Advertisement

ಇನ್‌ಸ್ಟಾಗ್ರಾಂನಲ್ಲಿ ಪರಿಚಯ; ಮಹಿಳೆಗೆ ಏಳು ಲಕ್ಷ ರೂ. ವಂಚನೆ; ಆರೋಪಿ ಸೆರೆ

12:36 AM Nov 26, 2022 | Team Udayavani |

ಕಾಸರಗೋಡು: ಅಮೆರಿಕದಲ್ಲಿ ಡಾಕ್ಟರ್‌ ಎಂದು ಇನ್‌ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡು ಮಹಿಳೆಯಿಂದ 7 ಲಕ್ಷ ರೂ. ಲಪಟಾಯಿಸಿದ ಯುವಕನನ್ನು ಸೈಬರ್‌ ಸೆಲ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಉತ್ತರ ಪ್ರದೇಶದ ಬರೇಲಿ ನಿವಾಸಿ ಮೊಹಮ್ಮದ್‌ ಶಾರೀಕ್‌ (19)ನನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ವೈಭವ್‌ ಸಕ್ಸೇನಾ ಅವರ ಮಾರ್ಗದರ್ಶನ, ಕಾಸರಗೋಡು ಸೈಬರ್‌ ಸೆಲ್‌ ಠಾಣೆಯ ಇನ್‌ಸ್ಪೆಕ್ಟರ್‌ ಪ್ರೇಮ್‌ಸದನ್‌ ನೇತೃತ್ವದಲ್ಲಿ ಎಎಸ್‌ಐ ಪ್ರೇಮ್‌ರಾಜ್‌, ಸಿಪಿಒಗಳಾದ ಸಬಾದ್‌ ಅಶ್ರಫ್‌, ಹರಿಪ್ರಸಾದ್‌ ತಂಡ ರಾಯಬರೇಲಿಯಿಂದ ಬಂಧಿಸಿ ಕಾಸರಗೋಡಿಗೆ ಕರೆತಂದಿದೆ.

ಮಧೂರು ಗ್ರಾ.ಪಂ. ನಿವಾಸಿ, ಸ್ನಾತಕೋತ್ತರ ಪದವೀಧರೆ 36ರ ಹರೆಯದ ಮಹಿಳೆ ನೀಡಿದ ದೂರಿನಂತೆ ಸೈಬರ್‌ ಸೆಲ್‌ ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣವೇನು
ವಂಚನೆ ಗೀಡಾಗಿರುವ ಸ್ನಾತಕೋತ್ತರ ಪದವೀಧರೆ ಮಹಿಳೆಗೆ ಅರ್ಹತೆಗೆ ತಕ್ಕಂತೆ ಉದ್ಯೋಗ ಲಭಿಸಿರಲಿಲ್ಲ. ಈಕೆಯ ಪತಿ ಕೂಲಿ ಕಾರ್ಮಿಕನಾಗಿದ್ದಾರೆ. ಈ ದಂಪತಿಗೆ 14 ವರ್ಷದ ಪುತ್ರನೂ ಇದ್ದಾನೆ. ಆ ಬಳಿಕ ಈ ದಂಪತಿಗೆ ಮಕ್ಕಳಾಗಲಿಲ್ಲ. ಈ ಕಾರಣದಿಂದ ಆಕೆ ಮಾನಸಿಕವಾಗಿ ನೊಂದುಕೊಂಡಿದ್ದರು. ಈ ಮಧ್ಯೆ ಆಕೆಯ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಯುವತಿಯೋರ್ವಳ ಹೆಸರಿನಲ್ಲಿ ಆರೋಪಿ ಮೊಹಮ್ಮದ್‌ ಶಾರೀಕ್‌ ಆಕೆಯನ್ನು ಸಂಪರ್ಕಿಸಿ ಪರಿಚಯಿಸಿ ಪ್ಲಸ್‌ ಟುನಲ್ಲಿ ನಿನ್ನ ಜತೆ ಕಲಿತ ಹುಡುಗಿ ತಾನು ಎಂದು ಹೇಳಿ ಚಾಟಿಂಗ್‌ ಆರಂಭಿಸಿದ್ದ. ಆತ್ಮೀಯತೆ ಬೆಳೆದ ಬಳಿಕ ತನಗೆ ಎರಡನೇ ಬಾರಿ ಗರ್ಭಿಣಿಯಾಗಲು ಸಾಧ್ಯವಾಗುತ್ತಿಲ್ಲವೆಂದು ಮಹಿಳೆ ತನ್ನ ಬೇಸರವನ್ನು ಹಂಚಿಕೊಂಡಿದ್ದಳು. ಅದಕ್ಕೆ, ಅಮೆರಿಕದಲ್ಲಿ ತನಗೆ ತಿಳಿದಿರುವ ಓರ್ವ ತಜ್ಞ ವೈದ್ಯರಿದ್ದು, ಅವರಿಗೆ ಈ ವಿಷಯ ತಿಳಿಸಿ ಅಗತ್ಯ ಔಷಧ ತರಿಸಿಕೊಡುವೆ ಎಂದು ಶಾರೀಕ್‌ ನಂಬಿಸಿದ್ದ. ಮಾತ್ರವಲ್ಲ, ವೈದ್ಯರ ಹೆಸರಿನ ಇನ್ನೊಂದು ಖಾತೆಯ ಮೂಲಕ ಆತ ಆ ಮಹಿಳೆಯನ್ನು ಸಂಪರ್ಕಿಸಿ ಗರ್ಭ ಧರಿಸಲು ಅಗತ್ಯ ಔಷಧಗಳನ್ನು ಕಳುಹಿಸಿಕೊಡುವುದಾಗಿ ತಿಳಿಸಿದ್ದ. ಈ ಮಧ್ಯೆ ಆಕೆ ಮತ್ತೆ ಗರ್ಭಿಣಿಯಾಗಿದ್ದು, ಅದನ್ನೂ ಆಕೆ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಳು.

