Advertisement

ಹುಣಸೂರು: ಅಮಾಯಕರಿಗೆ ಆರ್.ಟಿ.ಓ. ಕಚೇರಿಯಲ್ಲಿ ಕೆಲಸದ ಆಮಿಷ: ಲಕ್ಷಾಂತರ ರೂ. ವಂಚನೆ

11:55 AM Jul 17, 2022 | Team Udayavani |

ಹುಣಸೂರು: ಯುವಕರಿಗೆ ಸಾರಿಗೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಘಟನೆ ನಡೆದಿದ್ದು, ನಕಲಿ ಆರ್.ಟಿ.ಓ. ಇನ್ಸ್ ಪೆಕ್ಟರ್ ವಿರುದ್ದ ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಅಣ್ಣೂರು ಗ್ರಾಮದ ನಿವಾಸಿ ಎಸ್.ಎಸ್.ಎಲ್.ಸಿ. ವರೆಗೆ ಓದಿರುವ ಆಕಾಶ್ ಎಂಬಾತ ನಕಲಿ ನೇಮಕಾತಿ ಆದೇಶ ಪತ್ರ ನೀಡಿ ವಂಚಿಸಿದ ನಕಲಿ ಆರ್.ಟಿ.ಓ. ಇನ್ಸ್ ಪೆಕ್ಟರ್.

ನಾಮ ಹಾಕಿಸಿಕೊಂಡವರಿವರು: ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಳ್ಳಿಮುದ್ದನಹಳ್ಳಿ ನಿವಾಸಿ ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ರಂಗಸ್ವಾಮಿ, ಈತನ ಸಹೋದರ ಟ್ಯಾಕ್ಸಿ ಚಾಲಕ ಶಂಕರ್ ಹಾಗೂ ಇವರ ಸಂಬಂಧಿ ಅಶೋಕ್ ವಂಚನೆಗೊಳಗಾದವರು.

ಘಟನೆ ವಿವರ: ಪಿರಿಯಾಪಟ್ಟಣ ಬಸ್ ಡಿಪೋದಲ್ಲಿ ನಿರ್ವಾಹಕನಾಗಿರುವ ರಂಗಸ್ವಾಮಿಗೆ 2021 ಅಕ್ಟೋಬರ್‌ನಲ್ಲಿ ಮಲೈ ಮಹದೇಶ್ವರ ಬೆಟ್ಟದ ರೂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪರಿಚಯವಾದ ಆಕಾಶ್ ತಾನು ಚಾಮಾಜನಗರ ಆರ್.ಟಿ.ಓ.‌ ಕಚೇರಿಯ ಬ್ರೇಕ್ ಇನ್ಸ್ ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದಾನೆ. ತನಗೆ ಹಿರಿಯ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆಯ ನೇಮಕಾತಿ ಪ್ರಾಧಿಕಾರದ ಅಧಿಕಾರಿಗಳು ಆಪ್ತರಾಗಿದ್ದು, ನೀವು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುವ ಬದಲು ಆರ್.ಟಿ.ಓ. ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡಿ ಎಂದು ಆಸೆ ಹುಟ್ಟಿಸಿ, ಬಳಿಕ ನಿಮ್ಮ ಕಡೆಯ ಹುಡುಗರಿದ್ದರೆ ಹೇಳಿ ಸಾರಿಗೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ತನ್ನ ಮೊಬೈಲ್ ನಂಬರ್ ನೀಡಿದ್ದಾನೆ. ಕಾರು ಚಾಲಕನಾಗಿರುವ ಕಂಡಕ್ಟರ್ ರಂಗಸ್ವಾಮಿ, ಸಹೋದರ ಶಂಕರ್ ತಾನು ಸಹ ಕೆ.ಎಸ್.ಆರ್.ಟಿ.ಸಿ. ಯಲ್ಲಿ ಕಂಡಕ್ಟರ್ ಆಗಬಹುದೆಂದು ಆಕಾಶ್ ನನ್ನು ಸಂಪರ್ಕಿಸಿದ್ದಾರೆ. ಡಿಸೆಂಬರ್‌ನಲ್ಲಿ ರಂಗಸ್ವಾಮಿ ಮನೆಗೆ ತೆರಳಿದ ಆಕಾಶ್ ರಂಗಸ್ವಾಮಿಯವರ ತಂದೆ-ತಾಯಿಯನ್ನು ಭೇಟಿ ಮಾಡಿ ನಿಮ್ಮ ಮಕ್ಕಳಿಗೆ ಸರಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿದ್ದಾನೆ.

18.58 ಲಕ್ಷ ಪಂಗನಾಮ: ಕೊನೆಗೆ ರಂಗಸ್ವಾಮಿ ಮತ್ತು ಅವರ ಸಂಬಂಧಿ ಆಶೋಕ್‌ಗೆ ಆರ್.ಟಿ.ಓ. ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಹುದ್ದೆ ಹಾಗೂ ಶಂಕರನಿಗೆ ಆರ್.ಟಿ.ಓ. ಕಚೇರಿಯಲ್ಲಿ ಜೀಪ್ ಚಾಲಕನ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ನಕಲಿ ಇನ್ಸ್ ಪೆಕ್ಟರ್ ಆಕಾಶ್ ಹುಣಸೂರು ನಗರದ ಹೆದ್ದಾರಿ ಬದಿಯ ಬಾಲಾಜಿ ಪ್ಯಾಲೆಸ್‌ನಲ್ಲಿ 2021ರ ಡಿಸೆಂಬರ್ 12 ರಂದು ರೂಂ ಮಾಡಿಕೊಂಡಿದ್ದು,  ಮೂವರಿಂದ ಒಟ್ಟು 16 ಲಕ್ಷ ರೂ. ಪಡೆದಿದ್ದಾನೆ.

