನ್ ಠಾಣೆಯಲ್ಲಿ ದಾಖಲಾಗಿವೆ.