ಇದಕ್ಕೆ ವೈದ್ಯನ ಸೋಗಿನಲ್ಲಿ ಪ್ರತಿಕ್ರಿಯಿಸಿದ್ದ ಶಾರೀಕ್‌, ನಿನ್ನ ಪರಿಚಯ ಆದ ಬಳಿಕ ನನಗೆ ಭಾರೀ ಆರ್ಥಿಕ ಆದಾಯ ಕುದುರುತ್ತ ಬಂದಿದೆ. ಮಾತ್ರವಲ್ಲದೆ ಗರ್ಭಿಣಿಯಾಗಿರುವ ಸಂತೋಷಕ್ಕೆ ನಿನಗೆ 15 ಸಾವಿರ ಪೌಂಡ್‌ನ‌ ಪಾರ್ಸೆಲ್‌ ಕಳುಹಿಸಿಕೊಡುವೆ ಎಂದು ತಿಳಿಸಿದ್ದ. ಕೆಲವು ದಿನಗಳ ಬಳಿಕ ಪಾರ್ಸೆಲ್‌ ಸಂಸ್ಥೆಯ ಹೆಸರಿನಲ್ಲಿ ಮಹಿಳೆಗೆ ಸಂದೇಶ ಬಂದಿದ್ದು, ಪಾರ್ಸೆಲ್‌ ಪಡೆಯಲು 5 ಲಕ್ಷ ರೂ. ಪಾವತಿಸಬೇಕೆಂದು ತಿಳಿಸಲಾಗಿತ್ತು. ಆಗ ತನ್ನಲ್ಲಿ ಅಷ್ಟೊಂದು ಹಣವಿಲ್ಲ, ಮೊದಲು ಎರಡೂವರೆ ಲಕ್ಷ ರೂ. ಪಾವತಿಸಿ ಅನಂತರ ಬಾಕಿ ಹಣ ಕಳುಹಿಸಿಕೊಡುವೆ ಎಂದು ಆಕೆ ತಿಳಿಸಿದ್ದರು. ಆ ಬಳಿಕ ವೈದ್ಯರ ಹೆಸರಿನಲ್ಲಿ ಆರೋಪಿ ಆಕೆಯನ್ನು ಪದೇಪದೆ ಸಂಪರ್ಕಿಸಿ ಏಳು ಲಕ್ಷ ರೂ. ನೀಡಬೇಕು, ಇಲ್ಲದಿದ್ದಲ್ಲಿ ಪರಿಸ್ಥಿತಿ ನೆಟ್ಟಗಿರದು ಎಂದು ಬೆದರಿಕೆಯೊಡ್ಡಿದ್ದ. ಈ ಬೆದರಿಕೆಯಿಂದಾಗಿ ಆಕೆ ತನ್ನಲ್ಲಿದ್ದ ಚಿನ್ನದೊಡವೆ ಇತ್ಯಾದಿ ಅಡವಿರಿಸಿ 7 ಲಕ್ಷ ರೂ. ಕಳುಹಿಸಿಕೊಟ್ಟಿದ್ದಳು. ಸ್ವಲ್ಪ ದಿನಗಳ ಬಳಿಕ ಆಕೆಗೆ ತಾನು ವಂಚನೆಗೊಳಗಾದ ಸತ್ಯ ಅರಿವಾಗಿದ್ದು, ಸೈಬರ್‌ ಸೆಲ್‌ಗೆ ದೂರು ನೀಡಿದ್ದರು.