Advertisement

ಮೂರು ದಿನಗಳ ನಂತರ ಮತ್ತೆ ಮೂವರಿಗೂ ನೇಮಕಾತಿ ಪತ್ರ ಹಾಗೂ ಐ.ಡಿ. ಕಾರ್ಡ್ ನೀಡಿ ಅವರನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಲಷ್ಕರ್ ಠಾಣೆ ಸಮೀಪದ ಯೂನಿಫಾರಂ ಮಾರಾಟ ಮಾಡುವ ಅಂಗಡಿಯೊಂದರಲ್ಲಿ ತಾನೇ ಆರ್.ಟಿ.ಓ. ಇನ್ಸ್ ಪೆಕ್ಟರ್, ಚಾಲಕನ ಸಮವಸ್ತ್ರ ಖರೀದಿಸಿ, ಕೊಟ್ಟು ಅಮಾಯಕರಿಂದ ಮತ್ತೆ 2.58 ಲಕ್ಷ ರೂ. ಪಡೆದಿದ್ದಾನೆ. ಐ.ಡಿ.ಕಾರ್ಡ್, ನೇಮಕಾತಿ ಆದೇಶ ಪತ್ರ ಸಿಕ್ಕ ಖುಷಿಯಲ್ಲಿ ಮೂವರು ವಾಪಸ್ ತೆರಳಿದ್ದರು.

ವಂಚನೆ ಬಯಲು: ಮಾರನೇ ದಿನ ಆರ್.ಟಿ.ಓ. ಕಚೇರಿಯಲ್ಲಿ ಕೆಲಸ ಸಿಕ್ಕ ಸಂತಸದಲ್ಲಿ ರಂಗಸ್ವಾಮಿ, ಶಂಕರ್, ಅಶೋಕ್ ಚಾಮರಾಜನಗರಕ್ಕೆ ಮೂವರು ತೆರಳಿ ಆರ್.ಟಿ.ಓ. ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ತಾವು ಹೊಸದಾಗಿ ಕೆಲಸಕ್ಕೆ ಸೇರಿದ್ದು, ಡ್ಯೂಟಿ ರಿಪೋರ್ಟ್ ಕಾಫಿ ಹಾಗೂ ಐ.ಡಿ.ಕಾರ್ಡ್ ತೋರಿಸಿದ್ದಾರೆ. ಅಲ್ಲಿನ ಅಧಿಕಾರಿಗಳು ಇದು ನಕಲಿ ಎಂದು ತಿಳಿಸಿದ್ದಾರೆ.

ದೂರು ದಾಖಲು: ಅಂದಿನಿಂದಲೂ ಆಕಾಶ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಅಣ್ಣೂರಿಗೆ ಹೋಗಿ ವಿಚಾರಿಸಿದ ವೇಳೆ ನಿಮ್ಮ ಹಣ ವಾಪಾಸ್ ಕೊಡುತ್ತೇನೆಂದು ನಂಬಿಸಿ ಕಳುಹಿಸಿದ್ದಾನೆ. ನಂತರದಲ್ಲಿ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇದರಿಂದ ಹಣ ಕಳೆದುಕೊಂಡ ಮೂವರು ಘಟನೆ ನಡೆದ ಸ್ಥಳ ಹುಣಸೂರು ನಗರ ಠಾಣಾ ವ್ಯಾಪ್ತಿಯದ್ದೆಂದು ತಿಳಿದು ಶಂಕರ್ ನಗರ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕ್ರಮ ವಹಿಸದ ಆರ್.ಟಿ.ಓ.ಇಲಾಖೆ: ಆಕಾಶ್ ಖಾಸಗಿ ಕಾರುಗಳಲ್ಲಿ ತೆರಳಿ ತಾನು ಆರ್.ಟಿ.ಓ. ಇನ್ಸ್ ಪೆಕ್ಟರ್ ಎಂದು ಎಲ್ಲೆಡೆ ಹೇಳಿಕೊಂಡು ಸಮವಸ್ತ್ರದಲ್ಲೇ ಕೇರಳ, ಮಡಿಕೇರಿ, ಮೈಸೂರು, ನಂಜನಗೂಡು ಹೆದ್ದಾರಿಯಲ್ಲಿ ಕಾರು ನಿಲ್ಲಿಕೊಂಡು ವಾಹನ ತಪಾಸಣೆ ಮಾಡುತ್ತಿರುವ ಬಗ್ಗೆ ಸ್ಥಳೀಯ ಆರ್.ಟಿ.ಓ. ಅಧಿಕಾರಿಗಳಿಗೆ ಕಳೆದ ಒಂದು ವರ್ಷದ ಹಿಂದೆಯೇ ಫೋಟೋ ಸಹಿತ ಮಾಹಿತಿ ಸಿಕ್ಕಿತ್ತಾದರೂ ಸಹ ಯಾವುದೇ ಕ್ರಮಕ್ಕೆ ಅಧಿಕಾರಿಗಳು ಮುಂದಾಗದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next