Advertisement

ಇದರಂತೆ ಕಾಸರಗೋಡು ಪೊಲೀಸರು ಬರೇಲಿಗೆ ತೆರಳಿ ಅಲ್ಲಿನ ಪೊಲೀಸರ ನೆರವಿನೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಹರಿಯಾಣದಲ್ಲಿ ಒಂದೇ ಆಧಾರ್‌ ಕಾರ್ಡ್‌ ಬಳಸಿ ಎಂಟು ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದನು. ಮಹಿಳೆ ಕಳುಹಿಸಿಕೊಟ್ಟ ಹಣವನ್ನು ಆ ಖಾತೆಯಲ್ಲಿ ಜಮಾಯಿಸಿದ್ದನೆಂದು ತನಿಖೆಯಿಂದ ತಿಳಿದು ಬಂದಿದೆ.

ಇನ್ನೊಬ್ಬ ಆರೋಪಿಗಾಗಿ ಶೋಧ
7 ಲಕ್ಷ ರೂ. ವಂಚಿಸಿದ ಇದೇ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಉತ್ತರ ಪ್ರದೇಶದ ಬರೇಲಿ ನಿವಾಸಿ ನಸ್ರತ್‌ಗಾಗಿ ಸೈಬರ್‌ ಸೆಲ್‌ ಶೋಧ ನಡೆಸುತ್ತಿದೆ. ಶಾರೀಕ್‌ಗಾಗಿ ಇನ್‌ಸ್ಟಾಗ್ರಾಂನಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ಚಾಟ್‌ ಟೈಪ್‌ ಮಾಡಿ ಮಹಿಳೆಗೆ ಕಳುಹಿಸಿಕೊಟ್ಟಿರುವುದು ನಸ್ರತ್‌ ಎಂಬುದಾಗಿ ತನಿಖೆಯಿಂದ ತಿಳಿದು ಬಂದಿದೆ. ಶಾರೀಕ್‌ಗೆ ಹಿಂದಿ ಭಾಷೆ ಮಾತ್ರವೇ ತಿಳಿದಿದ್ದು, ಇಂಗ್ಲಿಷ್‌ ತಿಳಿದಿಲ್ಲ. ಅದಕ್ಕಾಗಿ ಆತ ತನ್ನ ಇನ್‌ಸ್ಟಾಗ್ರಾಂನಲ್ಲಿ ಇಂಗ್ಲಿಷ್‌ನಲ್ಲಿ ಚಾಟ್‌ ಮಾಡಲು ನಸ್ರತ್‌ನನ್ನು ಬಳಸಿಕೊಂಡಿದ್ದನೆಂದು ಪೊಲೀಸರು ಹೇಳಿದ್ದಾರೆ.

ಬಂಧಿತ ಆರೋಪಿಯ ಎಲ್ಲ 8 ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ. ನುಸ್ರತ್‌ನ ಕುರಿತಾದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಶಾರೀಕ್‌ನನ್ನು ನ್ಯಾಯಾಂಗ ಬಂಧನದಿಂದ ಮತ್ತೆ ಕಸ್ಟಡಿಗೆ ಪಡೆದುಕೊಳ್ಳಲು ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡು: 2,527 ಗ್ರಾಂ ಚಿನ್ನ ಸಹಿತ ಇಬ್ಬರು ವಶಕ್ಕೆ
ಕಾಸರಗೋಡು: ವಿದೇಶದಿಂದ ಕಲ್ಲಿಕೋಟೆ ಕರಿಪೂರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವ್ಯಕ್ತಿಗಳಿಂದ 2,527 ಗ್ರಾಂ ಚಿನ್ನವನ್ನು ಕಸ್ಟಮ್ಸ್‌ ತಂಡ ವಶಪಡಿಸಿಕೊಂಡಿದೆ. ಈ ಸಂಬಂಧ ಕುಂಬಳೆಯ ಅಬ್ದುಲ್‌
ಅಸೀಸ್‌(26) ಮತ್ತು ಪಡನ್ನ ನಿವಾಸಿ ಫೈಜಲ್‌ ಪೂಕೋಯ ತಂಙಳ್‌(30)ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ವಿಚಾರಣೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next